ಧರ್ಮಸ್ಥಳ ಜೋಡಿ ಕೊಲೆ ಜಾಗದ ಜಂಟಿ ಸರ್ವೆಗೆ ಮುಹೂರ್ತ ಫಿಕ್ಸ್ !

ಧರ್ಮಸ್ಥಳ ಜೋಡಿ ಕೊಲೆ ಜಾಗದ ಜಂಟಿ ಸರ್ವೆಗೆ ಮುಹೂರ್ತ ಫಿಕ್ಸ್ !

Share
IMG-20260422-WA0005-1024x834 ಧರ್ಮಸ್ಥಳ ಜೋಡಿ ಕೊಲೆ ಜಾಗದ ಜಂಟಿ ಸರ್ವೆಗೆ ಮುಹೂರ್ತ ಫಿಕ್ಸ್ !

ಬೆಳ್ತಂಗಡಿ : ಧರ್ಮಸ್ಥಳದಲ್ಲಿ 2012ರಲ್ಲಿ ಬರ್ಬರವಾಗಿ ಕೊಲೆಯಾದ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಹಲವು ವರ್ಷಗಳಲ್ಲಿ ವಾಸವಿದ್ದ ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3 ಮತ್ತು ಅಯೋಧ್ಯಾ ಆಥಿತ್ಯ’ ಎಂಬ ಹೋಟೆಲ್ ಇರುವ ಜಾಗವನ್ನು ಪೊಲೀಸ್ ಭದ್ರತೆ ಜೊತೆಗೆ ವೀಡಿಯೋ ಚಿತ್ರೀಕರಣದೊಂದಿಗೆ ಜಂಟಿ ಸರ್ವೇ ನಡೆಸುವಂತೆ ಕೋರಿ ನೀತಿ ತಂಡದ ಅಧ್ಯಕ್ಷ ಸೌಜನ್ಯ ಹೋರಾಟಗಾರ ಜಯಂತ್ ಟಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.

2012ರಲ್ಲಿ ಅಂದರೆ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೂ 20 ದಿನಗಳ ಹಿಂದೆ ನಡೆದಿದ್ದ ಧರ್ಮಸ್ಥಳದ ಮಾಜಿ ಆನೆ ಮಾವುತ ಮತ್ತು ಸಹೋದರಿ ಯಮುನಾ ಕೊಲೆ ಪ್ರಕರಣದ ಬಳಿಕ ತೀವ್ರ ಕುತೂಹಲ ಮತ್ತು ಸಂಶಯಗಳಿಗೆ ಕಾರಣವಾಗಿದ್ದ ಭೂಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ 2026-ಎಪ್ರಿಲ್18ರಲ್ಲಿ ಸಲ್ಲಿಸಿರುವ ಮನವಿಯಲ್ಲಿ ಕೆಲವು ಮಹತ್ವದ ವಿಚಾರಗಳನ್ನು ದೂರುದಾರ ಜಯಂತ್ ಟಿ ಪ್ರಸ್ತಾಪಿಸಿದ್ದು ಆನೆ ಮಾವುತ ಮತ್ತು ಆತನ ಸಹೋದರಿ ವಾಸ್ತವ್ಯವಿದ್ದ ಮನೆಯ ಜಾಗ ಖಾಸಗಿಯೋ ಸರಕಾರಿಯೋ ಎಂಬ ಬಲವಾದ ಪ್ರಶ್ನೆಗೆ ಜಂಟಿ ಸರ್ವೆಯಿಂದ ತಾರ್ಕಿಕ ಉತ್ತರ ಸಿಗಲಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.


ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದ ಆನೆ ಮಾವುತ ನಾರಾಯಣ ಮತ್ತು ಯಮುನಾ ಎಂಬುವವರ ಜೋಡಿ ಕೊಲೆ ಪ್ರಕರಣವು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರವಾದುದಾಗಿದೆ, ಈ ಪ್ರಕರಣಕ್ಕೆ ಸಂಬಂಧಿಸಿದ ಭೂಮಿಯು ಧರ್ಮಸ್ಥಳ ಗ್ರಾಮದ ಸರ್ವೆ ನಂಬರ್ 157/3 ಸರ್ಕಾರಿ ಭೂಮಿ ಮತ್ತು ಇದರೊಂದಿಗೆ ಅಲ್ಲಿನ ಅಯೋಧ್ಯಾ ಹೋಟೆಲ್ ಇರುವ ಜಾಗಕ್ಕೆ ನೇರ ಸಂಬಂಧವಿರುವುದರಿಂದ ಈ ವಿವಾದಿತ ಜಾಗದ ನಿಖರತೆಯನ್ನು ಪತ್ತೆಹಚ್ಚಲು ಮತ್ತು ಸತ್ಯಾಸತ್ಯತೆಯನ್ನು ಹೊರತರಲು ಈ ಭಾಗದ ಸರ್ವೇ ಕಾರ್ಯವು ಅತ್ಯಗತ್ಯವಾಗಿದೆ.

ಸ.ನಂಬ್ರದ ಸರಕಾರಿ ಜಾಗವನ್ನು ಸರ್ವೆ ನಡೆಸಿ ಸರಕಾರಿ ಭೂಮಿಯಾಗಿದ್ದರೆ ಕಂದಾಯ ಇಲಾಖೆಗೆ ಸ್ವಾಧೀನಪಡಿಸಿಕೊಳ್ಳುವಂತೆ
7-4-2025 ಕಂದಾಯ ಸಚಿವರು, ಜಿಲ್ಲಾಧಿಕಾರಿ, ಎ.ಸಿ., ಸಹಿತ ಸಂಬಂಧಪಟ್ಟ ತಹಶೀಲ್ದಾರ್ ರಿಗೆ ಹೋರಾಟಗಾರ ಜಯಂತ್ ಟಿ ಮನವಿ ನೀಡಿದ್ದರು. ಈ ಬಗ್ಗೆ ದ.ಕ.ಜಿಲ್ಲಾಧಿಕಾರಿಯವರು ಮುಂದಿನ ಪ್ರಕ್ರಿಯೆಗಾಗಿ ಬೆಳ್ತಂಗಡಿ ತಹಶೀಲ್ದಾರ್ ರಿಗೆ ಕಡತ ಮುಂದುವರಿಸಿದ್ದು ಒಂದು ವರ್ಷದಿಂದ ಈ ಬಗ್ಗೆ ಕಂದಾಯ ಇಲಾಖೆ ನಿಯಮಾನುಸಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದೀಗ 2026-ಎಪ್ರಿಲ್ 28ರಂದು ಜಂಟಿ ಸರ್ವೆ ಕಾರ್ಯಕ್ಕೆ ದಿನ ನಿಗದಿಗೊಳಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಸರ್ವೆ ನಂಬರ್ ಗಳ ಜಾಗದ ಸರ್ವೇ ಕಾರ್ಯವನ್ನು ಮಾನ್ಯ ಬೆಳ್ತಂಗಡಿ ತಹಶೀಲ್ದಾರರ ಸಮಕ್ಷಮದಲ್ಲಿ ಹಾಗೂ ದೂರುದಾರನಾದ ನನ್ನ ಸಮುಖದಲ್ಲಿ ನಡೆಸಬೇಕು ಎಂದು ಜಯಂತ್ ಟಿ ಎಪ್ರಿಲ್18-2026ರಂದು ಮತ್ತೆ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧವಿರುವುದರಿಂದ ಈ ವಿವಾದಿತ ಜಾಗದ ನಿಖರತೆಯನ್ನು ಪತ್ತೆಹಚ್ಚಲು ಮತ್ತು ಸತ್ಯಾಸತ್ಯತೆಯನ್ನು ಹೊರತರಲು ಈ ಭಾಗದ ಸರ್ವೇ ಕಾರ್ಯವು ಅತ್ಯಗತ್ಯವಾಗಿದ್ದು ಸದರಿ ಸರ್ವೆ ನಂಬರ್ ಗಳ ಸರ್ವೇಯನ್ನು ಬೆಳ್ತಂಗಡಿ ತಹಶೀಲ್ದಾರರ ಸಮಕ್ಷಮದಲ್ಲಿ ಹಾಗೂ ದೂರುದಾರನಾದ ನನ್ನ ಸಮ್ಮುಖದಲ್ಲಿ ನಡೆಸಬೇಕು ಎಂದು ಮನವಿಯಲ್ಲಿ ಜಯಂತ್ ಟಿ ಒತ್ತಾಯಿಸಿದ್ದಾರೆ.

“ಪಾರದರ್ಶಕತೆಯ ದೃಷ್ಟಿಯಿಂದ ಸಂಪೂರ್ಣ ಸರ್ವೇ ಕಾರ್ಯವನ್ನು ವಿಡಿಯೋ ಚಿತ್ರೀಕರಣ ಮಾಡಲು ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಬೇಕು, ಒಂದು ವೇಳೆ ಈ ಸರ್ವೇ ಕಾರ್ಯವನ್ನು ನಡೆಸಲು ಸರ್ಕಾರದ ಕಡೆಯಿಂದ ಅನುದಾನದ ಕೊರತೆ ಅಥವಾ ಆರ್ಥಿಕ ಅಡಚಣೆಗಳಿದ್ದಲ್ಲಿ ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ದೂರುದಾರನಾದ ನಾನೇ (ಜಯಂತ್ ಟಿ.) ಭರಿಸಲು ಸಿದ್ಧನಿದ್ದೇನೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ಸೂಕ್ಷ್ಮತೆಯನ್ನು ಅರಿತು, ದೂರುದಾರನಿಗೆ ಸೂಕ್ತ ರಕ್ಷಣೆ ನೀಡುವ ಉದ್ದೇಶದಿಂದ ಹಾಗೂ ಸರ್ವೇ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ, ಸಂಪೂರ್ಣ ಸರ್ವೇ ಪ್ರಕ್ರಿಯೆಯನ್ನು ಪೊಲೀಸ್ ಬಂದೋಬಸ್ತಿನಲ್ಲಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಆದುದರಿಂದ
ಈ ಪ್ರಕರಣದ ಗಂಭೀರತೆ ಮತ್ತು ಸೂಕ್ಷ್ಮತೆಯನ್ನು ಅರಿತು ನ್ಯಾಯ ಒದಗಿಸುವ ದೃಷ್ಟಿಯಿಂದ ಎಪ್ರಿಲ್ 28-2026ರಂದು ನಿಗದಿಪಡಿಸಲಾದ ಸರ್ವೇ ಕಾರ್ಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಕಂಡ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಬೇಕೆಂದು ಈ ಮೂಲಕ ಅತ್ಯಂತ ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ.”
ಎಂಬಿತ್ಯಾದಿಯಾಗಿ ಹೋರಾಟಗಾರ ಜಯಂತ್ ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!