ಗುರುವಾಯನಕೆರೆ ಕನ್ವರ್ಷನ್ ರಹಿತ ಅನಧಿಕೃತ ಕಟ್ಟಡ : ಕಾಮಗಾರಿ ಮುಂದುವರಿಸದಂತೆ ಗ್ರಾ.ಪಂ.ಮೂರನೇ ನೋಟಿಸ್!

ಬೆಳ್ತಂಗಡಿ : ಭೂಪರಿರ್ವತಿತವಲ್ಲದ ಮತ್ತು ಖಾಸಗಿ ವಿವಾದಿತ ಜಮೀನಿನಲ್ಲಿ ವ್ಯಕ್ತಿಯೋರ್ವರು ಸ್ಥಳೀಯ ಗ್ರಾಮಪಂಚಾಯತ್ ನಿಂದ ಹೊಸ ಕಟ್ಟಡ ರಚನೆಗಾಗಲಿ ಅಥವಾ ಕಟ್ಟಡ ದುರಸ್ತಿಗಾಗಲಿ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ
ಕಟ್ಟಡ ನಿರ್ಮಿಸುತ್ತಿರುವ ಪ್ರಕರಣವೊಂದು ಕುವೆಟ್ಟು ಗ್ರಾಮದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಅನಧಿಕೃತ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಗ್ರಾಮಪಂಚಾಯತ್ ಆಡಳಿತ ಕೆಲವು ಸಮಯಗಳ ಹಿಂದೆ ಒಂದನೇ ಮತ್ತು ಎರಡನೇ ನೋಟೀಸ್ ನೀಡಿದ್ದು ಇದೀಗ ಮೂರನೇ ನೋಟೀಸ್ ನೀಡಿದೆ ಆದರೆ ಅನಧಿಕೃತ ಕಟ್ಟಡದ ಕೆಲಸ ನಡೆಯುತ್ತಲೇ ಇದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ.ನಂ.21/4, 25/12 ಹಾಗೂ 17/12ರಲ್ಲಿ ವಿವಾದದಲ್ಲಿರುವ ಖಾಸಗಿ ಜಮೀನಿನಲ್ಲಿ ಗುರುವಾಯನಕೆರೆ ನಿವಾಸಿ ಗಾಡ್ ಫ್ರೀ ಡಿಕುನ ಎಂಬವರು ಗ್ರಾಮಪಂಚಾಯತ್ ನಿಂದ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತ ಕಟ್ಟಡವನ್ನು ನಿರ್ಮಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕುವೆಟ್ಟು ಗ್ರಾಮಪಂಚಾಯತ್ ಆಡಳಿತವು ಯಾವುದೇ ಅನಧಿಕೃತ ಕಟ್ಟಡದ ರಚನೆಯಾಗಲಿ, ದುರಸ್ತಿಯಾಗಲಿ ಮಾಡಬಾರದೆಂದು ಇದೀಗ ಮೂರನೇ ನೋಟೀಸ್ ನೀಡಿದೆ.

ಸೂಚನೆ ಮೀರಿ ನಿಯಮ ಉಲ್ಲಂಘಿಸಿ ಉದ್ದೇಶಿತ ಅನಧಿಕೃತ ಕಾಮಗಾರಿಯನ್ನು ಮತ್ತೆ ಮುಂದುವರಿಸಿದಲ್ಲಿ ಕಟ್ಟಡವನ್ನು ನಿಯಮಾನುಸಾರ ತೆರವುಗೊಳಿಸುವ
ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮಪಂಚಾಯತ್ ಎರಡನೇ ನೋಟೀಸ್ ನಲ್ಲಿ ಖಡಕ್ ಸೂಚನೆ ನೀಡಲಾಗಿದ್ದರೂ ಸೂಚನೆಯನ್ನು ಧಿಕ್ಕರಿಸಿ
ಕಾಮಗಾರಿ ಮುಂದುವರಿದಿದ್ದು ಇದೀಗ ಮತ್ತೆ ಮೂರನೇ ನೋಟೀಸ್ ಕೊಡಲು ಕಾರಣವಾಗಿದ್ದು ಗ್ರಾ.ಪಂ. ಆಡಳಿತಕ್ಕೆ ಸವಾಲೊಡ್ಡಿದಂತಾಗಿದೆ.
ಸರಣಿ ನೋಟೀಸ್ ಗಳನ್ನು ಲೆಕ್ಕಿಸದೆ ರಾಜಕೀಯ ಮತ್ತು ಹಣದ ಬಲದಲ್ಲಿ ಕೆಲಸ ಮುಂದುವರಿದಿದೆ.
ಇದೀಗ ಅನಧಿಕೃತ ಕಟ್ಟಡ ನಿರ್ಮಾಣ ಕೆಲಸ ಸ್ಥಗಿತಗೊಳಿಸುವಂತೆ ಗ್ರಾ.ಪಂ. ಮೂರನೇ ನೋಟೀಸ್ ನೀಡಲಾಗಿದ್ದರೂ ವಾಸದ ಮನೆ ಎಂದು ಕೆಲವು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನಧಿಕೃತ ಕಟ್ಟಡ ಕೆಲಸ ಮುಂದುವರಿಸುತ್ತಿದೆ.
ಇನ್ನೊಂದೆಡೆ ಅನಧಿಕೃತ ಕಟ್ಟಡದ ಮೇಲೆ ಕಾನೂನು
ಕ್ರಮ ಕೈಗೊಳ್ಳುವ ಬಗ್ಗೆ ಗ್ರಾ.ಪಂ. ಆಡಳಿತಕ್ಕೆ ಸಾಥ್ ನೀಡಬೇಕಾದ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಜಾಣ ಮೌನದೊಂದಿಗೆ ನಿರ್ಲಕ್ಷ್ಯವಹಿಸುತ್ತಿರುವುದು
ಸಂಶಯಕ್ಕೆಡೆ ಮಾಡಿ ಕೊಟ್ಟಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಅಭಯಹಸ್ತದಲ್ಲಿ ಇನ್ನಷ್ಟು ಅನಧಿಕೃತ ಕಟ್ಟಡಗಳು ತಾಲೂಕಿನಲ್ಲಿ ತಲೆ ಎತ್ತಲಿವೆಯೋ ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ.















Post Comment