ಮುರುಕುಂಬಿ ಸೆಲೂನ್- ಹೋಟೆಲ್ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣ 98 ಅಪರಾಧಿಗಳಿಗೆ ಜೀವಾವಧಿ, ಮೂವರಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಮುರುಕುಂಬಿ ಸೆಲೂನ್- ಹೋಟೆಲ್ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣ 98 ಅಪರಾಧಿಗಳಿಗೆ ಜೀವಾವಧಿ, ಮೂವರಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

Share
IMG-20241025-WA0000 ಮುರುಕುಂಬಿ ಸೆಲೂನ್- ಹೋಟೆಲ್ ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣ 98 ಅಪರಾಧಿಗಳಿಗೆ ಜೀವಾವಧಿ, ಮೂವರಿಗೆ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಕೊಪ್ಪಳ : ಜಗತ್ತೇ ಕೊಂಡಾಡುವ ಶ್ರೇಷ್ಠ ಸಂವಿಧಾನ ಜಾರಿಯಲ್ಲಿರುವ ಭಾರತದಲ್ಲಿ ದಲಿತರ ಮೇಲಾಗುತ್ತಿರುವ ಹಲ್ಲೆ, ಅತ್ಯಾಚಾರ, ಕೊಲೆ ಮುಂತಾದ ಗಂಭೀರ ದೌರ್ಜನ್ಯ ಪ್ರಕರಣಗಳ ಪೈಕಿ ಗಣನೀಯ ಸಂಖ್ಯೆಯ ದೌರ್ಜನ್ಯ ಪ್ರಕರಣಗಳು ಪೊಲೀಸ್ ಠಾಣೆ
ಮೆಟ್ಟಲೇರಿದ ನಂತರದಲ್ಲಿ ರಾಜಿ ಸಂಧಾನಗಳ ಮೂಲಕ ಮುಕ್ತಾಯಗೊಳ್ಳುತ್ತವೆ, ದಲಿತ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ಪೊಲೀಸ್ ಠಾಣೆಗಳು ರಾಜಿ ಪಂಚಾಯ್ತಿ ಕಟ್ಟೆಗಳಾಗಿ ಬದಲಾಗುತ್ತಿವೆ, ಎಂಥಾ ಘೋರ ದೌರ್ಜನ್ಯ ನಡೆದರೂ ಗಂಭೀರ ಪ್ರಕರಣವೇ ದಾಖಲಾದರೂ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಮಾತ್ರ ಮರೀಚಿಕೆ ಎಂಬ ಹತಾಶಾ ಭಾವನೆ ದಲಿತರಲ್ಲಿ ಮೂಡುವಷ್ಟರ ಮಟ್ಟಿಗೆ ಕೆಲವೊಂದು ಪೊಲೀಸ್ ಠಾಣೆಗಳು ಅಥವಾ ಪೊಲೀಸ‌ರ ಮನಸ್ಥಿತಿ ತಲುಪಿದೆ.
ಆದರೆ ಇದೀಗ ಕೊಪ್ಪಳ ಗಂಗಾವತಿಯಲ್ಲಿ 10 ವರ್ಷಗಳ ಹಿಂದೆ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಿಂದ
ದೇಶದಲ್ಲಿ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಇನ್ನಷ್ಟು ಭರವಸೆ,ನಿರೀಕ್ಷೆಗಳನ್ನು ಮೂಡಿಸಿದೆ. ಏಕೆಂದರೆ
ಇದೊಂದು ಕರ್ನಾಟಕದ ಮಟ್ಟಿಗೆ ಐತಿಹಾಸಿಕ ತೀರ್ಪು.

ಅ.24ರಂದು ಮಾತ್ರ ದಲಿತರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಇಡೀ ದೇಶವೇ ತಿರುಗಿ ನೋಡುವಂಥ ಐತಿಹಾಸಿಕವಾದ ತೀರ್ಪನ್ನು ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಸಿ ಅವರು ನೀಡಿದ್ದಾರೆ. ದಲಿತರ ಮೇಲೆ ಹಲ್ಲೆ ನಡೆಸಿ , ಮನೆಗೆ ಬೆಂಕಿ ಹಚ್ಚಿ ಧ್ವಂಸಗೈದು ಎಸಗಿದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಅಪರಾಧಿಗಳ ಪೈಕಿ 98 ಅಪರಾಧಿಗಳಿಗೆ ಇದೀಗ ಕೋರ್ಟ್ ‘ಜೀವಾವಧಿ’ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ಪ್ರಕರಣದ ಇನ್ನುಳಿದ ಮೂವರು ಅಪರಾಧಿಗಳಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 2000 ರೂಪಾಯಿ ದಂಡ ವಿಧಿಸಲಾಗಿದೆ.

ಘಟನೆಯ ಹಿನ್ನಲೆ :
2014ರಲ್ಲಿ ಗಂಗಾವತಿ ತಾಲೂಕಿನ ಮುರುಕುಂಬಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಕ್ಷೌರದಂಗಡಿಗೆ ಮತ್ತು ಹೋಟೆಲ್ ಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ ವಿಚಾರವಾಗಿ ಜಗಳ ನಡೆದು ಬಳಿಕ ಪೊಲೀಸ್ ಅಧಿಕಾರಿಗಳು ಮುರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೇ ಕೋಪದಿಂದ “ಸರ್ವಣೀಯರು” ಎಂದು ಕರೆಸಿಕೊಳ್ಳುವ ಜನ ರಾತ್ರಿ ಸಮಯದಲ್ಲಿ ದಲಿತರ ಕೇರಿಗೆ ನುಗ್ಗಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿ ಗ್ರಾಮದ 117 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕಳೆದ ಅಕ್ಟೋಬರ್ 21ರಂದು ಜಿಲ್ಲಾ ನ್ಯಾಯಾಧೀಶರು ಎಲ್ಲಾ ಆರೋಪಿಗಳು ಕೋರ್ಟ್ ಹಾಜರಾಗಲು ಸೂಚಿಸಿದ್ದರು.

117 ಅಪರಾಧಿಗಳ ಪೈಕಿ 101 ಅಪರಾಧಿಗಳು ಕೋರ್ಟ್ ಗೆ ಹಾಜರಾಗಿದ್ದರು. ಉಳಿದ 16 ಅಪರಾಧಿಗಳು ಮೃತಪಟ್ಟಿರುವ ಮಾಹಿತಿ ನೀಡಿರುವ ಹಿನ್ನೆಲೆ 101 ಅಪರಾಧಿಗಳ ವಿರುದ್ಧ ಇರುವ ದಾಖಲೆ ಪರಿಶೀಲಿಸಿದ ನ್ಯಾಯಾಧೀಶರು, ಅಕ್ಟೋಬರ್ 21ರಂದು ಎಲ್ಲಾ ಅಪರಾಧಿಗಳ ವಿರುದ್ಧ ಆರೋಪ ಸಾಬೀತುಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಿ ಅಕ್ಟೋಬರ್ 24ಕ್ಕೆ ಶಿಕ್ಷೆ ಪ್ರಕಟಿಸುವುದಾಗಿ ತೀರ್ಪು ಕಾಯ್ದಿರಿಸಿದ್ದರು. ಪ್ರಕರಣದ ಎಲ್ಲಾ ಅಪರಾಧಿಗಳ ಮೇಲೆ ಅಟ್ರಾಸಿಟಿ, ಹಲ್ಲೆ, ಜೀವ ಬೆದರಿಕೆ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಘೋಷಣೆ ಮಾಡಿದ್ದಾರೆ. ಶಿಕ್ಷೆಗೊಳಪಟ್ಟ ಎಲ್ಲಾ ಅಪರಾಧಿಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಜಿಲ್ಲಾ ಕಾರಾಗೃಹಕ್ಕೆ ಹಾಜರುಪಡಿಸಿದ ಪೊಲೀಸರು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದಾರೆ.
ಕಣ್ಣೀರಿಟ್ಟ ಅಪರಾಧಿಗಳ ಕುಟುಂಬಸ್ಥರು ಜೀವಾವಧಿ ಶಿಕ್ಷೆಯ ತೀರ್ಪು ಹೊರ ಬರುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟಿದ್ದಾರೆ. ಮಹಿಳೆಯರು, ಮಕ್ಕಳು, ಯುವಕರು ಗ್ರಾಮದ ಮುಖಂಡರು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ, ತಪ್ಪು ಮಾಡದವರಿಗೆ ಯಾಕೆ ಶಿಕ್ಷೆ ಕೊಡುತ್ತಾರೆ. 9 ವರ್ಷಗಳ ನಂತರ ಯಾಕೆ ಶಿಕ್ಷೆ ಕೊಡುತ್ತಿದ್ದಾರೆ. ನಾವೆಲ್ಲರೂ ಗ್ರಾಮದಲ್ಲಿ ಒಂದಾಗಿದ್ದೀವಿ. ಇದೀಗ ಯಾವುದೇ ಅಂತಹ ವಾತಾವರಣ ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ಗಂಗಾವತಿ ಪೊಲೀಸರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿದ್ದಲ್ಲದೇ, ಡಿಪಿಎಸ್ ಸೇರಿದಂತೆ ಇಡೀ ಪೊಲೀಸ್ ಪಡೆಯೇ ಗ್ರಾಮದಲ್ಲಿ ರಾತ್ರಿ ಠಿಕಾಣಿ ಹೂಡಿದೆ. ಗ್ರಾಮದಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Previous post

ವಿಎಚ್ ಪಿ – ಶಾಸಕ ಅಶೋಕ್ ರೈ ಸಖ್ಯ  ವಿಚಾರ : ಕಾಂಗ್ರೆಸ್ ಸ್ಪಷ್ಟೀಕರಣ ನೀಡಲಿ : ಸಿಪಿಐಎಂ ಮುಖಂಡ ಬಿ.ಎಂ. ಭಟ್ ಆಗ್ರಹ

Next post

ಕೊಕ್ಕಡ ಸೌತಡ್ಕ ದೇವಸ್ಥಾನದ  ಭಕ್ತರು ಖರೀದಿಸಿದ  ಸ್ಥಿರಾಸ್ತಿ  ಬೇನಾಮಿ ಟ್ರಸ್ಟ್ ಗಳಿಗೆ ಅಕ್ರಮ ವರ್ಗಾವಣೆ ಪ್ರಕರಣ :  ಮರು ಹಸ್ತಾಂತರಕ್ಕೆ ಅಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿಗೆ ನಿರ್ಧಾರ

Post Comment

ಟ್ರೆಂಡಿಂಗ್‌