ಬೆಳ್ತಂಗಡಿ; ಲಾಯಿಲಾ- ಉಜಿರೆ ಗ್ರಾಮ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳ ಶಾಕಿಂಗ್ ವಿಸಿಟ್!

ಬೆಳ್ತಂಗಡಿ : ಅಕ್ರಮ ಕಟ್ಟಡಗಳ ಸ್ವರ್ಗವೆಂಬ ಕುಖ್ಯಾತಿ ಪಡೆದಿರುವ ಹಾಗೂ ‘ಶ್ರೀನಿವಾಸ ಮಹಾತ್ಮೆ’ಯಿಂದ ಆಗಾಗ ಸುದ್ದಿಯಲ್ಲಿರುವ ಲಾಯಿಲಾ ಮತ್ತು ಉಜಿರೆ ಗ್ರಾಮಪಂಚಾಯತ್ ಗೆ ಬುಧವಾರ ಬೆಳಿಗ್ಗೆ
ಏಕ ಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶಾಕಿಂಗ್ ವಿಸಿಟ್ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಲಾಯಿಲ ಗ್ರಾಮ ಪಂಚಾಯತ್ ಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆ 10:30 ಗಂಟೆ ವೇಳೆಗೆ ಅಚ್ಚರಿಯ ಭೇಟಿ ನೀಡಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು ಗ್ರಾ.ಪಂ. ಆಡಳಿತದಲ್ಲಿ ಅಂದರ್ – ಬಾಹರ್ ಆಟವಾಡುವ ಖದೀಮ ಅಧಿಕಾರಿಗಳ ಬೆವರಿಳಿಸುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದೂರುಗಳಿಗೆ ಸಂಬಂಧಿಸಿ
ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಲೋಕಾಯುಕ್ತ ಕೇಂದ್ರ ಕಛೇರಿಗೆ ಸಾರ್ವಜನಿಕರಿಂದ ಭ್ರಷ್ಟಾಚಾರ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ತನಿಖೆಯ ಮುಂದುವರಿದ ಭಾಗವಾಗಿ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಗ್ರಾ.ಪಂ. ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕರೆದು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಲಾಯಿಲ ಗ್ರಾಮ ಪಂಚಾಯತ್ ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಡಿವೈಎಸ್ ಪಿ ಹಾಲಮೂರ್ತಿ ನೇತೃತ್ವದಲ್ಲಿ ನಾಗರಾಜ್ ಸನಿಲ್, ಪ್ರಸನ್ನ, ಅಬ್ದುಲ್ ಜಲಲ್, ಸುದೀಪ್ ಅಧಿಕಾರಿಗಳು ಮತ್ತು ಉಜಿರೆ ಗ್ರಾಮ ಪಂಚಾಯತ್ ಗೆ ಉಡುಪಿ ಜಿಲ್ಲೆಯ ಲೋಕಾಯುಕ್ತ ವಿಭಾಗದ ಇನ್ಸ್ಪೆಕ್ಟರ್ ಮಂಜುನಾಥ್ ಶಂಕರಹಳ್ಳಿ ನೇತೃತ್ವದಲ್ಲಿ ರಾಘವೇಂದ್ರ ಸಾಲಿಗ್ರಾಮ, ಆದರ್ಶ್, ಅರುಣ್ ಕುಮಾರ್, ಸೂರಜ್ ಕಾವು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ಮುಂದುವರಿಸಿದ್ದಾರೆ.
ಕಡತ ಪರಿಶೀಲನೆ ಪ್ರಕ್ರಿಯೆ ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೆ. ಗ್ರಾ.ಪಂ.ಆಡಳಿತದಲ್ಲಿ ಕಣ್ಣುಮುಚ್ಚಿ ಹಾಲು ಕುಡಿಯುತ್ತಿದ್ದ
ಖದೀಮ ಬೆಕ್ಕುಗಳ ಬಾಲದಲ್ಲಿ ನಡುಕ ಶುರುವಾದರೂ ಅಚ್ಚರಿಯಿಲ್ಲ.

ಇನ್ನೊಂದೆಡೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಹಾಗೂ ಸುಳ್ಯ ತಾಲೂಕಿನ ಕಲ್ಮಡ್ಕ , ಗುತ್ತಿಗಾರು ಗ್ರಾ.ಪಂ. ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಲಾಯಿಲ ಗ್ರಾ.ಪಂ. ಸೇರಿ ದೂರುಗಳ ಬಂದ ಒಟ್ಟು 6 ಕಡೆಗಳಲ್ಲಿ ಲೋಕಾಯುಕ್ತ ತಂಡ ಪರಿಶೀಲನೆ ಮುಂದುವರಿಸಿದೆ.
ಕೊನೆಗೂ ಲಾಯಿಲಾ-ಉಜಿರೆ ಗ್ರಾಮಪಂಚಾಯತ್ ಕಾರ್ಯಾಲಯಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕಿಂಗ್ ವಿಸಿಟ್ ಕೊಟ್ಟು ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದ್ದಾರೆ.














Post Comment