“ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಅನುಕೂಲ” ಪೇಜಾವರಶ್ರೀ ಹೇಳಿಕೆ; ಶ್ರೀಗಳ ಮಾತು ಸಮರ್ಥನೀಯವೂ ಅಲ್ಲ, ಪೂರ್ಣ ಸತ್ಯವೂ ಅಲ್ಲ; ಹಿಂದು ಹಿತಚಿಂತನ ವೇದಿಕೆ ಪ್ರತಿಕ್ರಿಯೆ
ಬೆಳ್ತಂಗಡಿ : “ದೇವಾಲಯಗಳನ್ನು ಸ್ವಾಯತ್ತಗೊಳಿಸಿದರೆ ಅನುಕೂಲ. ಅವು ಸರಕಾರದ ಕೈಯಲ್ಲಿರುವುದರಿಂದ ಸಮಾಜಮುಖಿ ಕೆಲಸ ಆಗುತ್ತಿಲ್ಲ. ದೇವಸ್ಥಾನಗಳಿಗೆ ಭಕ್ತರು ನೀಡಿರುವ ಸಂಪತ್ತು ಅವರಿಗಾಗಿಯೇ ವಿನಿಯೋಗ ಆಗಬೇಕು, ಹಾಗಾದಾಗ ಮಾತ್ರ ಪ್ರತಿ ದೇವಾಲಯದಿಂದಲೂ ಶಿಕ್ಷಣ-ವೈದ್ಯಕೀಯ ಸಂಸ್ಥೆಗಳನ್ನು ರಚಿಸಿ ಆ ಮೂಲಕ ಸಮಾಜದ ಉದ್ಧಾರ ಮಾಡಲು ಸಾಧ್ಯವಿದೆ” ಎಂಬ ಪೇಜಾವರ ಶ್ರೀಗಳ ಹೇಳಿಕೆ ಜುಲೈ 17ರಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಪೂಜ್ಯ ಪೇಜಾವರ ಶ್ರೀಗಳ ಮೇಲೆ ನಮಗೆ ಗೌರವವಿದೆ. ಆದರೆ, ಅವರು ಹೇಳಿದ ಈ ಮಾತುಗಳು ಸಮರ್ಥನೀಯವೂ ಅಲ್ಲ, ಪೂರ್ಣ ಸತ್ಯವೂ ಅಲ್ಲ ಎಂದು ನಾಗರಿಕ ಸೇವಾ ಟ್ರಸ್ಟ್ ಪ್ರತಿಕ್ರಿಯೆ ನೀಡಿದೆ.
ಕರ್ನಾಟಕದ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ (ಏಖI & ಅಇ) ಯನ್ನು ತಿದ್ದುಪಡಿ ಮಾಡಿ 2011ರಲ್ಲಿ ರೂಪಿಸಿದ್ದು ಆರ್‌ಎಸ್‌ಎಸ್‌ನ ಜಸ್ಟಿಸ್ ರಾಮಾ ಜೋಯಿಸ್ ಅವರು. ಇದಕ್ಕೆ ಡಾ| ವಿ.ಎಸ್. ಆಚಾರ್ಯರ ಕೊಡುಗೆಯೂ ಇದೆ. ಈ ಕಾಯ್ದೆ ರದ್ದಾಗಬೇಕೆ? ಅಥವಾ ಮತ್ತಷ್ಟು ತಿದ್ದುಪಡಿ ಆಗಬೇಕೆ? ಕಾಯ್ದೆಯನ್ನು ಅಧ್ಯಯನ ಮಾಡಿದ ಬಳಿಕ ಪೇಜಾವರ ಶ್ರೀಗಳು ಈ ಕುರಿತು ತಮ್ಮ ಅಭಿಪ್ರಾಯನ್ನು ಬಹಿರಂಗ ಪಡಿಸುವಂತೆ ನಾಗರಿಕ ಸೇವಾ ಟ್ರಸ್ಟ್ ವಿನಂತಿಸಿದೆ.
ಈಗಿರುವ ಕಾಯ್ದೆ ಪ್ರಕಾರ ದೇವಾಲಯದ ಆದಾಯದ ಮೇಲೆ ಸರಕಾರಕ್ಕೆ ಹಿಡಿತ ಇಲ್ಲ. ಇಲಾಖೆಗೆ ಒಳಪಟ್ಟ ಸುಮಾರು 35 ಸಾವಿರ ದೇವಸ್ಥಾನ/ದೈವಸ್ಥಾನಗಳಿಗೆ ಆಡಳಿತ ಮಂಡಳಿ ಇದೆ. ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಧಾರ್ಮಿಕ ಪರಿಷತ್ ಇದೆ. ಹಿಂದು ಉದ್ದೇಶಕ್ಕೆ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ದೇವಸ್ಥಾನದ ಹಣ ಬಳಸುವಂತಿಲ್ಲ. ಹಾಗೆ ಮಾಡಿದ ಉದಾಹರಣೆ ಇದೆಯೇ? ಇದ್ದಲ್ಲಿ ಕೋರ್ಟ್ನಲ್ಲಿ ಪ್ರಶ್ನಿಸಬಹುದು. (ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ದೇವಸ್ಥಾನಗಳ ಹಣ ಡೈವರ್ಟ್ ಮಾಡಿದ್ದನ್ನು ಹೈಕೋರ್ಟ್ ರದ್ದುಪಡಿಸಿತ್ತು) ಎಂದು ಹೇಳಿರುವ ಟ್ರಸ್ಟ್ ಸಾರ್ವಜನಿಕರಿಂದ ಕಾಣಿಕೆ ಪಡೆಯುವ ಎಲ್ಲಾ ಹಿಂದು ಧಾರ್ಮಿಕ ಕೇಂದ್ರಗಳು ಕಾಯ್ದೆಯ ಸೆ.53ರಂತೆ ನೋಂದಣಿಯಾಗುವುದು ಕಡ್ಡಾಯ. ವರ್ಷಕೊಮ್ಮೆ ಆದಾಯ, ಖರ್ಚು ಮತ್ತು ಚರ-ಸ್ಥಿರ ಆಸ್ತಿಗಳ ವಿವರಗಳನ್ನು ಇಲಾಖೆಗೆ ಸಲ್ಲಿಸಬೇಕು. ಇದು ಬೇಡವೇ? ಭಕ್ತರಿಗೆ ಇದನ್ನು ತಿಳಿಯುವ ಹಕ್ಕಿದೆಯಲ್ಲವೇ? ಎಂದು ನಾಗರಿಕ ಸೇವಾಟ್ರಸ್ಟ್ ಮತ್ತಿತರ ಸಂಘಟನೆಗಳು ಪ್ರಶ್ನಿಸಿವೆ.
ರಾಜ್ಯದ ಎಲ್ಲಾ ದೇವಳಗಳ ಒಟ್ಟು ಆದಾಯದಷ್ಟು ಅಥವಾ 75%ದಷ್ಟು ಆದಾಯವಿರುವ (ರೂ.450-500ಕೋಟಿ) ದೇವಳ ನೋಂದಣಿಯಾಗಿಲ್ಲ!, ದೇವಳದ `ಹೆಸರಿನಲ್ಲಿ’ ಶಿಕ್ಷಣ ಸಂಸ್ಥೆಗಳು ಕಮರ್ಷಿಯಲ್ ಆಗಿ ನಡೆಯುತ್ತಿವೆ; ದೇವಳದ ಹಣದಿಂದ ಅಲ್ಲ. ಈ ದೇವಳ ಆದಾಯಕರ ಇಲಾಖೆಯಲ್ಲಿ ದಾಖಲಾಗಿದ್ದು 100% ಆದಾಯಕರ ವಿನಾಯ್ತಿ ಪಡೆದಿದೆ ಎಂದಿರುವ ಸಂಘಟನೆಗಳು, ಇವರ ಸಮಾಜಮುಖಿ ಕೆಲಸಗಳು ಮೈಕ್ರೋಫೈನಾನ್ಸ್ನ ಬಡ್ಡಿ ಮತ್ತು ಕಮಿಷನ್‌ನಿಂದ ನಡೆಯುತ್ತಿರುವುದು. ದೇವಳದ ಹಣದಿಂದ ಕೊಡುವ ದೇಣಿಗೆ ರೂ. 5 ಕೋಟಿ ಮೀರುತ್ತದೆಯೇ? ದೇವಳದ ಆಡಳಿತ ಖರ್ಚು ಕಳೆದು ಉಳಿಕೆ ಹಣ ಎಷ್ಟು, ಏನಾಗ್ತಿದೆ? ವಿಶ್ವ ಹಿಂದು ಪರಿಷತ್ತಿನ ಮುಖ್ಯಸ್ಥರೂ ಆಗಿರುವ ಸ್ವಾಮೀಜಿಯವರು ತಿಳಿಸಬಲ್ಲರೇ? ಎಂದು ಪ್ರಶ್ನಿಸಿವೆ.
ಕಾಯ್ದೆಯ ಪರ-ವಿರೋಧ ವಾದಗಳನ್ನು ಬಹಿರಂಗವಾಗಿ ಚರ್ಚೆ ಮಾಡಲು ಸ್ವಾಮೀಜಿಗಳು ವೇದಿಕೆಯೊಂದನ್ನು ಕಲ್ಪಿಸಬಹುದೇ? ಜ| ರಾಮಾ ಜೋಯಿಸ್‌ರು `ಮಠ’ಗಳನ್ನೂ, ಮಠದ ದೇವಸ್ಥಾನಗಳನ್ನೂ ಈ ಕಾಯ್ದೆಯ ವ್ಯಾಪ್ತಿಗೆತರಬೇಕೆಂದು ಶಿಫಾರಸು ಮಾಡಿದ್ದರು. ಆದರೆ ಭಾರೀ ಲಾಬಿಗಳಿಂದಾಗಿ ಇದನ್ನು ಕೈಬಿಡಲಾಯಿತಲ್ಲವೇ? ಈ ಮಠಗಳಿಗೂ ದೇಣಿಗೆ ಕೊಡುವುದು ಸಾರ್ವಜನಿಕರಲ್ಲವೇ? ಎಂದು ಹಿಂದು ಹಿತಚಿಂತನ ವೇದಿಕೆ, ನಾಗರಿಕ ಸೇವಾ ಟ್ರಸ್ಟ್, ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದೆ.
Post Comment