ಬಂತು ನಾಡಿಗೆ ತುಳುವರ ಸುಗ್ಗಿ ಕರುಂಗೋಲು; ಟ್ರೋಲ್,ರೀಲ್ಸ್ ನಡುವೆ ಹೀಗೊಂದು ತುಳು ಜನಪದ ಆಚರಣೆ

ಬೆಳ್ತಂಗಡಿ : ತುಳುನಾಡಿನ ವಿಶಿಷ್ಟ ಜನಪದ ಆಚರಣೆಗಳ ಪೈಕಿ ಕುಣಿತ ಪಾಡ್ದನಗಳನ್ನೊಳಗೊಂಡ ಪ್ರಕಾರದಲ್ಲಿ ಗಮನ ಸೆಳೆಯುವ ತುಳುವರ ಕರುಂಗೋಲು , ಆಟಿಕಳೆಂಜ ಮುಂತಾದ ಕುಣಿತಗಳಿಗೆ ಅದರದೇ ಆದ ತಾಯ್ನೆಲದ ಚಾರಿತ್ರಿಕ ಹಿನ್ನೆಲೆ ಇದೆ. ತುಳುನಾಡಿನ ಕೃಷಿಕರಿಂದ ದೈವಾರಾಧಕರಿಂದ ತುಳು ಸಂಸ್ಕೃತಿ ಪ್ರೇಮಿಗಳಿಂದ ವಿಶೇಷವಾಗಿ ಒಟ್ಟು ತುಳುವರಿಂದ ಕೃಷಿ ಸಂಸ್ಕೃತಿಯ ಪರ್ವ ಕಾಲವೆಂದೇ ಪರಿಗಣಿಸಲ್ಪಡುವ ಸುಗ್ಗಿ ಹುಣ್ಣಿಮೆ ಕಾಲದಲ್ಲಿ ಮುನ್ನೆಲೆಗೆ ಬರುವ ಕರುಂಗೋಲು ಮೂಲ ಸ್ವರೂಪ ಹೊತ್ತು ಈ ವರ್ಷ ಮತ್ತೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪೆರ್ಲ ನೇರೋಲ್ದಪಲಿಕೆ ಆದಿದ್ರಾವಿಡ ಸಮುದಾಯದ ಕುಟುಂಬಗಳ ಕಾಲೋನಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷ ಮತ್ತೆ ಕರುಂಗೋಲು ಕುಣಿತ ತಂಡ ಗ್ರಾಮ ತಿರುಗಾಟಕ್ಕೆ ಹೊರಟು ಸಮಾರೋಪ ಹಂತ ತಲುಪಿದೆ.ಅಳಿವಿನ ಅಂಚಿನಲ್ಲಿರುವ ಜನಪದ ಆಚರಣೆಯಾದ ಕರುಂಗೋಲು ಕುಣಿತವು ಆರಾಧನಾ ಹಿನ್ನೆಲೆಯುಳ್ಳ ತುಳು ಸಂಸ್ಕೃತಿಯ ಪ್ರತೀಕವಾಗಿದ್ದು ನಶಿಸಿ ಹೋಗುವ ಹಂತದಲ್ಲಿದೆ.ಪ್ರಕೃತಿ ಆರಾಧನೆಯ ವಿಶಿಷ್ಟ ಸ್ವರೂಪದಂತಿರುವ ತುಳುವರ ಕರುಂಗೋಲು ಕುಣಿತದ ತಂಡವನ್ನು ತುಳುವರು ಭಕ್ತಿ, ಭಾವಗಳಿಂದ ಕೈಮುಗಿದು ಸ್ವಾಗತಿಸುತ್ತಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು, (ಬಂಗಾಡಿ) ಅಳದಂಗಡಿ, ಧರ್ಮಸ್ಥಳ,ಶಿರ್ಲಾಲು, ಬೆಳಾಲು, ಕೊಯ್ಯೂರು, ಬಂದಾರು, ಕಣಿಯೂರು ಮುಂತಾದ ಗ್ರಾಮಗಳು ಕರುಂಗೋಲು ಕುಣಿತ ಆಚರಣೆಯನ್ನು ಉಳಿಸಿಕೊಂಡು ಬರುತ್ತಿದ್ದ ಪ್ರಮುಖ ಊರುಗಳು, ಆದರೆ ಈಗ ಕೆಲವೇ ಬೆರಳೆಣಿಕೆಯ ಗ್ರಾಮಗಳಲ್ಲಿ ಮಾತ್ರ ಸಂಸ್ಕೃತಿಯ ಪಳೆಯುಳಿಕೆ ಕರುಂಗೋಲು ಆಚರಣೆ ಉಳಿದುಕೊಂಡಿದ್ದು ಈ ಪೈಕಿ ಧರ್ಮಸ್ಥಳ, ಶಿರ್ಲಾಲು(ಕರಂಬಾರು), ಕೊಯ್ಯೂರು, ಬೆಳಾಲು, ಬಂದಾರು ಮತ್ತಿತರ ಗ್ರಾಮಗಳು ಪ್ರಮುಖ ಸಾಲಿಗೆ ಬರುತ್ತವೆ.
Post Comment