ಗ್ರಾ.ಪಂ. ಆಡಳಿತದ ನಿದ್ದೆ ಬಿಡಿಸಲು ಗ್ರಾಮಸಭೆಯಲ್ಲಿ ಕಂಬ್ಲಿ ಹೊದ್ದು ಮಲಗಿ ವಿನೂತನ ಪ್ರತಿಭಟನೆ; ಚಾಪೆ,ಕಂಬ್ಲಿ,ತಲೆದಿಂಬಿನೊಂದಿಗೆ ಗ್ರಾಮಸಭೆಗೆ ಬಂದ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ
ಬೆಳ್ತಂಗಡಿ : ಪ್ರತೀ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗಾಗಿ ಕೈಗೊಂಡ ನಿರ್ಣಯಗಳು ಜಾರಿಯಾಗುವುದಿಲ್ಲ ಅಥವಾ ಸುದೀರ್ಘ ವಿಳಂಬವಾಗುತ್ತಿದೆ ಅಧಿಕಾರಿಗಳು , ಜನಪ್ರತಿನಿಧಿಗಳು ಗಾಢ ನಿದ್ದೆಯಲ್ಲಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದ ಗ್ರಾಮಸಭೆಯ ವೇದಿಕೆಯ ಮುಂದೆ ಚಾಪೆ, ತಲೆ ದಿಂಬು ಹಾಕಿ ಕಂಬ್ಲಿ ಹೊದ್ದು ಮಲಗಿ ವಿನೂತನವಾಗಿ ಪ್ರತಿಭಟಿಸಿ ಗಮನ ಸೆಳೆದ ಪ್ರಸಂಗ ಶನಿವಾರ ನಡೆಯಿತು. ಗ್ರಾಮಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅಧ್ಯಕ್ಷತೆಯಲ್ಲಿ ಲಾಯಿಲಾ ಗ್ರಾಮಪಂಚಾಯತ್ ಗ್ರಾಮಸಭೆಯು ಶನಿವಾರ ನಡೆಯಿತು. ಸಿಡಿಪಿಒ ಪ್ರಿಯಾ ಆಗ್ನೇಸ್ ನೋಡಲ್ ಅಧಿಕಾರಿಯಾಗಿದ್ದರು.
ಈ ಸಂದರ್ಭ ಗ್ರಾಮಸ್ಥರ ಸಮಸ್ಯೆ, ಬೇಡಿಕೆಗಳಿಗೆ ತುರ್ತು ಸ್ಪಂದನೆ ಸಿಗುತ್ತಿಲ್ಲ, ಗ್ರಾಮಸಭೆಗಳಲ್ಲಿ ಕೈಗೊಂಡ ಬಹುತೇಕ ನಿರ್ಣಯಗಳು ಜಾರಿಯಾಗುವುದಿಲ್ಲ , ನಿರ್ಣಯಗಳಿಗೆ ಬೆಲೆಯೇ ಇಲ್ಲ, ಪಂಚಾಯತ್ ರಾಜ್ ಕಾಯ್ದೆಯನ್ವಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗ್ರಾಮಸ್ಥರ ಪರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶೇಖರ್ ಆರೋಪಿಸಿ ಸದಸ್ಯರು ರಾಜಿನಾಮೆ ನೀಡಿ ಎಂದು ಒತ್ತಾಯಿಸಿದರು. ಗ್ರಾಮಪಂಚಾಯತ್ ಆಡಳಿತ ಮತ್ತು ತಾಲೂಕು ಆಡಳಿತದ ಅಧಿಕಾರಿಗಳ ನಿದ್ರಾವಸ್ಥೆಯನ್ನು ಖಂಡಿಸಿ ಗ್ರಾಮಸಭೆಯ ವೇದಿಕೆಯ ಮುಂದೆ ಚಾಪೆ ಹಾಕಿ ಮಲಗಿ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಶೇಖರ್ ಲಾಯಿಲಾ ಅವರೆತ್ತಿದ ಪ್ರಶ್ನೆಗಳಿಗೆ ಬೆಂಬಲ ಸೂಚಿಸಿ ಗ್ರಾಮಪಂಚಾಯತ್ ಅಧ್ಯಕ್ಷೆ , ಹಾಗೂ ಸದಸ್ಯರನ್ನು ಮತ್ತು ಪಂ ಅಭಿವೃದ್ಧಿ ಅಧಿಕಾರಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸುರೇಶ್ , ಹರೀಶ್ ಎಲ್, ಹರೀಶ್, ಸೆಲೀಂ ಮುಂತಾದವರು ಶೇಖರ್ ಪ್ರಸ್ತಾಪಿಸಿದ ವಿಷಯಗಳಿಗೆ ಬೆಂಬಲಿಸಿ ಬಗ್ಗೆ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸಭೆಯ ನೋಡಲ್ ಅಧಿಕಾರಿಯವರಲ್ಲಿ ಉತ್ತರ, ಸ್ಪಷ್ಟನೆ,ಪರಿಹಾರಗಳನ್ನು ಕೇಳಿದರು. ತಾಲೂಕು ಮಟ್ಟದ ಅಧಿಕಾರಿಗಳು ಬಂದು ಉತ್ತರ ಕೊಡಲಿ ಇಲ್ಲದಿದ್ದಲ್ಲಿ ನಾನು ರಾತ್ರಿಯಾದರೂ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕಂಬ್ಲಿ ಹೊದ್ದು ಮಲಗಿ ಪ್ರತಿಭಟನೆ ವ್ಯಕ್ತಪಡಿಸಿದರು.
ಈ ಸಂದರ್ಭ ಮನೆಯಲ್ಲಿ ವಾಸ್ತವ್ಯವಿರುವವರು ನಿವೇಶನಗಳ ನಿಜವಾದ ವಾರಸುದಾರರೆ ಎನ್ನುವುದನ್ನು ಹೇಗೆ ಹೇಳುತ್ತೀರಿ? ಎಂದು ಪ್ರಶ್ನಿಸಿ ಹಾಗಾದರೆ ಬರೆದು ಕೊಡಿ ಎಂದು ಸುರೇಶ್ ಲಾಯಿಲಾ ಮುಂತಾದವರು ಒತ್ತಾಯಿಸಿದರು. ಅನೇಕ ವರ್ಷಗಳಿಂದ ನಿವೇಶನ ರಹಿತ ಬಡವರಿಗೆ ನಿವೇಶನ ನೀಡದೆ ನಿರ್ಲಕ್ಷ್ಯ ತೋರಲಾಗಿದೆ, ಆದರೆ ಗ್ರಾಮಪಂಚಾಯತ್ ಸದಸ್ಯರು ಮತ್ತು ಸದಸ್ಯರು ಬೇನಾಮಿ ನಿವೇಶನ ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಭೂಮಾಫಿಯಾದ ರೀತಿಯಲ್ಲಿದೆ ಎಂದು ಶೇಖರ್ ಆರೋಪಿಸಿದರು. ಇದೇ ಸಂದರ್ಭ ನೇತಾಜಿ ಬಡಾವಣೆ 1ನೇ ವಾರ್ಡ್ ಪಡ್ಲಾಡಿಯಲ್ಲಿ ಅರ್ಹ ನಿವೇಶನರಹಿತರಿಗೆ ಹಂಚದ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಗ್ರಾ.ಪಂ.ಆಡಳಿತವನ್ನು ಎಚ್ಚರಿಸಲು ಅಚ್ಚರಿಯ ರೀತಿಯಲ್ಲಿ ಚಾಪೆ ಹಾಸಿ ಮಲಗಿ ಪ್ರತಿಭಟನೆ ಆರಂಭಿಸಿದ ಶೇಖರ್ ತಾಲೂಕು ಪಂಚಾಯತ್ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸದಿದ್ದಲ್ಲಿ ರಾತ್ರಿಯಾದರೂ ಇಲ್ಲಿಂದ ಹೋಗುವುದಿಲ್ಲ ಎಂದು ಹೇಳಿ ಹಿಡಿದ ಪಟ್ಟು ಬಿಡಲಿಲ್ಲ. ಅಕ್ರಮ ನಿವೇಶನಗಳ ಸರ್ವೆ ಮಾಡಿ ಪಟ್ಟಿ ಮಾಡಿ ಪೊಲೀಸ್ ರಕ್ಷಣೆಯಲ್ಲಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿರುವ ಬಗ್ಗೆ ಪಿಡಿಓ ಮಾಹಿತಿ ನೀಡಿದರು.
ಗ್ರಾಮಪಂಚಾಯತ್ ವ್ಯಾಪ್ತಿಯ 1ನೇ ವಾರ್ಡಿನ ನೇತಾಜಿ ಬಡಾವಣೆಗೆ ಭೇಟಿ ಕೊಟ್ಟು ಪರಿಶೀಲಿಸಲಾಗಿದೆ 87 ನಿವೇಶನಗಳ ಪೈಕಿ 42 ನಿವೇಶನಗಳು ಖಾಲಿಯಾಗಿಯೇ ಇದೆ, 26 ನಿವೇಶನಗಳಲ್ಲಿ ಮನೆ ಇದ್ದು ಕುಟುಂಬಗಳು ವಾಸ್ತವ್ಯವಿರುವುದು ಕಂಡು ಬಂದಿದೆ ಎಂದು ಸಭೆಗೆ ಹಕ್ಕುಪತ್ರ ಹೊಂದಿದ ಫಲಾನುಭವಿಗಳ ಪಟ್ಟಿಯನ್ನು ಓದಲಾಯಿತು.ಪಟ್ಟಿ ಓದಿದಾಗ ಇದು ನಕಲಿ ಪಟ್ಟಿ ಎಂದು ಶೇಖರ್ ಲಾಯಿಲಾ ಮತ್ತೆ ತರಾಟೆಗೆ ತೆಗೆದುಕೊಂಡರು. ನೇತಾಜಿ ಬಡಾವಣೆ ನಿವೇಶನ 2012ರಲ್ಲಿ ಆಗಿದ್ದು ಇದು ಈ ಅವಧಿಯದ್ದಲ್ಲ, ನಮಗೆ ಬಡವರ ಮೇಲೆ ಕಾಳಜಿ ಇದೆ, ಯಾರೋ ಮಾಡಿ ನಮ್ಮ ಮೇಲೆ ಆರೋಪ ಹೊರಿಸುವುದು ಬೇಡ ಎಂದು ಸದಸ್ಯ ಅರವಿಂದ್ , ಪ್ರಸಾದ್ ಶೆಟ್ಟಿ ಏಣಿಂಜೆ ಮತ್ತಿತರ ಸದಸ್ಯರು ಸ್ಪಷ್ಟನೆ ನೀಡಿದರು.ಇದಕ್ಕೆ ಶೇಖರ್ ಆಕ್ಷೇಪಿಸಿ ಈ ಸಮಸ್ಯೆಯನ್ನು ಮುಗಿಸಲು ಇಷ್ಟು ವರ್ಷ ಬೇಕಿತ್ತಾ ಎಂದು ಮರು ಪ್ರಶ್ನೆ ಹಾಕಿದರು.
ಇಡೀ ಗ್ರಾಮಸಭೆ ಗೊಂದಲದ ಗೂಡಾಗಿ ಬಂದ ಗ್ರಾಮಸ್ಥರಲ್ಲಿ ಬಹುತೇಕರು ಎದ್ದು ಹೋದರು. ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲಾ ಪಟ್ಟು ಹಿಡಿದ ಪರಿಣಾಮ ಮಾಹಿತಿ ನೀಡಲಾಗಿ ತಾ.ಪಂ. ಕಾರ್ಯನಿರ್ವಣಾಧಿಕಾರಿ ಕಚೇರಿಯಿಂದ ವ್ಯವಸ್ಥಾಪಕ ಪ್ರಶಾಂತ್ ಬಳೆಂಜ ಗ್ರಾಮಸಭೆಗೆ ಆಗಮಿಸಿ ಶೇಖರ್ ಲಾಯಿಲಾ ಮುಂದಿಟ್ಟ ಪ್ರಶ್ನೆಗಳನ್ನು ಆಲಿಸಿ ಈ ಬಗ್ಗೆ ಮತ್ತೊಂದು ಸಭೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳುವ ಭರವಸೆ ನೀಡಿ ಮನವೊಲಿಸಿದ ಕಾರಣ ಶೇಖರ್ ಲಾಯಿಲಾ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಬಳಿಕ ಗ್ರಾಮಸಭೆ ಮುಂದುವರಿಯಿತು.
ಇನ್ನೊಂದೆಡೆ ಹತ್ತು ಹಲವು ಸಮಸ್ಯೆ,ಬೇಡಿಕೆ, ಕುಂದುಕೊರತೆಗಳನ್ನು ಗ್ರಾಮಸಭೆಯ ಮುಂದಿಡಲು ಬಂದಿದ್ದು ಅವಕಾಶವಂಚಿತರಾದ ಕೆಲವು ಗ್ರಾಮಸ್ಥರು ನಿರಾಶೆಯೊಂದಿಗೆ ಮನೆಗೆ ಮರಳಿದರು.
Post Comment