ಬಂದಾರು; ಅಡಿಕೆ ಕದ್ದು ಊರವರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಯುವಕರು

ನದಿಯಿಂದ ಮೇಲೆತ್ತಿಟ್ಟ ಬೆನ್ನಲ್ಲೇ ಪಂಪ್ ಕದ್ದವರು ಯಾರು?
ಬೆಳ್ತಂಗಡಿ : ಅಡಿಕೆ ಕದ್ದ ಕಳ್ಳರಿಬ್ಬರು ತಾವು ಕದ್ದ ಅಡಿಕೆ ಸಹಿತ ರೆಡ್ ಹ್ಯಾಂಡ್ ಆಗಿ ಊರವರ ಕೈಗೆ ಸಿಕ್ಕಿಬಿದ್ದು ಪರಾರಿಯಾಗಲು ವಿಫಲ ಯತ್ನ ನಡೆಸಿ ಊರವರಿಂದ ಭರ್ಜರಿ ಗೂಸ ತಿಂದ ಸ್ವಾರಸ್ಯಕರ ಪ್ರಸಂಗ ಬಂದಾರು ಗ್ರಾಮದ ಮುಂಡಲಕೋಡಿ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಪಾಣೆಕಲ್ಲಿನ ಸಮೀಪದ ನಿವಾಸಿ ಜಗದೀಶ ಹಾಗೂ ಉಜಿರೆಯ ಯುವಕ ಸೇರಿ ಇಲ್ಲಿನ ಮುಂಡಲಕೋಡಿ ಎಂಬಲ್ಲಿಂದ ರಾತ್ರಿ ಸುಮಾರು 12.30ರ ಹೊತ್ತಿಗೆ ಎರಡು ಮೂಟೆಯಷ್ಟು ಅಡಿಕೆ ಕದ್ದು ಬೈಕ್ (ಆಕ್ಟೀವಾ)ದಲ್ಲಿ ಹೋಗುತ್ತಿದ್ದ ಸಂದರ್ಭ ಊರವರು ಗಮನಿಸಿದ್ದು ಇದೇ ವೇಳೆ ನೇತ್ರಾವತಿ ನದಿಯ ಕಡೆಗೆ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಕಳ್ಳರನ್ನು ಅಡಿಕೆ ಸಹಿತ ಹಿಡಿದ ಊರವರು ಕಾರಿನಲ್ಲಿ ಧರ್ಮಸ್ಥಳ ಪೊಲೀಸರಿಗೊಪ್ಪಿಸಲು ಕರೆದೊಯ್ದಿದ್ದಾರೆ.
ಈ ಮಧ್ಯೆ ಅಡಿಕೆ ಕದ್ದು ಸಿಕ್ಕಿ ಬಿದ್ದ ಯುವಕರ ಮನೆಯವರಿಗೂ ವಿಷಯ ತಿಳಿಸಲಾಗಿದ್ದು ಸಿಕ್ಕಿ ಬಿದ್ದ ಯುವಕರನ್ನು ಪೊಲೀಸರಿಗೊಪ್ಪಿಸಲು ಊರವರು ಕಾರಿನಲ್ಲಿ ಕರೆದೊಯ್ಯುತ್ತಿರುವ ವಿಚಾರ ತಿಳಿದ ಬಂದಾರಿನ ಯುವಕನ ತಾಯಿ ಕರೆ ಮಾಡಿ ” ಮಗನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಬೇಡಿ,
ಅವನನ್ನು ಪೊಲೀಸರಿಗೊಪ್ಪಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ನೀವು ಊರಿಗೆ ಬರುವಾಗ ನನ್ನ ಹೆಣ ಇರುತ್ತದೆ..” ಎಂಬುದಾಗಿ ಬ್ಲ್ಯಾಕ್ ಮೇಲ್ ಮಾಡಿದ ಕಾರಣ ಊರವರು ಅಡಿಕೆ ಕದ್ದು ಸಿಕ್ಕಿ ಬಿದ್ದ ಯುವಕರನ್ನು ಪೊಲೀಸರಿಗೊಪ್ಪಿಸದೆ
ಮಾನವೀಯತೆಯಿಂದ ವಾಪಾಸು ಕರೆದುಕೊಂಡು ಬಂದು ಬಿಟ್ಟಿದ್ದಾರೆ.
ತಿಂಗಳ ಹಿಂದೆ ಊರಿನಲ್ಲಿ ಒಂದು ಪಂಪ್ ಕಳವಾಗಿತ್ತು. ಕಳವಾಗುವ ಮೊದಲು ಪಂಪನ್ನು ನದಿಯಿಂದ ಮೇಲೆತ್ತಲು ಸೇರಿದ್ದ ಯುವಕ ಇದೀಗ ಅಡಿಕೆ ಕದ್ದು ಸಿಕ್ಕಿ ಬಿದ್ದಿದ್ದು ಪಂಪ್ ಕಳವು ಮಾಡಿದವರು ಯಾರು ಎಂಬ ಕುತೂಹಲ, ಸಂಶಯ ಊರವರಲ್ಲಿ ಇದೀಗ ಮೂಡಿದೆ.
ಇನ್ನೊಂದೆಡೆ ಇನ್ನೊಬ್ಬ ಯುವಕನ ತಾಯಿ ವಿಷಯ ತಿಳಿದು ಆಘಾತದಿಂದ ಆಸ್ಪತ್ರೆ ಸೇರಿ ಐಸಿಯೂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.













Post Comment