ಮಾಲಾಡಿಯಲ್ಲಿ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆ

ಮಾಲಾಡಿಯಲ್ಲಿ ಗ್ರಾ.ಪಂ. ಮಟ್ಟದ ಜನಸ್ಪಂದನ ಸಭೆ

Share

ಜಲಜೀವನ್ ಮಿಶನ್ ಮಿಶನ್ ಕಾಮಗಾರಿ ಕಳಪೆ, ಕೋಮಾಸ್ಥಿತಿ : ಗ್ರಾಮಸ್ಥರ ಅಕ್ರೋಶ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಾಲಾಡಿ ಗ್ರಾ.ಪಂ. ಮಟ್ಟದ 26ನೇ ಜನಸ್ಪಂದನ ಸಭೆಯು ಡಿ.20ನೇ ಶನಿವಾರ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಜಲಜೀವನ್ ಮಿಶನ್ ನ 1.83 ಕೋಟಿ ರೂಪಾಯಿ ವೆಚ್ಚದ
ಜೆಜೆಎಂ ಕಾಮಗಾರಿಯು 4 ವರ್ಷದಿಂದ ನಡೆಯುತ್ತಿದ್ದರೂ
ಶೇ.25 ರಷ್ಟು ಮಾತ್ರ ಕೆಲಸವಾಗಿದ್ದು ಕಾಮಗಾರಿಯ ಬಹುಭಾಗ ಅಪೂರ್ಣ ಹಂತದಲ್ಲಿರುವ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾ.ಪಂ. ಸದಸ್ಯರನ್ನು ತರಾಟೆಗೆ ತೆಗೆದುಕೊಂಡು, 5 ಟ್ಯಾಂಕ್ ಗಳ ಕಾಮಗಾರಿ ನಿಂತು ಕಾಮಗಾರಿಯು ಕಳಪೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು 3 ನೀರಿನ ಟ್ಯಾಂಕ್ ಗಳ ಕಾಮಗಾರಿಯನ್ನು ಡಿಸೆಂಬರ್ ಕೊನೆಯೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಪಂಚಾಯತ್ ಮಟ್ಟಕ್ಕೆ ಜೆಜೆಎಂ ಕಾಮಗಾರಿಯ ಬಗ್ಗೆ ಟೆಂಡರ್ ಕರೆಯಲಾಗಿದ್ದು ರಾಜ್ಯದ ವಿವಿಧ ಭಾಗದ ಗುತ್ತಿಗೆದಾರರು ಟೆಂಡರ್ ಹಾಕಿದ್ದ ಸಮಸ್ಯೆಗೆ ಕಾರಣವಾಗಿದೆ. ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಶಾಸಕರು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗುತ್ತಿದೆ. ಹಳೆಯ ವಿದ್ಯುತ್ ತಂತಿ, ಕಂಬ, ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಬೇಕು ಎಂದು ಗ್ರಾಮಸ್ಥರೊಬ್ಬರು ಒತ್ತಾಯಿಸಿದಾಗ ಗ್ರಾಮದಲ್ಲಿರುವ ಹಳೆ ತಂತಿಗಳ ಬದಲಾವಣೆಯ ಪಟ್ಟಿ ನೀಡುವಂತೆ ಮೆಸ್ಕಾಂ ಜೆಇಗೆ ಸೂಚಿಸಿದರು.
ಪುರಿಯ ರಸ್ತೆಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಸೋಣಂದೂರು ಸೇತುವೆ ಕುಸಿಯುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದು ಸೇತುವೆ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ಪ್ರತಿಕ್ರಿಯಿಸಿದರು.

ಪುರಿಯ-ಪುಂಜಾಲಕಟ್ಟೆ ರಸ್ತೆಯ ಅಭಿವೃದ್ದಿಯ ಕುರಿತು 25 ಕೋಟಿ ರೂಪಾಯಿ ಕ್ರೀಯಾ ಯೋಜನೆಯಲ್ಲಿ ಸೇರಿಸಲಾಗುವುದು.
15 ಕೋಟಿಗೂ ಮಿಕ್ಕಿ ಅನುದಾನ ಕಳೆದ ಅವಧಿಯಲ್ಲಿ ಮಾಲಾಡಿ ಗ್ರಾಮಕ್ಕೆ ನೀಡಲಾಗಿದೆ, ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಶಾಸಕರು ಮಾಹಿತಿ ನೀಡಿದರು.
ಸೋಣಂದೂರಿನಲ್ಲಿ 11 ಮುಂದಿ ಫಲಾನುಭವಿಗಳಿಗೆ 94 ಸಿ ಆಗದೇ ಇರುವುದರಿಂದ ವಸತಿ ನಿರ್ಮಿಸಲು ಅಸಾಧ್ಯವಾಗಿತ್ತಿದೆ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮದಲ್ಲಿ ಕಡತಗಳು ಪೋಡಿಯಾಗದೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದರು.
30/1 ರಲ್ಲಿ ರಸ್ತೆ ಸಮೇತವಾಗಿ ಖಾಸಗಿ ವ್ಯಕ್ತಿಯೊಬ್ಬರಿಗೆ ಪಹಣಿಯಾಗಿದೆ ಇದರಿಂದ ರಸ್ತೆ ದುರಸ್ತಿಗೊಳಿಸಲು ಮುಂದಾದಗ ಅವರು ತಡೆ ನೀಡುತ್ತಿದ್ದಾರೆ. ಅಕ್ರಮ ಸಕ್ರಮ ಮಂಜೂರಾತಿ ಜಮೀನಿನಲ್ಲಿ ರಸ್ತೆಗೆ ದಾರಿ ನೀಡಬೇಕು ಎಂಬ ನಿಯಮವಿದೆ ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಸಡಕ್ ಯೋಜನೆಗೆ ಮಡಂತ್ಯಾರು – ನವುಂಡ ರಸ್ತೆಯನ್ನು ಸೇರಿಸಬೇಕು ರಸ್ತೆಯ ಅಗಲೀಕರಣವಾಗಬೇಕು ಎಂದು ಗ್ರಾಮಸ್ಥರು ಹೇಳಿದರು.

ಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ಅಂತರ ಬಿಟ್ಟು ನಿಯಮವನ್ನು ಉಲ್ಲಂಘಿಸಿ ಕಾಂಪೌಂಡ್ ರಚಿಸಿದರೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಕುರಿತು ಎಲ್ಲಾ ಗ್ರಾಮ ಪಂಚಾಯತ್ ಪಿಡಿಒಗಳಿಗೆ ನಿರ್ದೇಶನ ನೀಡಬೇಕು. ಇದರಲ್ಲಿ ರಾಜಕೀಯ ರಹಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇಓ ಅವರಿಗೆ ಸೂಚಿಸಿದರು.
ಡಿಸಿ ಮನ್ನಾ ಭೂಮಿಯನ್ನು ಸಮರ್ಪಕವಾಗಿ ಸರ್ವೇ ನಡೆಸಿ ಅರ್ಹ ಫಲಾನುಭವಿಗಳಿಗೆ ಹಂಚಬೇಕು ಎಂದು ಗ್ರಾಮಸ್ಥರು ಹೇಳಿದರು. ರಸ್ತೆ ಬದಿಯಲ್ಲಿ ಕಸ ವಿಲೇವಾರಿ ನಡೆಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕು, ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಕುಡಿಯುವ ನೀರಿನ ದರ ಹೆಚ್ಚಳದಿಂದ ಕೂಲಿ ಕಾರ್ಮಿಕರಿಗೆ , ಬಡವರಿಗೆ ಬರೆ ಎಳೆದ್ದಂತಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗಿದೆ ಎಂದು ಪಿಡಿಒ ತಿಳಿಸಿದರು. ತೋಟಕ್ಕೆ ಕುಡಿಯುವ ನೀರನ್ನು ಬೀಡುವರ ವಿರುದ್ಧ ತಡೆಗಟ್ಟಲು ಹಾಗೂ ನೀರು ಸರಬರಾಜುನಲ್ಲಿ ನಿರ್ವಹಣೆಗೆ ಮುಂದೆ ಸರ್ಕಾರದಿಂದ ಹಣ ಬರುತ್ತದೆ, ನೀರೀನ ಬಿಲ್ ಪಾವತಿಸದವರ ವಿರುದ್ಧ ಕ್ರಮ ವಹಿಸಬೇಕು ಎಂದು ಇಓ ಹೇಳಿದರು.
ಗ್ರಾ.ಪಂ.ಅಧ್ಯಕ್ಷ ಪುನೀತ್ ಕುಮಾರ್, ತಹಶೀಲ್ದಾರ್ ಪ್ರಥ್ವಿ ಸಾನಿಕಂ ಹಾಗೂ ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಶೆಟ್ಟಿ , ಸದಸ್ಯರು, ಅಧಿಕಾರಿಗಳು , ಗ್ರಾ.ಪಂ. ಮಾಜಿ ಸದಸ್ಯರು, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!