ಪಟ್ಟಣ ಪಂಚಾಯತ್ ತೆರೆದ ಚರಂಡಿ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಪುತ್ತೂರು ಸಹಾಯಕ ಕಮಿಶನರ್ ಸೂಚನೆ

ಪಟ್ಟಣ ಪಂಚಾಯತ್ ತೆರೆದ ಚರಂಡಿ ಸಮಸ್ಯೆ ಕೂಡಲೇ ಬಗೆಹರಿಸುವಂತೆ ಪುತ್ತೂರು ಸಹಾಯಕ ಕಮಿಶನರ್ ಸೂಚನೆ

Share
20241201_114221-1024x461 ಪಟ್ಟಣ ಪಂಚಾಯತ್         ತೆರೆದ ಚರಂಡಿ ಸಮಸ್ಯೆ    ಕೂಡಲೇ ಬಗೆಹರಿಸುವಂತೆ ಪುತ್ತೂರು ಸಹಾಯಕ ಕಮಿಶನರ್ ಸೂಚನೆ

ಬೆಳ್ತಂಗಡಿ : ಬಾಡಿಗೆದಾರರ , ನಾಗರಿಕರ ತಲೆನೋವಿಗೆ ಕಾರಣವಾಗಿದ್ದ ನಗರದ ಐಬಿ ರಸ್ತೆಯ ಬದಿಯಲ್ಲಿರುವ
ಖಾಸಗಿ ವಾಣಿಜ್ಯ ಸಂಕೀರ್ಣದ ಸುತ್ತಲಿನ ರಸ್ತೆ ಬದಿಯಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತ ಅಗೆದು ತೆರೆದಿಟ್ಟ ಚರಂಡಿ ಸಮಸ್ಯೆಯನ್ನು ನಾಗರಿಕರಿಗೆ ತೊಂದರೆಯಾಗದಂತೆ ಕೂಡಲೇ ಬಗೆಹರಿಸುವಂತೆ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹೋಪಾತ್ರ ಮಂಗಳವಾರ ಸೂಚನೆ ನೀಡಿದ್ದಾರೆ.

ಖಾಸಗಿ ಕಟ್ಟಡದ ಸುತ್ತ ಪಟ್ಟಣ ಪಂಚಾಯತ್ ಚರಂಡಿ ತೆರೆದಿಟ್ಟು ‌ತಿಂಗಳುಗಟ್ಟಲೆ ಕಾಲಹರಣ ಮಾಡುವ ಮೂಲಕ ಚರಂಡಿ ಸಮಸ್ಯೆ ಜೀವಂತವಾಗಿಟ್ಟು ಕಟ್ಟಡ ಮಾಲಕರ ಮೇಲೆ ಬಾಡಿಗೆದಾರರ ಆಕ್ರೋಶ ಹುಟ್ಟುವಂತೆ ಮಾಡುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಒಂದೆಡೆ ಕೇಳಿ ಬಂದರೆ ತೆರೆದಿಟ್ಟ ಚರಂಡಿ ಸಮಸ್ಯೆಯಿಂದ ಕಂದಾಯ ನಿರೀಕ್ಷಕರ, ಗ್ರಾಮಕರಣಿಕರ ಕಚೇರಿಗಳಿಗೆ, ವಕೀಲರ ಕಚೇರಿಗಳಿಗೆ, ಬ್ಯಾಂಕ್ ಗಳಿಗೆ ದಿನ ನಿತ್ಯ ಬರುವ ವಯಸ್ಕರು, ಮಹಿಳೆಯರು , ವಿಕಲಚೇತನರು ಸೇರಿದಂತೆ
ನೂರಾರು ನಾಗರಿಕರು ತಮ್ಮ ಅಗತ್ಯಗಳಿಗೆ ಬರುವಾಗ ಇಲ್ಲಿ ಕಟ್ಟಡದ ಸುತ್ತಲೂ ಸ್ಲ್ಯಾಬ್ ಕಲ್ಲುಗಳನ್ನು ಅಗೆದು ತೆಗೆದು ತೆರೆದಿಡಲಾದ ರಸ್ತೆ ಬದಿಯ ಚರಂಡಿಯನ್ನು ದಾಟುವುದು ತೊಂದರೆಯಾಗುತ್ತಿದೆ.

ತಾಲೂಕು ಕಚೇರಿಯ ವಾರದ ಭೇಟಿ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ತಂಗಡಿಗೆ ಆಗಮಿಸಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹೋಪಾತ್ರ , ಬೆಳ್ತಂಗಡಿ ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಸುತ್ತ ಪಟ್ಟಣ ಪಂಚಾಯತ್ ಚರಂಡಿ ತೆರೆದಿಟ್ಟ ಬಗ್ಗೆ
ಬಾಡಿಗೆದಾರರ ಮತ್ತು ಕಟ್ಟಡ ಮಾಲೀಕರ ಮನವಿಗೆ ಸ್ಪಂದಿಸಿ,
ಸಾರ್ವಜನಿಕ ರಸ್ತೆ ಬದಿಯ ಚರಂಡಿಯು ಖಾಸಗಿ ಕಟ್ಟಡಕ್ಕೆ ಸಂಬಂಧಪಟ್ಟಿದ್ದಲ್ಲ, ಪಟ್ಟಣ ಪಂಚಾಯತ್ ಆಡಳಿತಕ್ಕೆ ಸಂಬಂಧಪಟ್ಟಿದ್ದು ಜನರಿಗೆ ತೊಂದರೆಯಾಗುವಂತೆ ಚರಂಡಿ ತೆರೆದಿಡಲು ಅವಕಾಶವಿಲ್ಲ, ಕೂಡಲೇ ಈ ಚರಂಡಿಯನ್ನು
ತ್ಯಾಜ್ಯ ನೀರು ಹರಿಯಲು ತೊಂದರೆಯಾಗದಂತೆ, ನಾಗರಿಕರಿಗೆ ದಾಟಲು ಅನುಕೂಲವಾಗುವಂತೆ ದುರಸ್ತಿ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ.
ಕಟ್ಟಡ ಮಾಲಕರು ನಿಯಮ ಪಾಲಿಸಿಲ್ಲ, ಈಗಿನ ಮಾಲೀಕರಿಗೆ ಫಾರ್ಮ್ 3 ಮಾಡಿಕೊಟ್ಟಿಲ್ಲ ಎಂಬ ಪಟ್ಟಣ ಪಂಚಾಯತ್ ಆಡಳಿತದ
ವಕ್ರ ಸಮಜಾಯಿಷಿಗೆ ಕಟ್ಟಡ ಮಾಲೀಕರು ನಿಯಮ ಉಲ್ಲಂಘಿಸಿದ್ದಲ್ಲಿ ಅದು ಕಾನೂನಾತ್ಮಕವಾಗಿ ಮಾತ್ರ ಕೈಗೊಳ್ಳಿ ಅದು ಬಿಟ್ಟು ಚರಂಡಿ ದುರಸ್ತಿ ವಿಳಂಬ ಮಾಡುವುದರೆ ಜನರಿಗೆ ತೊಂದರೆಯಾಗುತ್ತದೆ,
ಈ ಬಗ್ಗೆ ಕೂಡಲೇ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾಮಗಾರಿಗೆ ಸಂಬಂಧಪಟ್ಟ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಂಡು ಚರಂಡಿಯನ್ನು ಸಮರ್ಪಕವಾಗಿ ದುರಸ್ತಿ ಕಾರ್ಯ ಮಾಡಿ ಎಂದು ಪುತ್ತೂರು ಸಹಾಯಕ ಕಮಿಷನರ್ ಪ.ಪಂ. ಮುಖ್ಯಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕಟ್ಟಡದ ಮೂಲ ಮಾಲಕರಿಗೆ ಅಂದಿನ ಆಡಳಿತವು ಯಾವುದೇ ಅಡ್ಡಿ ಆಕ್ಷೇಪವಿಲ್ಲದೆ ಸಂಪೂರ್ಣ ಸಹಕಾರ ನೀಡಿದ್ದ ಪಟ್ಟಣ ಪಂಚಾಯತ್ ಆಡಳಿತ ಈಗ ಆಗಾಗ ಕುಂಟು ನೆಪದಲ್ಲಿ ಕಾಟಾಚಾರದ ನೋಟೀಸುಗಳನ್ನು ನೀಡುತ್ತಾ ಕಿರುಕುಳ ನೀಡುತ್ತಿರಲು ಏನು ಕಾರಣವೆಂಬ ಪ್ರಶ್ನೆಗಳೂ ಕೇಳಿ ಬರುತ್ತಿದೆ. ಅಂದು ಸದಸ್ಯರಾಗಿದ್ದವರೇ ಇಂದೂ ಸದಸ್ಯರಾಗಿದ್ದು ಇದೀಗ ಕಾಲ ಮಿಂಚಿದ ಮೇಲೆ ಕಟ್ಟಡ ಮಾಲಕರು ನಿಯಮ ಪಾಲಿಸಿಲ್ಲ, ಚರಂಡಿ ಸಮರ್ಪಕವಾಗಿಲ್ಲ, ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ, ಎಂದೆಲ್ಲಾ ಪರಾಕ್ರಮ ತೋರಿಸಿದರೆ
ಏನು ಪ್ರಯೋಜನ? ಇಂಥ ಹಟದ ಕ್ರಮ ನಿಯಮಗಳನ್ನು ಪ.ಪಂಚಾಯತ್ ಅಂದು ಪ್ರಯೋಗಿಸಿದ್ದರೆ ಈಗ ಇಂಥ ನೂರೆಂಟು ಕಿರಿಕಿರಿಗಳು ಯಾರಿಗೂ ಇರುತ್ತಿರಲಿಲ್ಲ ಎಂಬ ಅಭಿಪ್ರಾಯಗಳು, ಪ್ರಶ್ನೆಗಳು ಇದೀಗ ಜನರಿಂದ ಕೇಳಿ ಬರುತ್ತಿದೆ.
ಇದಕ್ಕೆಲ್ಲ ಕಾರಣ ಹಾಲಿ ಸದಸ್ಯರ ವಿಪರೀತ ಒತ್ತಡಕ್ಕೆ ಮಣಿದು ಪಟ್ಟಣ ಪಂಚಾಯತ್ ಆಡಳಿತ ಚರಂಡಿಗೆ ‘ಕೈ’ಹಾಕಿರುವುದು!
ಚರಂಡಿ ಅಗೆದ ದಿನದಿಂದಲೂ ಚರಂಡಿ ನಮಗೆ ಸಂಬಂಧಪಟ್ಟಿದ್ದಲ್ಲ,
ಕಟ್ಟಡ ಮಾಲೀಕರೇ ಚರಂಡಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿತ್ತು, ಕಟ್ಟಡ ಮಾಲಕರಿಗೆ ನೋಟೀಸ್ ಕೊಟ್ಟು ಸಾಕಾಗಿ ಇದೀಗ ಚರಂಡಿಯನ್ನು ನಾವೇ ಅಗೆದು ತೆರೆದಿಟ್ಟಿದ್ದೇವೆ, ಅವರು ಮಾಡಬೇಕಾದ ಕೆಲಸವನ್ನು ನಾವು ಮಾಡಿದ್ದೇವೆ,
ಇನ್ನು ಇದನ್ನು ದುರಸ್ತಿ ಮಾಡಬೇಕಾಗಿರುವುದು ಪಟ್ಟಣ ಪಂಚಾಯತ್ ಅಲ್ಲ ; ನಾವಲ್ಲ’ ಕಟ್ಟಡ ಮಾಲೀಕರು ಎಂದೆಲ್ಲಾ ಉದ್ಧಟತನದಿಂದ ವಾದಿಸುತ್ತಾ ವಿಳಂಬ ಮಾಡಿದ್ದ ಪಟ್ಟಣ ಪಂಚಾಯತ್ ಆಡಳಿತ ಮುಖ್ಯಾಧಿಕಾರಿಗೆ ಇದೀಗ ತೆರೆದ ಚರಂಡಿಯನ್ನು 3 ದಿನಗಳೊಳಗೆ ಸಮರ್ಪಕವಾಗಿ ದುರಸ್ತಿಗೊಳಿಸುವಂತೆ ಪುತ್ತೂರು ಎ.ಸಿ. ಸೂಚನೆ ನೀಡಿದ್ದಾರೆ. ಇನ್ನಾದರೂ ಈ ಚರಂಡಿ ಸಮಸ್ಯೆ ಸುಖಾಂತ್ಯ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Post Comment

ಟ್ರೆಂಡಿಂಗ್‌