ಕಂಡೆಕ್ಟರ್ ನನ್ನು ಬಿಟ್ಟು ಹೋದ ಕೆಎಸ್ಆರ್ ಟಿಸಿ ಬಸ್ ಡ್ರೈವರ್ : ಮಂಗಳೂರು-ಧರ್ಮಸ್ಥಳ ಕೆಎಸ್ ಆರ್ ಟಿ ಸಿ ಡ್ರೈವರ್ – ಕಂಡೆಕ್ಟರ್ ಎಡವಟ್ಟು
ಬೆಳ್ತಂಗಡಿ : ಬಸ್ ನಿಲ್ದಾಣಕ್ಕೆ ಬಂದು ತಲುಪಿದ ಕೆಎಸ್ಆರ್ ಟಿಸಿ ಬಸ್ಸಿನಿಂದ ಇಳಿದು ಟಿ.ಸಿ. ಪಾಯಿಂಟ್ ನಲ್ಲಿ ಎಂಟ್ರಿ ಮಾಡಿಸಲು ಹೋದ ಬಸ್ ಕಂಡೆಕ್ಟರನ್ನು ಬಸ್ ನಿಲ್ದಾಣದಲ್ಲೇ ಚಾಲಕ ಬಿಟ್ಟು ಹೋಗಿ ಎಡವಟ್ಟು ಮಾಡಿಕೊಂಡ ಸ್ವಾರಸ್ಯಕರ ಪ್ರಸಂಗ ಬೆಳ್ತಂಗಡಿಯಲ್ಲಿ ನಡೆದಿದೆ.
ಮಂಗಳೂರು-ಚಾರ್ಮಾಡಿ ಹಾಗೂ ಮಂಗಳೂರು- ಧರ್ಮಸ್ಥಳ ಮಧ್ಯೆ ಸಂಚರಿಸುವ (KA F 57 1301) ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಕರ್ತವ್ಯದಲ್ಲಿದ್ದ ಚಾಲಕನೇ ಕರ್ತವ್ಯ ನಿರತ ಕಂಡೆಕ್ಟರನ್ನು ಬೆಳ್ತಂಗಡಿ ಬಸ್ ನಿಲ್ದಾಣದಲ್ಲೇ ಬಿಟ್ಟು ಬಸ್ ಚಲಾಯಿಸಿಕೊಂಡು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಟಿ.ಸಿ. ಕಚೇರಿಗೆ ಹೋಗಿ ಎಂಟ್ರಿ ಮುಗಿಸಿಕೊಂಡು ಬಂದು ನೋಡಿದ್ರೆ ಕಂಡೆಕ್ಟರ್ ಹತ್ತಬೇಕಾಗಿದ್ದ ಬಸ್ ಮಾಯವಾಗಿತ್ತು.ಟಿ.ಸಿ. ಕಚೇರಿಯಿಂದ ಬರುವಷ್ಟರಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಬಸ್ ಸುಮಾರು 500 ಮೀಟರ್ ಮುಂದೆ ಹೋಗಿ ಶಾಸಕರ ಶ್ರಮಿಕ ಕಚೇರಿಯ ಮುಂದೆ ತಲುಪಿದಾಗ ಚಾಲಕನಿಗೆ ಕಂಡೆಕ್ಟರ್ ಬಸ್ ಹತ್ತಿಲ್ಲ ಎಂಬುದು ಗಮನಕ್ಕೆ ಬಂದು ಹೆದ್ದಾರಿಯಲ್ಲೇ ಬಸ್ ನಿಲ್ಲಿಸಿ ಕಂಡೆಕ್ಟರ್ ಬರುವಿಕೆಗಾಗಿ ಕಾಯಬೇಕಾಯಿತು.
ಈ ಮಧ್ಯೆ ಡ್ರೈವರ್ -ಕಂಡೆಕ್ಟರ್ ಮೊಬೈಲ್ ಕರೆ ಮಾಡಿ ಮಾತನಾಡಿಕೊಂಡರು. ತಾನು ಕರ್ತವ್ಯದಲ್ಲಿದ್ದ ಬಸ್ಸು, ನಿಲ್ದಾಣದಿಂದ ಬಿಟ್ಟು ಹೋಗಿರುವ ಬಗ್ಗೆ ಅಚ್ಚರಿಗೊಂಡ ಕಂಡೆಕ್ಟರ್ ಮುಂದೆ ಬಸ್ ತನಗಾಗಿ ನಿಂತು ಕಾಯುತ್ತಿರಬಹುದೆಂದು ಮುಖ್ಯ ರಸ್ತೆಯಲ್ಲಿ ಅತ್ತ ಹೆಜ್ಜೆ ಹಾಕಿದರು. ಶಾಸರ ಕಚೇರಿ ಎದುರು ಬಸ್ ನಿಂತು ಕಾಯುತ್ತಿರುವುದನ್ನು ದೂರದಿಂದಲೇ ಗಮನಿಸಿದ ಕಂಡೆಕ್ಟರ್ ಡ್ರೈವರ್ ಮೇಲಿನ ಸಿಟ್ಟಿನಿಂದಲೋ ಬೇಸರದಿಂದಲೋ ನಿಧಾನವಾಗಿ ನಡೆದುಕೊಂಡು ಹೋಗಿರುವುದನ್ನು ನೋಡುವುದೇ ಮಜಾವಿತ್ತು. ಬಿಟ್ಟು ಹೋದ ಬಸ್ಸಿಗಾಗಿ ಆ ಕಂಡೆಕ್ಟರ್ ಅವಸರದಿಂದ ನಡೆಯಲಿಲ್ಲ, ಯಾಕೆ ಬಿಟ್ಟು ಹೋಗ್ಬೇಕಿತ್ತು , ಬೇಕಾದರೆ ಡ್ರೈವರ್ ಕಾಯಲಿ ಎಂಬಂತೆ ಆರಾಮವಾಗಿ ನಡೆದುಕೊಂಡು ಹೋದರು.ಅಷ್ಟರಲ್ಲಿ 15 ನಿಮಿಷ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಸ್ ನಿಲ್ದಾಣದಿಂದ ನಡೆದುಕೊಂಡು ಹೋಗಿ ಕೊನೆಗೂ ಬಸ್ ಬಳಿ ತಲುಪಿದ ಕಂಡೆಕ್ಟರ್ ಬಸ್ ಹತ್ತುವಷ್ಟರಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು, ಹೆದ್ದಾರಿಯಲ್ಲಿ ಬಸ್ ಹಿಂದೆ ಕಾಯುತ್ತಿದ್ದ ವಾಹನ ಸವಾರರು ನಗುವಂತಾಯಿತು.
Post Comment