ಬೆಳ್ತಂಗಡಿ ಪ.ಪಂ. ನಿರ್ಲಕ್ಷ್ಯದಿಂದ ಸ್ಮಶಾನ ‘ನಿರ್ಜೀವ’ : ನಿವೃತ್ತ ಪೌರ ಕಾರ್ಮಿಕನ ಅಂತ್ಯ ಸಂಸ್ಕಾರ ಲಾಯಿಲಾ ಸ್ಮಶಾನದಲ್ಲಿ..!

ಬೆಳ್ತಂಗಡಿ : ರೆಂಕೆದಗುತ್ತು-ಕೆಲ್ಲಗುತ್ತು ಮಧ್ಯೆ ಸಮೀಪದ ಗುಡ್ಡದಲ್ಲಿರುವ ಬಡ ಕುಟುಂಬಗಳ ಮೃತ ದೇಹಗಳ ಅಂತ್ಯ ಸಂಸ್ಕಾರಕ್ಕಾಗಿ ಉಪಯೋಗಕ್ಕೆ ಸಿಗಬೇಕಾಗಿರುವ ಸಾರ್ವಜನಿಕ ಸ್ಮಶಾನವು ಕಳೆದೊಂದು ವರ್ಷದಿಂದ ಶಿಥಿಲಾವಸ್ಥೆಯಲ್ಲಿದ್ದು
ಈ ಭಾಗದ ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಮತ್ತು ಕೆಲ್ಲಗುತ್ತು , ಮುಗುಳಿ, ಹುಣ್ಸೆಕಟ್ಟೆ ಸುತ್ತಮುತ್ತಲಿನಲ್ಲಿ ಯಾರಾದರೂ ಮೃತರಾದರೆ ಇದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಕ್ಕಿದರೆ ಅನುಕೂಲ, ಆದರೆ ಇಲ್ಲಿನ ಸ್ಮಶಾನವು ಕಳೆದ 1 ವರ್ಷದಿಂದ ಹೆಣಗಳೂ ಹಿಂಜರಿಯುವಷ್ಟು ದುಸ್ಥಿತಿಯಲ್ಲಿದೆ.
ಹೌದು; 35 ವರ್ಷಗಳಿಂದ ಬೆಳ್ತಂಗಡಿ ನಗರ ಸ್ವಚ್ಛತೆಗಾಗಿ ಪೌರ ಕಾರ್ಮಿಕರಾಗಿ ದುಡಿದ ರೆಂಕೆದಗುತ್ತು ನಿವಾಸಿ ಅಣ್ಣಿ ಯಾನೆ ಪುನ್ಕುಡ ಎಂಬವರು ಶುಕ್ರವಾರ ನಿಧನರಾಗಿದ್ದು ಇವರ ಮನೆಯಿಂದ 400 ಮೀಟರ್ ದೂರದಲ್ಲಿ ಸಾರ್ವಜನಿಕ ಸ್ಮಶಾನವಿದ್ದರೂ ಇದು ಶಿಥಿಲಾವಸ್ಥೆಯಲ್ಲಿರುವ ಕಾರಣ ಮೃತರ ಅಂತ್ಯಸಂಸ್ಕಾರಕ್ಕೆ 6 ಕಿ.ಮೀ ದೂರದ ಲಾಯಿಲಾ ಸಾರ್ವಜನಿಕ ಸ್ಮಶಾನಕ್ಕೆ ಶವವನ್ನು ಸಾಗಿಸಬೇಕಾಗಿದೆ. 2000 ರೂ. ಕೊಟ್ಟು ಅಂಬ್ಯುಲೆನ್ಸ್ ನಲ್ಲಿ ಸಾಗಿಸಿ
ಅಲ್ಲಿ ಮತ್ತೆ ರೂ. 5,000 ಹಣ ಕೊಟ್ಟು ಅಂತ್ಯಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಶಿಥಿಲಾವಸ್ಥೆಯಲ್ಲಿರುವ ಸ್ಮಶಾನದ ದುರಸ್ತಿಗೆ ಒತ್ತಾಯಿಸಿ ಮೃತರ ಆತ್ಮಗಳು ಧರಣಿ ಕೂರಬೇಕೆಂದು ಪಟ್ಟಣ ಪಂಚಾಯತ್ ಆಡಳಿತವು ಕಾಯುತ್ತಿದೆಯೇ ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿ ಬರುವಂತಾಗಿದೆ.
ಈ ನಿರ್ಲಕ್ಷಿತ ಸ್ಮಶಾನದ ದುಸ್ಥಿತಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತದ ಗಮನಕ್ಕೆ ಬಂದಿಲ್ಲವೇ? ಈ ಭಾಗದ ಜನಪ್ರತಿನಿಧಿಗಳ ಕಣ್ಣಿಗೆ ಬಿದ್ದಿಲ್ಲವೇ? ಮೃತ ದೇಹಗಳ ಅಂತ್ಯ ಸಂಸ್ಕಾರ ನಡೆಸುವ ಸ್ಮಶಾನದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಇರುವ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಬದುಕಿರುವವರ ಸಂಕಷ್ಟ, ಕುಂದು ಕೊರತೆಗಳನ್ನು ನಿವಾರಿಸುವ ಕಾಳಜಿ ಇರಬಹುದೇ? ಎಂಬ ಪ್ರಶ್ನೆಯೊಂದು ಇದೀಗ ಕೇಳಿ ಬರುವಂತಾಗಿದೆ.
ಪಟ್ಟಣ ಪಂಚಾಯತ್ ನಲ್ಲಿ ಸುಮಾರು 30 ವರ್ಷಗಳಿಂದ ಪೌರ ಕಾರ್ಮಿಕರಾಗಿ ದುಡಿದಿದ್ದ ಹಿರಿಯ ವ್ಯಕ್ತಿಯೊಬ್ಬರು ಶುಕ್ರವಾರ ನಿಧನರಾಗಿದ್ದು ಇವರ ಅಂತ್ಯ ಸಂಸ್ಕಾರದ ಸಿದ್ಧತೆಗೆ ಕುಟುಂಬದವರು ಶನಿವಾರ ಪರದಾಡುವಂತಾಯಿತು ಎಂದು ತಿಳಿದು ಬಂದಿದೆ.
ಪೌರ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದಂದಿನಿಂದ ನಿವೃತ್ತಿ ಹೊಂದುವ ತನಕವೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಾರು ಅನಾಥ ಶವಗಳ ಅಂತ್ಯಸಂಸ್ಕಾರ ಹಾಗೂ ಮೂಕ ಪ್ರಾಣಿಗಳ ಕಳೇಬರಗಳನ್ನು ದಫನ ಮಾಡಿರುವ ಪರಿಶಿಷ್ಟ ಜಾತಿಯ ಪೌರ ಕಾರ್ಮಿಕ ಅಣ್ಣಿ ಅವರ ಅಂತ್ಯಸಂಸ್ಕಾರವನ್ನು ಲಾಯಿಲಾ ಗ್ರಾ.ಪಂ. ಆಡಳಿತದ ಸ್ಮಶಾನದಲ್ಲಿ ದುಡ್ಡು ಕೊಟ್ಟು ಮಾಡುವ ಪರಿಸ್ಥಿತಿ ಬಂದಿದ್ದು ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Post Comment