“ಗುಂಪುಗಾರಿಕೆ ಮಾಡ್ಬೇಡ…” ಧರ್ಮಸ್ಥಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಬೆಳ್ತಂಗಡಿ : “ಪಕ್ಷ ಸಂಘಟಿಸುವ ವಿಚಾರದಲ್ಲಿ ಯಾವುದೇ ಗುಂಪುಗಾರಿಕೆ ಮಾಡಬಾರದು ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಎಲ್ಲರೊಂದಿಗೆ ಬೆರೆತು ಜೊತೆಯಾಗಿ ಮುನ್ನಡೆಸಬೇಕು” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ತಾಲೂಕಿನ ಯುವ ನಾಯಕ ರಕ್ಷಿತ್ ಶಿವರಾಮ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ ಎಂಬ ಮಾತುಗಳು ಕಾರ್ಯಕರ್ತರ ಕಿವಿಗೆ ಬಿದ್ದಿದ್ದು ಸದ್ಯ ಕಾಂಗ್ರೆಸ್ ಚಾವಡಿಯಲ್ಲಿ ಆಂತರಿಕ ಚರ್ಚೆಗೆ ವಸ್ತು ಕೊಟ್ಟಂತಾಗಿದೆ.
ಧರ್ಮಸ್ಥಳದಲ್ಲಿ ಚಹಾ ಉಪಹಾರದ ವೇಳೆ ಪಕ್ಷದ ಕೆಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಸ್ಥಳೀಯವಾಗಿ ಪಕ್ಷದ ಫ್ಲೆಕ್ಸ್, ಬ್ಯಾನರ್ ಗಳಲ್ಲಿ ಫೊಟೋ ಹಾಕುವ ಸಂದರ್ಭಗಳಲ್ಲಿ ಕೆಲವು ಹಿರಿಯ ನಾಯಕರನ್ನು, ಮುಖಂಡರನ್ನು ಕಡೆಗಣಿಸುತ್ತಿರುವ ಬಗ್ಗೆ ಅಥವಾ ತಾರತಮ್ಯ ಮಾಡುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ದೂರುಗಳು ಬಂದಿದ್ದು ಇದೇ ವಿಚಾರದಲ್ಲಿ ಮಾತನಾಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ ನೇರವಾಗಿ “ಗುಂಪುಗಾರಿಕೆ ಮರೆತು ಹೊಂದಾಣಿಕೆಯಿಂದ ಪಕ್ಷವನ್ನು ಮುನ್ನಡೆಸಬೇಕು, ಸೂಚನೆಯಂತೆ ಅನುಸರಿಸಿ ಮುಂದುವರಿಯಲು ಸಾಧ್ಯವಿಲ್ಲದಿದ್ದಲ್ಲಿ ಮೇಲಿನ ನಾಯಕರಿಂದ ಹೇಳಿಸುವುದೂ ಗೊತ್ತಿದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಕೆಪಿಸಿಸಿ ಅಧ್ಯಕ್ಷ , ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದರು.ತಮ್ಮ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಸ್ವಾಗತಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ , ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಕೆ.ಎಂ., ಮಾಜಿ ಸಚಿವ ಕೆ.ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಂಜನ್ ಜಿ ಗೌಡ , ಅಭಿನಂದನ್ ಹರೀಶ್ ಕುಮಾರ್, ಪ.ಪಂ.ಸದಸ್ಯ ಜಗದೀಶ್ ಡಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಧರ್ಮಸ್ಥಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಡಿಸಿಎಂ, “ಧರ್ಮಯುದ್ಧದಲ್ಲಿ ಯಾವಾಗಲೂ ಮಂಜುನಾಥನ ದರ್ಶನ ಪಡೆಯುತ್ತೇನೆ, ಯುದ್ಧ ಆರಂಭಿಸುವ ಮುನ್ನ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿ ದರ್ಶನ ಪಡೆಯುವ ಪದ್ಧತಿ ಇಟ್ಟುಕೊಂಡಿದ್ದೇನೆ” ಎಂದರು.
ಇನ್ನೊಂದೆಡೆ ಮಾ 27 ಬುಧವಾರ ನಾಳೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್, ಅಧ್ಯಕ್ಷರುಗಳು, ಹಿರಿಯ ಮುಖಂಡರುಗಳು, ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಭೇಟಿಗಾಗಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದು ಪಕ್ಷದ ಈ ಮಹತ್ವದ ಸಭೆಯ ಮಾಹಿತಿಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾಗಲಿ, ಇತರ ಮುಖಂಡರುಗಳಾಗಲಿ ಬೂತ್ ಮಟ್ಟದ ಹಿರಿಯ ಮುಖಂಡರಿಗೆ ಕಾರ್ಯಕರ್ತರಿಗೆ ಸಮರ್ಪಕವಾಗಿ ಮಾಹಿತಿ ನೀಡಿಲ್ಲ , ಅಭ್ಯರ್ಥಿಯ ಆಗಮನವೆಂದರೆ ಇಷ್ಟೊಂದು ನಿರ್ಲಕ್ಷ್ಯತನವೇಕೆ , ಅಲರ್ಜಿ ಯಾಕೆ? ಎಂಬಿತ್ಯಾದಿ ಪ್ರಶ್ನೆಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಯಾರೇ ಆಗಿರಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಲೋಕಸಭಾ ಅಭ್ಯರ್ಥಿಗಳು ಆಗಮಿಸುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಗಂಗಾಧರ ಗೌಡ ಹಾಗೂ ಮಾಜಿ ಶಾಸಕ ಕೆ ವಸಂತ ಬಂಗೇರ ಇವರಿಬ್ಬರ ನೇತೃತ್ವವಿರುತ್ತಿದ್ದರೆ ಕಾರ್ಯಕರ್ತರ ಉತ್ಸಾಹವೇ ಬೇರೆ ಎಂಬ ಮಾತುಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿದೆ. ಆದರೆ ನಾಳೆ ಬೆಳ್ತಂಗಡಿಗೆ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಆಗಮಿಸುತ್ತಿರುವ ಬಗ್ಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಾಯಕರಲ್ಲಿ ಕಾರ್ಯಕರ್ತರ ನಿರೀಕ್ಷೆಯ ಮಟ್ಟದಲ್ಲಿ ಉತ್ಸಾಹವಾಗಲಿ, ಸಿದ್ಧತೆಯಾಗಲಿ ಕಂಡು ಬರುತ್ತಿಲ್ಲವೇಕೆ ಎಂಬ ಸಾಮಾನ್ಯ ಪ್ರಶ್ನೆ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
Post Comment