ಗರ್ಡಾಡಿ ಶ್ರೀ ನಾಗಚಾಮುಂಡೇಶ್ವರಿ ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆಯಂತೆ..!?

ಗರ್ಡಾಡಿ ಶ್ರೀ ನಾಗಚಾಮುಂಡೇಶ್ವರಿ ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆಯಂತೆ..!?

Share

IMG-20241030-WA0001 ಗರ್ಡಾಡಿ ಶ್ರೀ ನಾಗಚಾಮುಂಡೇಶ್ವರಿ ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆಯಂತೆ..!?

ಬೆಳ್ತಂಗಡಿ : ಗರ್ಡಾಡಿ ಗ್ರಾಮದಲ್ಲಿ ಕೆಲವು ವರ್ಷಗಳಿಂದ ದೈವ ಗುಡಿಯೊಂದನ್ನು ನಿರ್ಮಿಸಿಕೊಂಡಿರುವ ಪರಿಶಿಷ್ಟ ಜಾತಿಯ ವ್ಯಕ್ತಿಯೋರ್ವರು ದೈವ, ದೇವರ ಸೇವಕರಾಗಿದ್ದು ಪ್ರಶ್ನೆ, ಬಲಿಮೆ, ಮಾಟ, ಮಂತ್ರ, ದೆವ್ವ- ಪ್ರೇತೋಚ್ಛಾಟನೆ ಹೆಸರಲ್ಲಿ ನೊಂದು ಗುಡಿಗೆ ಬರುವ ‌ಸ್ವಜಾತಿಯ ಜನರಿಗೆ ಪ್ರವೇಶ ನಿರಾಕರಿಸಿ ಅವಮಾನಿಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಹೊನ್ನೆಕಟ್ಟೆ ಎಂಬಲ್ಲಿನ ನಿವಾಸಿ ಪರಿಶಿಷ್ಟ ಜಾತಿಯ ದಿನೇಶ ಎಂಬವರು ತನ್ನ ಶ್ರಿ ನಾಗ ಚಾಮುಂಡೇಶ್ವರಿ ಸನ್ನಿಧಿ’ ಎಂಬ ಗುಡಿಯಲ್ಲಿ ತನ್ನದೇ ಸಮುದಾಯದ ಮುಗ್ಧ ಜನರು ಪ್ರಾರ್ಥಿಸಲು ಬಂದಾಗ ಹೊರಗೆ ನಿಲ್ಲಿಸಿ ವಿಲಕ್ಷಣ ಮಡಿವಂತಿಕೆ ಅನುಸರಿಸುತ್ತಾ ಸ್ವಜಾತಿ ಬಾಂಧವರನ್ನೇ ಶೋಷಣೆ ಮಾಡುತ್ತಿದ್ದಾರೆ ಎಂಬುದು ಕೇಳಿ ಬಂದ ಆರೋಪ.
ಇಲ್ಲಿನ ಶ್ರಿ ನಾಗ ಚಾಮುಂಡೇಶ್ವರಿ ಗುಡಿಗೆ ಪ್ರಶ್ನೆ- ಬಲಿಮೆ, ಮಾಟ ಮಂತ್ರ , ದೆವ್ವ- ಪ್ರೇತೋಚ್ಛಾಟನೆ ಎಂಬಿತ್ಯಾದಿ ವಾಮ ಕ್ರಿಯೆಗಳಿಗಾಗಿ ನೊಂದ ಮುಗ್ಧರು ನಿತ್ಯ ಬರುತ್ತಾರೆ. ಹೀಗೆ ಊರು , ಪರ ಊರುಗಳಿಂದ ಗುಡಿಗೆ ಭಕ್ತಿಯಿಂದ ಬರುವ ಸ್ವಜಾತಿಯ ಭಕ್ತರು ಒಳಗೆ ಪ್ರವೇಶಿಸದಂತೆ ಬಾಗಿಲಲ್ಲಿ ಮೆಟ್ಟಿಲ ಬಳಿ ಕೈ ಅಡ್ಡ ಹಿಡಿದು ನಿಂತು ಒಳಗೆ ಹೋಗಲು ಬಿಡದೆ ಸಾರ್ವಜನಿಕವಾಗಿ ಅವಮಾನಿಸುತ್ತಿರುವ ಕೆಲವು ಪ್ರಸಂಗಗಳು ನಡೆದಿರುವುದು ಗ್ರಾಮಸ್ಥರಿಗೆ ತಿಳಿಯದ ವಿಚಾರವೇನಲ್ಲ ಎಂದು ಅವಮಾನಿತರಾದ ಹಲವರು ಹೇಳುತ್ತಾರೆ.
ಸುಮಾರು ಐದು ವರ್ಷಗಳಿಂದ ‘ಶ್ರೀ ನಾಗ ಚಾಮುಂಡೇಶ್ವರಿ ಸನ್ನಿಧಿ’ ಎಂಬ ಹೆಸರಿನಲ್ಲಿ ದೈವದ ಗುಡಿಯನ್ನು ನಿರ್ಮಿಸಿದ್ದು ದೈವ ಸೇವಕನಾಗಿರುವುದು ಜಾತಿ ಬಾಂಧವರಿಗೆ ದೈವಾರಾಧಕರಿಗೆ ಗೌರವಾಭಿಮಾನಗಳಿದ್ದರೂ ಈ ವ್ಯಕ್ತಿ ವಿಪರೀತ ಮಡಿವಂತಿಕೆ ಮೆರೆಯುವುದು ಮುಗ್ಧ ಭಕ್ತರಿಗೆ ಒಂದು ರೀತಿಯ ಮಾನಸಿಕ ಕಿರಿ ಕಿರಿ ಉಂಟಾಗುತ್ತದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬರುತ್ತಿದೆ.
ನಾಗ ಚಾಮುಂಡೇಶ್ವರಿ ದೇವರ ಸೇವೆ ಮಾಡುತ್ತಿರುವುದಲ್ಲದೆ ಸಮಸ್ಯೆ, ಸಂಕಷ್ಟಗಳಿಂದ ಬರುವವರಿಗೆ ಕವಡೆ ಪ್ರಶ್ನೆಯೂ ಇರುತ್ತದೆ.
ಕಷ್ಟ, ನಷ್ಟ, ಸಾವು-ನೋವುಗಳಿಗೆ ಪರಿಹಾರ ಅರಸಿ ಗುಡಿಗೆ ನೊಂದು ಬರುವ ಸ್ವಜಾತಿಯ ಮುಗ್ಧ ಜನರನ್ನು ಗುಡಿಯೊಳಗೆ ಪ್ರವೇಶ ಮಾಡಲು ಬಿಡದೆ ಹೊರಗಿನ ಸಿಟೌಟ್ ಬಳಿ ನಿಲ್ಲಿಸುವುದು, ಹಣ, ಆಮಂತ್ರಣಗಳನ್ನು ಕೈಯಲ್ಲಿ ಸ್ವೀಕರಿಸದೆ “ಅಲ್ಲೆ ಇಡಿ” ಎಂದು ಸೂಚಿಸಿ ತೀರ್ಥ ಹಾಕಿ ಶುದ್ಧ ಮಾಡಿದ ಮೇಲೆಯೇ ಆಮಂತ್ರಣ ಸ್ವೀಕರಿಸುವುದು ಏನೇ ಕೊಟ್ಟರೂ ನೇರ ಕೈಯಲ್ಲಿ ಮುಟ್ಟುವುದಿಲ್ಲ ಎಂಬ ಮಾಹಿತಿ ಬಂದಿದೆ.
ತನ್ನದೇ ಜಾತಿಯವರಿಗೆ ಮಾತ್ರ ಗುಡಿಯೊಳಗೆ ಪ್ರವೇಶವಿಲ್ಲ, ಮೇಲ್ಜಾತಿ ಎಂದು ಕರೆಯಿಸಿಕೊಳ್ಳುವ ಇತರ ಸಮುದಾಯಗಳ ಭಕ್ತರು ಬಂದರೆ ದೈವಗಳಿಗಿಂತ ಹೆಚ್ಚು ಭಯ, ಭಕ್ತಿಯಿಂದ ಎದ್ದು ಬಿದ್ದು ಅತಿ ವಿನಯದಿಂದ ಆತಿಥ್ಯ ನೀಡುವುದು, ತನ್ನದೇ ಜಾತಿಯವರು ಬಂದರೆ ಮಾತ್ರ ಪಕ್ಕಾ‌’ಮೇಲ್ಜಾತಿವಾದಿ’ಯಂತೆ ವರ್ತಿಸಿ ಸಂಪ್ರದಾಯವಾದಿ ಬ್ರಾಹ್ಮಣನನ್ನೂ ಮೀರಿಸುವಂತೆ ಮಡಿವಂತಿಕೆ ತೋರಿಸುವುದು ಇತ್ಯಾದಿ ಆರೋಪಗಳಿವೆ.
ಇಂದಿಗೂ ಸಾಮಾಜಿಕವಾಗಿ ಅಶ್ಪೃಶ್ಯತೆ, ಅವಮಾನಗಳನ್ನು ಅನುಭವಿಸುವ ನೋವು, ಅವಮಾನಗಳ ಅನುಭವವಿದ್ದರೂ ಇದೀಗ ದೈವ ಸೇವಕನಾಗಿ ತನ್ನದೇ ಜಾತಿ ಬಾಂಧವರು ಗುಡಿಗೆ ಬಂದರೆ ಕೀಳು ಮಟ್ಟದಿಂದ ನಡೆಸಿಕೊಳ್ಳುತ್ತಾ ನಿರ್ದಾಕ್ಷೀಣ್ಯವಾಗಿ ಶೋಷಣೆ ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿತ್ತು.
ಗ್ರಾಮದಲ್ಲಿ ದೈವ ಮತ್ತು ಗುಡಿಯ ಹೆಸರಿನಲ್ಲಿ ಮೌಢ್ಯ ಪ್ರಚೋದಿಸುತ್ತಾ, ತಮ್ಮ ಕಷ್ಟಗಳಿಂದ ನೊಂದು ಪರಿಹಾ‌‌‌ರ ಅರಸಿ ಬರುವ ಮುಗ್ಧ ಜನರಲ್ಲಿ ಮಂತ್ರವಾದ, ದೈವಗಳ ಹೆಸರಿನಲ್ಲಿ ಭಯ , ಆತಂಕ ಹುಟ್ಟಿಸಿ ದೈವ ಭಕ್ತರನ್ನು ಶೋಷಣೆ ಮಾಡುತ್ತಿರುವ ಶ್ರೀ ನಾಗಚಾಮುಂಡೇಶ್ವರಿ ಗುಡಿಯ ಸೇವಕ ದಿನೇಶ್ ರವರಿಗೆ ದೈವಾರಾಧನೆಯ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ ದೈವತ್ವದ ಪಾಠವನ್ನು ಬಲ್ಲವರು ನೀಡಬೇಕಾಗಿದೆ ಎಂಬ ಮಾತುಗಳು ನೊಂದವರಿಂದ ಕೇಳಿ ಬಂದಿತ್ತು.

‘News ಕೌಂಟರ್’ ವರದಿ ಬಗ್ಗೆ ಸಂಪಾದಕರಿಗೆ ದೂರವಾಣಿ ಕರೆ ಮಾಡಿರುವ ಗರ್ಡಾಡಿ ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯ ಸೇವಕ, ಸತ್ಯಸಾರಮಾನಿ ದೈವಗಳ ಮಧ್ಯಸ್ಥ ದಿನೇಶ್ ಹೊನ್ನೆಕಟ್ಟೆ ಅವರು ” ನಾನು ಕೆಲವು ವರ್ಷಗಳಿಂದ ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೈವ-ದೇವರ ಸೇವೆಯಲ್ಲಿ ತೊಡಗಿದ್ದು ಸತ್ಯಸಾರಮಾನಿ ದೈವಗಳ ಮಧ್ಯಸ್ಥನಾಗಿಯೂ ಸೇವೆ ಸಲ್ಲಿಸುತ್ತಿದ್ದು ಬೆಳ್ತಂಗಡಿ ತಾಲೂಕಿನ, ವೇಣೂರು, ಪಡಂಗಡಿ, ಹಚ್ಚಾಡಿ, ಬಡಗಕಜೆಕಾರು ಹಾಗೂ ಮೂಡಿಗೆರೆ ತಾಲೂಕಿನ ಕೆಲವು ಸತ್ಯಸಾರಮಾನಿ ಕ್ಷೇತ್ರಗಳಲ್ಲಿ ಮಧ್ಯಸ್ಥನಾಗಿ ನಿಷ್ಠೆಯಿಂದ ಸೇವೆ ಮಾಡುತ್ತಾ ಬರುತ್ತಿದ್ದೇನೆ.
ನಾನು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುತ್ತಿದ್ದೇನೆ.
ನಮ್ಮ ಶ್ರೀ ನಾಗ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಎಲ್ಲಾ ಜಾತಿಯವರಿಗೂ ಒಂದೇ ರೀತಿಯ ಮುಕ್ತ ಪ್ರವೇಶ ಇರುತ್ತದೆ.
ನನ್ನ ಜಾತಿಗೆ ಪ್ರವೇಶವಿಲ್ಲ, ಬೇರೆ ಸಮುದಾಯದವರಿಗೆ ಪ್ರವೇಶ ಎಂಬ ಯಾವುದೇ ತಾರತಮ್ಯ ಇಲ್ಲ, ನಾನು ದೈವಗಳ ಮಧ್ಯಸ್ಥನಾಗಿ ದೇವರ ಚಾಕರಿ ಮಾಡುವ ಸೇವಕ ಮಾತ್ರ, ಮಾಟ, ವಶೀಕರಣ ಮಂತ್ರದ ಮಂತ್ರವಾದಿ ಅಲ್ಲ, ನಮ್ಮ ಕ್ಷೇತ್ರದ ಕೆಲವೊಂದು ಶಿಸ್ತುಗಳಿಂದ ಕೆಲವರಿಗೆ ತಪ್ಪು ಕಲ್ಪನೆಗಳು ಬಂದಿರಬಹುದು. ಅಥವಾ ಬೇರೆ ದುರುದ್ದೇಶಗಳಿಂದ ಆರೋಪಿಸಿರಬಹುದು.
ಆರೋಪಿಸುವಂತೆ ನಮ್ಮಲ್ಲಿ ಏನಾದರೂ ವ್ಯತ್ಯಾಸ, ಲೋಪಗಳಿದ್ದರೆ ಸರಿಪಡಿಸಿಕೊಳ್ಳುತ್ತೇವೆ.” ಎಂದು ಸ್ಪಷ್ಠೀಕರಣ ನೀಡಿದ್ದಾರೆ.

ಗೌರವಾನ್ವಿತ ವೀಕ್ಷಕರೆ;
‘News ಕೌಂಟರ್’ ಚಾನೆಲ್ ನಲ್ಲಿ ಶುಕ್ರವಾರವಷ್ಟೇ ಗರ್ಡಾಡಿ
ಶ್ರೀ ನಾಗಚಾಮುಂಡೇಶ್ವರಿ ಸನ್ನಿಧಿಯ ವಿಲಕ್ಷಣ ಮಡಿವಂತಿಕೆ ಆಚರಣೆ ಕುರಿತು ವರದಿ ಪ್ರಕಟಿಸಲಾಗಿತ್ತು.
ಈ ವರದಿ ಪ್ರಸಾರವಾದ ಬೆನ್ನಲ್ಲೇ ನನಗೆ ಮತ್ತು ನಮ್ಮ ತಂಡದ ಕೆಲವರಿಗೆ ಕೆಲವೊಂದು ದೂರವಾಣಿ ಕರೆಗಳು ಬಂದಿವೆ. ಆ ಪೈಕಿ ಒಂದು ಕರೆಯಲ್ಲಿ ಪ್ರಸ್ತಾಪವಾದ ‘ಗಂಭೀರ’ ವಿಚಾರವನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಬೇಕಾಗಿದೆ.
ಮುಂದೆ ನಿರೀಕ್ಷಿಸಿ…
-ಸಂಪಾದಕ.

Post Comment

ಟ್ರೆಂಡಿಂಗ್‌