ಚಾರ್ಮಾಡಿ ತರಿಮಲೆಯ ದಟ್ಟಡವಿ ಮಧ್ಯದಲ್ಲೊಂದು ವಿಶಿಷ್ಠ ಆರಾಧನೆ ಆನೆಗಳು ಗಸ್ತು ತಿರುಗುವ ಕಾಡಿನ ಮರೆಯಲ್ಲಿ 101 ದೇವತೆಗಳಿಗೆ ಕಲಾವಳಿ ಉತ್ಸವ..! ಅಡವಿ ತಾಯಿ ಚೌಡೇಶ್ವರಿಗೆ ಗ್ರಾಮಸ್ಥರಿಂದ ವಾರ್ಷಿಕ ‘ಮಂಜ’ ಸಂಭ್ರಮ
ಬೆಳ್ತಂಗಡಿ : ಪ್ರಕೃತಿ ರಮಣೀಯ ಹಸಿರು ಸ್ವರ್ಗದಂತಿರುವ ಚಾರ್ಮಾಡಿ ಘಾಟ್ ನ ತರಿಮಲೆಯ ಹಚ್ಚ ಹಸಿರ ದಡ್ಡ ಅಡವಿಯ ನಡುವೆ ಸದ್ದು ಗದ್ದಲವಿಲ್ಲದ ಸಾಂಪ್ರದಾಯಿಕ ಆರಾಧನೆಯೊಂದು ಮೇ ತಿಂಗಳಲ್ಲಿ ನಡೆಯುತ್ತಿದ್ದು ಈ ವರ್ಷದ ‘ಕಲಾವಳಿ ಉತ್ಸವ’ (ಮಂಜ) ಎಂಬ ಸೇವೆಯು ಗುರುವಾರ ರಾತ್ರಿ ನೆರವೇರಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ ತರುವೆ ಗ್ರಾಮದ ಚೌಡೇಶ್ವರಿ ಅಮ್ಮನವರ ಕಲಾವಳಿ ಉತ್ಸವ(ಮಂಜ)ವು ಪ್ರತೀ ವರ್ಷ ಮೇ ತಿಂಗಳಲ್ಲಿ ಮೊದಲ ಮಳೆ ಭೂಮಿಗೆ ತಂಪೆರೆದ ಬೆನ್ನಲ್ಲೇ ನಡೆಯುವುದು ವಾಡಿಕೆ. ತರಿಮಲೆ ಎಂಬ ಪ್ರಕೃತಿರಮಣೀಯ ಸ್ಥಳವು ಚೌಡೇಶ್ವರಿ ಅಮ್ಮ ಪ್ರಧಾನ ದೇವತೆಯೂ ಸೇರಿದಂತೆ 101 ದೇವತೆಗಳು ನೆಲೆಸಿರುವ ತಾಣವೆಂಬ ಭಕ್ತಾದಿಗಳ ಗಾಢ ನಂಬಿಕೆಯಿದ್ದು ನೂರಾರು ಕಲ್ಲುಗಳನ್ನು ನೆಟ್ಟು ದೇವತೆಗಳ ಪ್ರತೀಕವೆಂದು ನಂಬಲಾಗುತ್ತಿದೆ.
ಪ್ರಾರಂಭದಲ್ಲಿ ಮಡಿಯುಟ್ಟ ವ್ಯಕ್ತಿ 101 ದೇವತೆಗಳಿಗೆ 101 ಗೊನೆ ಕಡಿದು, ದೀಪಾರಾಧಿಸಿ, ನೈವೇದ್ಯ ಮಾಡಿ ಬಳಿಕ ಆರಾಧಿಸಲಾಗುತ್ತದೆ. ದೇವತೆಗಳಿಗೆ ಗೊನೆ,ಹಣ್ಣು ಕಾಯಿ, ನೈವೈದ್ಯ ಸಹಿತ ನಡೆಯುವ ಧಾರ್ಮಿಕ ಸಂಭ್ರಮಕ್ಕೆ ‘ಮಂಜ’ ಅಥವಾ ಕಲಾವಳಿ ಉತ್ಸವ ಎಂದು ಕರೆಯುತ್ತಾರೆ. ಕೊಟ್ಟಿಗೆಹಾರದಿಂದ ಪಶ್ಚಿಮಘಟ್ಟದ ಏರು, ಇಳಿಜಾರು, ಅಂಕು-ಡೊಂಕಾದ ಗುಡ್ಡದ ದಾರಿಯಲ್ಲಿ ಚಾರಣ ನೆನಪಿಸುವ ನಡಿಗೆಯಲ್ಲಿ 6 ಕಿ.ಮೀ ಸಾಗಿದರೆ ದಟ್ಟ ಅರಣ್ಯದ ಮಧ್ಯೆ ತರಿಮಲೆ ಎಂಬ ಜಾಗ ಸಿಗುತ್ತದೆ. ಇದೇ ತರಿಮಲೆ ತರುವೆ ಚೌಡೇಶ್ವರಿ ಅಮ್ಮನವರ ಆದಿ ಸ್ಥಾನವೆಂದು ನಂಬಲಾಗಿದೆ.
ಅದ್ಭುತ ಅನುಭವ ನೀಡುವ ತರಿಮಲೆಯಲ್ಲಿ ಹಲವು ವರ್ಷಗಳಿಂದ ಚೌಡೇಶ್ವರಿ ತಾಯಿಗೂ ಪರಿವಾರ ದೈವಗಳಿಗೂ ಆಯಾ ಸಾಂಪ್ರದಾಯಿಕ ವಿಧಿ ,ವಿಧಾನಗಳನ್ನು ಅನುಸರಿಸಿಕೊಂಡು ‘ಮಂಜ’ ಎಂಬ ಆರಾಧನೆ, ಅಥವಾ ಕಲಾವಳಿ ಉತ್ಸವವು ನಡೆಯುತ್ತಾ ಬರುತ್ತಿದೆ. ಆನೆ, ಕಾಡುಕೋಣ,ಜಿಂಕೆ, ಚಿರತೆಗಳ ಗಸ್ತು ತಿರುಗುವ , ಗಗನಚುಂಬಿ ದೈತ್ಯ ಮರಗಳ ದಟ್ಟ ಕಾಡಿನ ಮಧ್ಯೆ ಜರಗುವ ಪ್ರಕೃತಿ ಆರಾಧನೆಯ ಭಾಗದಂತಿರುವ ಈ ಧಾರ್ಮಿಕ ಸಂಭ್ರಮದಲ್ಲಿ ನೆರಿಯಾ, ಬಾಂಜಾರು, ಚಾರ್ಮಾಡಿ, ತರುವೆ ಕೊಟ್ಟಿಗೆಹಾರ ಸುತ್ತಮುತ್ತಲಿನ ನೂರಾರು ಭಕ್ತರು ಭಕ್ತಿ,ಭಾವ ತುಂಬಿದ ಹರಕೆಯೊಂದಿಗೆ ಚಾರ್ಮಾಡಿ ತರಿಮಲೆಗೆ ಧಾವಿಸಿ ಬಂದು ಭಾಗಿಯಾಗುತ್ತಿರುವುದು ನಿರಾಡಂಬರ ಉತ್ಸವದ ವೈಶಿಷ್ಟ್ಯತೆ.
ಚೌಡೇಶ್ವರಿ ದೇವಿಯ ಕಲಾವಳಿ ಉತ್ಸವವು ಈ ಭಾಗದ ಪ್ರಮುಖ ಆರಾಧನೆಯಾಗಿದೆ. ಈ ಸಂಭ್ರಮದಲ್ಲಿ ಗ್ರಾಮಸ್ಥರು ಮಾತ್ರವಲ್ಲದೇ ಊರ,ಪರ ಊರ ಭಕ್ತಾದಿಗಳು ಪಾಲ್ಗೊಂಡು ಭಕ್ತಿ,ಭಾವಗಳಿಂದ ಸಂಭ್ರಮಿಸುತ್ತಾರೆ. ನೂರಾರು ಭಕ್ತರು ಅರಣ್ಯದಂಚಿನ ಕಾಲುದಾರಿಯಲ್ಲಿ ಆದಿ ಸ್ಥಳವಾದ ತರಿಮಲೆಯನ್ನು ತಲುಪುತ್ತಾರೆ.ತರಿಮಲೆಯ ಮಂಜದಲ್ಲಿ ಸಾಂಪ್ರದಾಯಿಕ ಪೂಜಾ ವಿಧಿ,ವಿಧಾನಗಳು ಮುಗಿದು ಕೊನೆಯಲ್ಲಿ ಸೇರಿದ ಎಲ್ಲಾ ಭಕ್ತಾದಿಗಳು ಸಾಮೂಹಿಕ ಅನ್ನ ಸಂತರ್ಪಣೆಯ ಬಳಿಕ ಪ್ರಸಾದ ಸ್ವೀಕರಿಸಿ ಮಧ್ಯ ರಾತ್ರಿ ಕಾಡಿನಿಂದ ನಿರ್ಗಮಿಸುತ್ತಾರೆ.
Post Comment