7 ತಿಂಗಳ ಹಿಂದೆ ತಮಿಳುನಾಡಿನಿಂದ ನಾಪತ್ತೆಯಾಗಿದ್ದ ಯುವಕನನ್ನು ಕುಟುಂಬದ ಜೊತೆ ಸೇರಿಸಿದ ‘ಜನಸ್ನೇಹಿ ಕರಾಯ’ ತಂಡ
◻️ News ಕೌಂಟರ್
ಬೆಳ್ತಂಗಡಿ : ಸುಮಾರು ಏಳು ತಿಂಗಳ ಹಿಂದೆ ತಮಿಳುನಾಡಿನಿಂದ ಕಾಣೆಯಾಗಿ ದಿಕ್ಕೆಟ್ಟು ಬಂದ ಬುದ್ಧಿ ಮಾಂದ್ಯ ಯುವಕನೊಬ್ಬನನ್ನು ‘ಜನಸ್ನೇಹಿ ಕರಾಯ’ ತಂಡದ ಸದಸ್ಯರು ಯುವಕನ ಕುಟುಂಬದ ಜೊತೆ ಸೇರಿಸಿದ ಮಾನವೀಯ ಪ್ರಸಂಗ ವರದಿಯಾಗಿದೆ.
ಬೆಳ್ತಂಗಡಿ ತಾಲೂಕು ಕರಾಯ ಮಸೀದಿ ಪರಿಸರದ ಅಂಗಡಿ ಸಮೀಪದಲ್ಲಿ ಮೊನ್ನೆ ಸಂಜೆ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಯುವಕನೊಬ್ಬ ತಿರುಗಾಡುತ್ತಿರುವುದನ್ನು ಸ್ಥಳೀಯರು ಗಮನಿಸಿ ವಿಚಾರಿಸಿದರು. ಈ ಸಂದರ್ಭ ಅಪರಿಚಿತ ಯುವಕ ಬುದ್ಧಿಮಾಂದ್ಯನಾಗಿದ್ದು ತಮಿಳುನಾಡು ಮೂಲದವನೆಂಬ ವಿಚಾರ ತಿಳಿಯಿತು. ಆತನ ಪರಿಚಯದ ಬಗ್ಗೆ ವಿವರ ಕೇಳಿದಾಗ ಮನೆಯವರ ಮೊಬೈಲ್ ನಂಬರ್ ತೋರಿಸಿದ್ದ. ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಯುವಕನ ಮನೆಯವರು ಸಂಪರ್ಕಕ್ಕೆ ಸಿಕ್ಕಿದ್ದು
ಕರಾಯದಲ್ಲಿ ಪತ್ತೆಯಾಗಿರುವ ಯುವಕನ ಚಹರೆ ತಿಳಿಸಿದಾಗ ಮನೋಹರ್ ಎಂಬ ಯುವಕ ಕಾಣೆಯಾಗಿರುವುದನ್ನು ಖಚಿತ ಪಡಿಸಿದ್ದರು. ಕೂಡಲೇ ಉಪ್ಪಿನಂಗಡಿಗೆ ಬಂದು ಮನೋಹರ್ ನನ್ನು ಕರೆದೊಯ್ಯುವಂತೆ ತಿಳಿಸಿದಾಗ ಬರುವುದಾಗಿ ಒಪ್ಪಿಕೊಂಡಿದ್ದರು.
ಕರಾಯದಲ್ಲಿ ಓಡಾಡುತ್ತಿದ್ದ ಯುವಕನ ಸ್ಥಿತಿಯನ್ನು ನೋಡಿ ‘ಜನಸ್ನೇಹಿ ಕರಾಯ’ ತಂಡದ ಸದಸ್ಯರು ಈತನನ್ನು ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿ ರಾತ್ರಿ ಊಟ ಕೊಟ್ಟು ವಿಶ್ರಾಂತಿ ಪಡೆಯುವಂತೆ ತಿಳಿಸಿ ಅಂಗಡಿಯ ರೂಮೊಂದರಲ್ಲಿ ಮಲಗುವಂತೆ ತಿಳಿಸಿದ್ದರು.
ರಾತ್ರಿ ರೂಮಲ್ಲಿ ಮಲಗಿದ್ದ ಯುವಕ ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿದ್ದ. ಕುತೂಹಲಗೊಂಡಿದ್ದ. ‘ಜನಸ್ನೇಹಿ ಕರಾಯ’ ತಂಡದ ಸದಸ್ಯರು ಉಪ್ಪಿನಂಗಡಿ ಸುತ್ತಮುತ್ತಲಿನ ಪರಿಚಯದವರಲ್ಲಿ ವಿಚಾರಿಸಿದಾಗ ರೂಮಿನಿಂದ ಹೋದವನು ಪೆರ್ನೆ ಸಮೀಪದ ಗಡಿಯಾರ ಪರಿಸರದಲ್ಲಿ ಪತ್ತೆಯಾಗಿದ್ದ. ಕೂಡಲೇ ಜನಸ್ನೇಹಿ ತಂಡ ಹೋಗಿ ಮತ್ತೆ ಕರೆದುಕೊಂಡು ಬಂದಿದ್ದರು. ಈ ಮಧ್ಯೆ ಯುವಕನ ತಾಯಿ ಮತ್ತು ಸಹೋದರ ಉಪ್ಪಿನಂಗಡಿಗೆ ಬಂದಿದ್ದು ಜನಸ್ನೇಹಿ ಕರಾಯ ತಂಡ ಪೊಲೀಸ್ ಠಾಣೆಗೆ ಕರೆದೊಯ್ದು ಯುವಕ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದರು. ಕರಾಯದಲ್ಲಿ ಪತ್ತೆಯಾದ ಯುವಕ ಮನೋಹರ್ ಮತ್ತು ತಮಿಳುನಾಡಿನಿಂದ ಮನೋಹರ್ ನನ್ನು ಕರೆದೊಯ್ಯಲು ತಮಿಳುನಾಡಿನಿಂದ ರೈಲಿನಲ್ಲಿ ಬಂದಿದ್ದ ತಾಯಿ ಹಾಗೂ ಸಹೋದರನನ್ನು ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಕರೆದೊಯ್ದು ಬಿಟ್ಟು ಬಂದಿದ್ದಾರೆ.
7 ತಿಂಗಳ ಹಿಂದೆ ತಮಿಳುನಾಡಿನಿಂದ ಕಾಣೆಯಾಗಿ ದಿಕ್ಕೆಟ್ಟು ಬಂದಿದ್ದ ಯುವಕನನ್ನು ಕುಟುಂಬದ ಜೊತೆ ಸೇರಿಸಿ ತಮಿಳುನಾಡಿಗೆ ಕಳುಹಿಸಿಕೊಟ್ಟ ಮಾನವೀಯ ಕಾರ್ಯದಲ್ಲಿ ‘ಜನಸ್ನೇಹಿ ಕರಾಯ’ ತಂಡದ ಸದಸ್ಯರಾದ ಶೆರೀಫ್ ಕಡೆಂಬಿಲ, ಮೊಯಿನುದ್ದೀನ್, ಜಂಶೀರ್ ಹೋನೆಸ್ಟ್ ,ಇರ್ಷಾದ್ ಮುಸ್ತಾಫ ಮುರಿಯಾಲ ಮುಂತಾದವರು ಭಾಗಿಯಾಗಿದ್ದರು.
Post Comment