ಕಡತಗಳು ನಾಪತ್ತೆಯಾಗುತ್ತವೆ; ತಾಲೂಕು ಕಚೇರಿಯಲ್ಲಿ ಇಲಿ, ಹೆಗ್ಗಣಗಳಿವೆಯಾ?: ಅಕ್ರಮ-ಸಕ್ರಮ ಸಂತ್ರಸ್ತರ ಪ್ರಶ್ನೆ


ಬೆಳ್ತಂಗಡಿ : ತಾಲೂಕಿನಲ್ಲಿ 70 ಸಾವಿರ ಅಕ್ರಮ- ಸಕ್ರಮ ಅರ್ಜಿದಾರರು ಅಲೆದಾಡುತ್ತಿದ್ದಾರೆ, ಕೃಷಿಕರಿಗೆ ಅಕ್ರಮ -ಸಕ್ರಮ
ಭೂಮಂಜೂರಾತಿಯ ಪ್ರಕಾರ ಯಾವುದೇ ಹಕ್ಕುಪತ್ರಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಅಕ್ರಮ-ಸಕ್ರಮ ಸಮಿತಿ ರಚನೆಯಾಗಿದ್ದರೂ
ಸಿಟ್ಟಿಂಗ್ ಗಳು ಮರಿಚಿಕೆಯಾಗಿದೆ. ಎಲ್ಲಾ ಅಕ್ರಮ ಸಕ್ರಮ ಕಡತಗಳನ್ನು 6 ತಿಂಗಳೊಳಗಾಗಿ ವಿಲೇವಾರಿ ಮಾಡುವುದಾಗಿ ಜೂ 17ರ ಒಳಗಾಗಿ ತಹಶೀಲ್ದಾರರು ಲಿಖಿತವಾಗಿ ತಿಳಿಸಬೇಕೆಂದು ಮನವಿ ಸಲ್ಲಿಸಿದ್ದು ನಿರೀಕ್ಷೆಯಲ್ಲಿದ್ದೇವೆ, ಇಲ್ಲವಾದಲ್ಲಿ ಜೂ 26ರಂದು ತಾಲೂಕು ಕಛೇರಿ ಎದುರು ಬೃಹತ್ ಹಕ್ಕೊತ್ತಾಯ ಸಭೆ ಏರ್ಪಡಿಸಲಿದ್ದೇವೆ ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಇದರ ಅಧ್ಯಕ್ಷ ಶ್ರೀಧರ ಗೌಡ ಕೆ ಎಚ್ಚರಿಕೆ ನೀಡಿದ್ದಾರೆ.
ನೊಂದ ಅಕ್ರಮ-ಸಕ್ರಮ ಅರ್ಜಿದಾರರ ಪರವಾಗಿ ಸೋಮವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದ್ದು ಕೃಷಿಕರು ಸ್ವಯಂ ಪ್ರೇರಿತರಾಗಿ ನಿರ್ಣಯಿಸಿರುತ್ತಾರೆ.
ಅಧಿಕಾರಿಗಳು ಭೂಮಂಜೂರಾತಿಗಾಗಿ ಸರ್ವೆ ನಡೆಸಲು ಆ್ಯಪ್ ಒಂದನ್ನು ರಚಿಸಿದ್ದು ಇದು ಕೃಷಿಕರಿಗೆ ಮರಣ ಶಾಸನದಂತಾಗಿದೆ, ಅರ್ಜಿದಾರನು ಅರ್ಜಿ ಸಲ್ಲಿಸುವ ವೇಳೆ ನಮೂದಿಸಿದ ಸರ್ವೆ ನಂಬ್ರವನ್ನು ಬಿಟ್ಟು ಬೇರೆ ಸರ್ವೆ ನಂಬ್ರವನ್ನು ಅಳತೆ ಮಾಡುವುದಿಲ್ಲ,
ಅರ್ಜಿ ಸ್ವೀಕರಿಸಿದ ಅಧಿಕಾರಿಯ ತಪ್ಪಿನಿಂದ ಅಥವಾ ಅರ್ಜಿದಾರ ಕೃಷಿಕನ ಅಜ್ಞಾನದ ಕಾರಣದಿಂದ ಸರ್ವೆ ನಂಬ್ರಗಳು ತಪ್ಪಾಗಿರಬಹುದು ಆ ಕಾರಣದಿಂದಲೆ ಅರ್ಜಿಯನ್ನು ವಜಾ ಮಾಡುತ್ತಿರುವುದು ಕೃಷಿಕರಿಗೆ ತಾಲಿಬಾನ್ ಕಾನೂನಿನಂತಾಗಿದೆ ಎಂದು ಆರೋಪಿಸಿದ ಶ್ರೀಧರ ಗೌಡ ಈ ನಿಯಮವನ್ನು ಬದಲಾಯಿಸಲೇ ಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ 2018ರಲ್ಲಿ ಅರ್ಜಿ ಸ್ವೀಕರಿಸುವ ವೇಳೆಗೆ ಅರ್ಜಿದಾರನ ಪ್ರಾಯ ನಮೂದಾಗಿರುವ ಅರ್ಜಿದಾರನ ಆಧಾರ್ ಪ್ರತಿಯನ್ನು ಪಡೆದು 100ರೂ. ಶುಲ್ಕವನ್ನು ಸ್ವೀಕರಿಸಿ ಪ್ರಸ್ತುತ 01-01-1984ರ ಮೊದಲು ಜನಿಸಿದ ಕೃಷಿಕನಿಗೆ ಮಾತ್ರ ಭೂಮಂಜೂರಾತಿ ಮಾಡುವುದಾಗಿ ಅಥವಾ ಸರ್ವೆ ನಡೆಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ, ಬೆಳ್ತಂಗಡಿ ತಾಲೂಕಿನ ಕೃಷಿಕರು ಯಾರು ಹೊಸತಾಗಿ ಒತ್ತುವರಿಯನ್ನಾಗಿ ಮಾಡಿರುವುದಿಲ್ಲ. ತಮ್ಮ ಅಜ್ಜ ಮುತ್ತಜ್ಞ ಕಾಲದಿಂದ ಕುಟುಂಬದ ಸ್ವಾಧೀನದಲ್ಲಿರುವ ಜಮೀನನ್ನು ತಂದೆ ಬಾಯಿ ಮಾತಿನಲ್ಲಿ ವಿಭಾಗ ಮಾಡಿ ಅನುಭವಿಸುತ್ತಿದ್ದಾರೆ ಪ್ರಸ್ತುತ ಮಕ್ಕಳ ಪ್ರಾಯದ ಕಾರಣಕ್ಕೆ ಅರ್ಜಿಯನ್ನು ವಜಾ ಮಾಡಿದರೆ ಆ ಅರ್ಜಿದಾರ ಎಲ್ಲಿ ವಾಸ್ತವ್ಯ ಮಾಡಬೇಕು ಮತ್ತು ಎಲ್ಲಿ ಕೃಷಿಯನ್ನು ಮಾಡಬೇಕು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಷ್ಠೀಕರಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸಮಾಲೋಚನೆ ನಡೆಸಿದಾಗ 94ಸಿ ಮನೆ ನಿವೇಶನ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಕಂದಾಯ ನಿರೀಕ್ಷಕರ ವರದಿಯಾಗಿದ್ದು ತಾಲೂಕು ಕಛೇರಿಯಲ್ಲಿ ವಿಚಾರಿಸಿದಾಗ ಅರ್ಜಿದಾರರ ಕಡತಗಳು ಕಛೇರಿಯಲ್ಲಿ ಇರುವುದಿಲ್ಲ ಎಂದು ಸತಾಯಿಸುತ್ತಿದ್ದಾರೆ , ತಾಲೂಕು ಕಚೇರಿಯಲ್ಲಿ ಇಲಿ, ಹೆಗ್ಗಣಗಳಿವೆಯಾ ಗೊತ್ತಿಲ್ಲ ಎಂದು ದೂರಿರುತ್ತಾರೆ.
ತಾಲೂಕು ಕಛೇರಿಯ ಅಧಿಕಾರಿಗಳು ಮನೆ ನಿವೇಶನದ ಮಂಜೂರಾತಿ ಕಡತಗಳನ್ನು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಕಾಡುತಿದೆ. ಮತ್ತು ತಾಲೂಕು ಕಛೇರಿಯಲ್ಲಿ ಮಧ್ಯವರ್ತಿಗಳನ್ನು ಹೊರತುಪಡಿಸಿ ಅರ್ಜಿದಾರರಿಗೆ ಪ್ರವೇಶನೆ ಇಲ್ಲ ಎಂಬ ಭಾವನೆ ನಮಗೆ ಮೂಡುತ್ತಿದೆ ಬ್ರೋಕರ್ ಗಳನ್ನು ಅಧಿಕಾರಿಗಳೇ ನೇಮಿಸಿದ್ದಾರ? ಎಂಬ ಪ್ರಶ್ನಿಸುತ್ತಾ ಶ್ರೀಧರ ಗೌಡ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಅದೆಷ್ಟು ವರ್ಷಗಳಿಂದ ತಾಲೂಕನ್ನು ಪೋಡಿ ಮುಕ್ತ ತಾಲೂಕಾಗಿ ಘೋಷಿಸುವುದಾಗಿ ಪತ್ರಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾರೆ ಆದರೆ ಈ ನಿಟ್ಟಿನಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ‘ಪೋಡಿ’ ಹೋಟೆಲ್ ಗಳಲ್ಲಿ ಮಾತ್ರ ಸಿಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ಲಾಟಿಂಗ್ ಸಮಸ್ಯೆಯಿಂದ ವಿಭಾಗ ಪತ್ರ ಮಾಡಿಸಲಾಗದೆ, ಮಾರಾಟ ಮಾಡಲಾಗದೆ, ಮನೆಯೂ ಕಟ್ಟಲಾಗದೆ ಅರ್ಜಿದಾರರು ನರಳುತ್ತಿದ್ದಾರೆ, ಇದರಿಂದಾಗಿ ಸರ್ಕಾರಕ್ಕೆ ಅಪಾರ ನಷ್ಟವಾಗುತ್ತಿದ್ದರೂ ಸರ್ಕಾರ ನಿಷ್ಕ್ರೀಯವಾಗಿರುವುದು ಆಶ್ಚರ್ಯಕರ ಎಂದಿದ್ದಾರೆ.
70 ಸಾವಿರ ಅರ್ಜಿದಾರರೆಂದರೂ 1, 40,000 ಮತದಾರರು ರಾಜಕೀಯ ಪಕ್ಷಗಲೇ ಎಚ್ಚೆತ್ತುಕೊಳ್ಳಿ. ಕೃಷಿಕರ ಹೋರಾಟವನ್ನು ಹತ್ತಿಕ್ಕುವಲ್ಲಿ ನೀವು ಸಮರ್ಥರಿದ್ದೀರಿ ಆದರೆ ಕೃಷಿಕರ ನೋವು ಮತ್ತು ಅಸಮಾಧಾನಗಳನ್ನು ಎಷ್ಟು ದಿನ ನೀವು ತಡೆ ಹಿಡಿಯುವಿರಿ ಮತ್ತು ಕೃಷಿಕರು ಎಷ್ಟು ದಿನ ಸಹಿಸಿಕೊಂಡರು ಅಕ್ರಮ ಸಕ್ರಮ ಸಮಿತಿಯಲ್ಲಿ ಎರಡು ಪಕ್ಷಗಳ ಸದಸ್ಯರಿರುವಾಗ ಈ ಮೌನ ಯಾಕೆ? ಎಂದು ಪ್ರಶ್ನಿಸಿರುವ ಹೋರಾಟಗಾರ ಶ್ರೀಧರ ಗೌಡ ಕೃಷಿಕರ ಆಕ್ರೋಶದ
ಕಟ್ಟೆ ಹೊಡೆಯುವ ಮುನ್ನ ಎಚ್ಚೆತ್ತುಕೊಳ್ಳಿ ಕೃಷಿಕರಿಗೆ ನ್ಯಾಯ ನೀಡಿ ಎಂದು ಒತ್ತಾಯಿಸಿದ್ದಾರೆ. ಜೂನ್ 26ರಂದು ಅಸಂಘಟಿತ ಕೃಷಿಕರು ಸ್ವಯಂ ಪ್ರೇರಿತರಾಗಿ ನಡೆಸುವ ಹಕ್ಕೊತ್ತಾಯ ಸಭೆಯನ್ನು ಎಲ್ಲಾ ಪಕ್ಷಗಳು, ಸಂಘಟನೆಗಳು ಬೆಂಬಲಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಸರ್ವೆ ಆ್ಯಪ್ ಮತ್ತು ವಯಸ್ಸಿನ ವಿಚಾರಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರಾದ ಕೃಷ್ಣಭೈರೇ ಗೌಡರಿ ಅವರಿಗೆ ಜೂನ್ 17ರಿಂದ ಪತ್ರ ಚಳುವಳಿಯನ್ನು ನಡೆಸಲಿದ್ದೇವೆ ಎಂದು ಶ್ರೀಧರ ಗೌಡ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಜಗನ್ನಾಥ ಗೌಡ, ಆನಂದ ಗೌಡ, ಬಾಲಕೃಷ್ಣ ಗೌಡ, ಬಾಲಕೃಷ್ಣ ಗೌಡ ಬಂದಾರು ಉಪಸ್ಥಿತರಿದ್ದರು.
Post Comment