ಪಡಂಗಡಿ: ಗದ್ದೆಗೆ ಎತ್ತರವಾಗಿ ಮಣ್ಣು ತುಂಬಿಸಿ ತೋಟದ ಚರಂಡಿಗೆ ಅಡ್ಡಿ ; ಕೃಷಿಕರಿಂದ ತಹಶೀಲ್ದಾರರಿಗೆ ದೂರು

ಬೆಳ್ತಂಗಡಿ : ಕಳೆದ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ಹೋಗಿರುವ ಸೇತುವೆಯ ಬಲಭಾಗದಲ್ಲಿ ನೀರು ಹರಿದು ಹೋಗುವ ದೊಡ್ಡ ಚರಂಡಿಯು ಮುಚ್ಚಿ ಹೋಗುವ ಹಾಗೆ ಹಿಟಾಚಿಯಲ್ಲಿ ಮೂರು ವಾರಗಳಿಂದ ನೂರಾರು ಲೋಡ್ ಮಣ್ಣು ತಂದು ಅವೈಜ್ಞಾನಿಕವಾಗಿ ರಾಶಿ ಹಾಕಿ ಖಾಸಗಿ ವ್ಯಕ್ತಿಯೊಬ್ಬರು ಕೃಷಿಕರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ಪಡಂಗಡಿ ಗ್ರಾಮದ ಕುದ್ರೆಂಜ ಪರಿಸರದ ನಿವಾಸಿಗಳು ಮಣ್ಣು ತೆರವುಗೊಳಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ತಹಶೀಲ್ದಾರರಿಗೆ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕುದ್ರೆಂಜ ಎಂಬಲ್ಲಿ ನಿರ್ಮಾಣಗೊಂಡ ಹೊಸ ಸೇತುವೆಯೊಂದು ಕಳೆದ ವರ್ಷ ಮಳೆಗಾಲದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದ್ದು ಇದೇ ಸೇತುವೆ ಬಳಿಯ ವಿಶಾಲವಾದ ಗದ್ದೆಗೆ ಖಾಸಗಿ ವ್ಯಕ್ತಿಯೊಬ್ಬರು
ಅವೈಜ್ಞಾನಿಕವಾಗಿ ನೂರಾರು ಲೋಡ್ ಗಳಷ್ಟು
ಮಣ್ಣು ಬೆಟ್ಟದಂತೆ ರಾಶಿ ಹಾಕಿ ಚರಂಡಿ ಮುಚ್ಚಿದ ಪರಿಣಾಮ ಮಳೆಗಾಲದಲ್ಲಿ ಸ್ಥಳೀಯರ ಕೃಷಿ ಭೂಮಿ ಮುಳುಗಡೆಯಾಗುವ ಭೀತಿ ಉಂಟಾಗಿದೆ.
ಪಡಂಗಡಿ ಮತ್ತು ಸೋಣಂದೂರು ಗ್ರಾಮದ ಗಡಿ ಭಾಗದಲ್ಲಿ ಸ್ಥಳೀಯ ಆದಂ ಬ್ಯಾರಿ ಬ್ಯಾರಿ ಎಂಬವರು ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಈ ಖರೀದಿಸಿದ ಜಾಗದ ಬಳಿ ಹಲವರ ಕೃಷಿ ಜಮೀನು ಮತ್ತು ನೀರು ಹರಿದು ಹೋಗಲು ಕಾಲುವೆಯಂತಿರುವ ಚರಂಡಿ ಇದೆ.
ಜಾಗ ಖರೀದಿಸಿದ ಖಾಸಗಿ ವ್ಯಕ್ತಿ ವಿಶಾಲವಾದ ಗದ್ದೆಗೆ ಎರಡು ವಾರಗಳಿಂದ ಜೆಸಿಬಿ ಹಿಟಾಚಿ ಬಳಸಿ ಲೋಡ್ ಗಟ್ಟಲೆ ರಾಶಿ ರಾಶಿ ಮಣ್ಣು ತುಂಬಿಸಿ ಚರಂಡಿ ಮುಚ್ಚುತ್ತಿದ್ದು ಮಳೆಗಾಲದಲ್ಲಿ ಮಳೆಯ ನೀರು ಹೋಗದಂತೆ ತಡೆಯೊಡ್ಡಿದ್ದಾರೆ. ಗದ್ದೆಗೆ ಮಣ್ಣು ತುಂಬಿಸಿದ ಕಾರಣ ಚರಂಡಿ ಮಣ್ಣಿನಡಿ ಮುಚ್ಚಿದ್ದು ಅಡಿಕೆ ಕೃಷಿಗೆ ಮತ್ತು ಗದ್ದೆಯಲ್ಲಿ ಬೆಳೆ ಬೆಳೆಸದಂತೆ ತೊಂದರೆ ನೀಡುತ್ತಿರುವ ಬಗ್ಗೆ ಸ್ಥಳೀಯ ಕೃಷಿಕರು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ಸೇತುವೆಯ ನೀರು ಹಾದು ಹೋಗುವ ಕಿಂಡಿಯನ್ನು ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಿದ್ದು ಮಳೆಗಾಲದಲ್ಲಿ
ತೋಟದಲ್ಲಿ ನೀರು ತುಂಬಿ ಕೃಷಿ ಜಮೀನು ಪ್ರವಾಹಕ್ಕೆ ಕೊಚ್ಚಿ ಹೋಗುವ ಅಪಾಯವಿದ್ದು ಈ ಬಗ್ಗೆ ತೊಂದರೆಗೊಳಗಾದ ಕೃಷಿಕರು ತಹಶೀಲ್ದಾರ್ ಗೆ ದೂರು ನೀಡಿದ್ದು ಕೂಡಲೇ ಸ್ಥಳಕ್ಕಾಗಮಿಸಿ ಮಣ್ಣು ಹಾಕಿ ಮುಚ್ಚಿರುವ ಚರಂಡಿಯನ್ನು ನೀರು ಹರಿದು ಹೋಗುವ ಕಿಂಡಿಯನ್ನು ಯಥಾಸ್ಥಿತಿಗೆ ತರುವಂತೆ ಜಮೀನು ಖರೀದಿಸಿದ ವ್ಯಕ್ತಿಗಳಿಗೆ ಆದೇಶ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.














Post Comment