ಬಂದಾರು ನದಿಯಲ್ಲಿ ನೀರಾಟವಾಡಿದ ಒಂಟಿ ಸಲಗನ ಪಯಣ ಗೋಳಿತೊಟ್ಟು ಅರಣ್ಯದತ್ತ…

ಆನೆ ಕಾರ್ಯಪಡೆ ಕಾರ್ಯಾಚರಣೆ
ಬೆಳ್ತಂಗಡಿ : ಬಿಸಿಲಿನ ಬೇಗೆ ನಿವಾರಿಸಿಕೊಳ್ಳಲು ಬಂದಾರು ಗ್ರಾಮದ
ಬಟ್ಲಡ್ಕ-ಬೀಬಿ ಮಜಲು ಪರಿಸರದಲ್ಲಿ ಬುಧವಾರ ಸಂಜೆ ನೇತ್ರಾವತಿ ನದಿಗಿಳಿದು ಮುಳುಗೆದ್ದು ಸ್ನಾನ ಮಾಡಿ ನೀರಾಟವಾಡಿದ್ದ ಒಂಟಿ ಸಲಗವನ್ನು ಆನೆ ಕಾರ್ಯ ಪಡೆಯ ಕಾರ್ಯಾಚರಣೆಯಲ್ಲಿ ರಾತ್ರಿ ವೇಳೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯ ಗೋಳಿತೊಟ್ಟು ಅರಣ್ಯದೊಳಗೆ ಅಟ್ಟಲಾಗಿದೆ.
ಬಂದಾರು ಗ್ರಾಮದ ಬೀಬಿ ಮಜಲು- ಬಟ್ಲಡ್ಕ ಪರಿಸರದ ನೇತ್ರಾವತಿ ನದಿಯಲ್ಲಿ ಗಂಡಾನೆಯೊಂದು ನೀರಾಟ ಆಡಿದ ದೃಶ್ಯ ಸ್ಥಳೀಯರ ಗಮನ ಸೆಳೆದಿತ್ತು.
ಸಂಜೆ ಬಿಸಿಲಿಗೆ ದೇಹ ತಂಪಾಗಿಸಲು ನದಿಗಿಳಿದು ಕೆಲ ಹೊತ್ತು ನೀರಾಟವಾಡಿ ಎದ್ದು ತನ್ನಷ್ಟಕ್ಕೆ ಮುಂದೆ ಸಾಗಿತ್ತು. ಆದರೆ ಸ್ಥಳೀಯ ಕೃಷಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆತಂಕ ವ್ಯಕ್ತಪಡಿಸಿದ್ದು ಆನೆ ಕಾರ್ಯ ಪಡೆ ಮತ್ತು ಸ್ಥಳೀಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ನದಿ ದಾಟಿ ಬಂದಾರು ಕಡೆ ಬರದಂತೆ ಕಾರ್ಯಾಚರಣೆ ನಡೆಸಿದ್ದರು.
ಆಹಾರ ಹುಡುಕುತ್ತಾ ಸಿಕ್ಕಿದ್ದು ತಿನ್ನುತ್ತಾ ಬಂದಾರು, ಪಟ್ರಮೆ, ಕೊಕ್ಕಡ ಮೂಲಕ ಪೆರಿಯಶಾಂತಿ ಅರಣ್ಯದವರೆಗೆ ಹೋಗುವ ಆನೆ ಇಚಿಲಂಪಾಡಿ ಅರಣ್ಯದ ಕಡೆಗೆ ಸಂಚರಿಸಲು ಪ್ರಯತ್ನಿಸುತ್ತಿದೆ, ಹಾಗೂ ಪೆರಿಯಶಾಂತಿವರೆಗೆ ಹೋದರೂ ರಾಷ್ಟ್ರೀಯ ಹೆದ್ದಾರಿ ದಾಟಲು ಕಷ್ಟವಾಗುತ್ತಿರುವ ಕಾರಣ ವ ಹೋದ ಅರಣ್ಯ ದಾರಿಯಿಂದಲೇ ವಾಪಾಸು ಕೊಕ್ಕಡ, ಪಟ್ರಮೆ ಮೂಲಕ ಮೈಪಾಲ ಅಥವಾ ಬೀಬಿ ಮಜಲು ಬಟ್ಲಡ್ಕ ದಾರಿಯಲ್ಲಿ ಬಂದಾರು ಕಡೆ ಬಂದು ಆಗಾಗ ನದಿ ದಡದಲ್ಲಿ ಅಥವಾ ಕೆಲವೊಮ್ಮೆ ನೀರಿನಲ್ಲಿ ಕಾಣಿಸಿಕೊಳ್ಳುತ್ತಿದೆ.
ನಿನ್ನೆ ರಾತ್ರಿ ಸುಮಾರು 12-30ರ ತನಕ ಆನೆ ಕಾರ್ಯಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂದಾರಿನಿಂದ ಹೊರಟ ಆನೆ ಗೋಳಿತೊಟ್ಟು ಅರಣ್ಯದ ಕಡೆ ಹೆಜ್ಜೆ ಹಾಕಿದೆ. ಗೋಳಿತೊಟ್ಟು ಅರಣ್ಯದಲ್ಲಿ ಸಾಕಷ್ಟು ಪ್ರಿಯವಾದ ಬೈನೆ ಮರಗಳಿದ್ದು ಅದೇ ಕಾರಣದಿಂದ ಈ ಪ್ರದೇಶಕ್ಕೆ ಆನೆ ಮತ್ತೆ ತೆರಳಿರಬಹುದೆಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆ (E.T.F.) ಸಿಬ್ಬಂದಿ ಹಾಗೂ ಬೀಟ್ ಫಾರೆಸ್ಟರ್ ಜಗದೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ಬಾಸ್ ಬಟ್ಲಡ್ಕ ಇದ್ದರು.













Post Comment