ಉರುವಾಲಿನ ಶೋಭಕ್ಕನ ಕೈಚಳಕದಲ್ಲಿ ರೋಮಾಂಚಕ ‘ಆಪರೇಷನ್ ಪೆರ್ಮರಿ..!!’
◻️ News ಕೌಂಟರ್
ಬೆಳ್ತಂಗಡಿ : ಜಿರಳೆ, ಕಂಬಳಿ ಹುಳಕ್ಕೆ ಹೆದರಿ ಕಿರುಚಾಡುವ ಮಹಿಳೆಯರು ಇರುವಾಗ ಇಲ್ಲೊಬ್ಬರು ಸಾಮಾನ್ಯ ಮಹಿಳೆ ಕೋಳಿಯನ್ನು ಹೊಂಚು ಹಾಕಿ ಬೇಟೆಯಾಡಿದ ದೊಡ್ಡ ಗಾತ್ರದ ಹೆಬ್ಬಾವೊಂದನ್ನು ಧೈರ್ಯ ಮತ್ತು ಚಾಣಾಕ್ಷತನದಿಂದ ಮಣಿಸಿ ಕೈಯಲ್ಲಿ ಹಿಡಿದು ಗೋಣಿಗೆ ತುಂಬಿಸುವ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಆ ಹೆಬ್ಬಾವು ಹಿಡಿಯುವ ರೋಮಾಂಚಕ ಕಾರ್ಯಾಚರಣೆ ನಡೆಸಿದ ಧೀರ ಮಹಿಳೆಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಉಪ್ಪಿನಂಗಡಿಯ ಅಟೋ ಚಾಲಕರು ಈ ಧೈರ್ಯವಂತ ಹೆಣ್ಣು ಮಗಳಾದ ಶೋಭಕ್ಕನಿಗೆ ಸನ್ಮಾನಿಸಿ ಪ್ರೋತ್ಸಾಹಿಸಿ ಇಂಥ ಹೆಣ್ಣು ಮಕ್ಕಳು ಸಮಾಜಕ್ಕೆ ಬೇಕೆಂಬ ಸಂದೇಶ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಪ್ಪೆಟ್ಟಿ ನಿವಾಸಿ ಉರಗ ಪ್ರೇಮಿ ಶೋಭಾ ಯಾನೆ ಆಶಾ ಆಪರೇಷನ್ ಹೆಬ್ಬಾವಿನ ರೂವಾರಿಯಾಗಿದ್ದಾರೆ.
ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆಯ ಕುಪ್ಪೆಟ್ಟಿ ನೆಕ್ಕಿಲು ಎಂಬಲ್ಲಿ ಘಟನೆ ನಡೆದಿದ್ದು ಸ್ಥಳೀಯ ಶೋಭಾ ಯಾನೆ ಆಶಾ ಎಂಬಾಕೆಯೇ ಅತ್ಯಂತ ಚಾಣಾಕ್ಷ ರೀತಿಯಲ್ಲಿ ನೋಡುಗರಿಗೆ ಕ್ಷಣ ಕ್ಷಣ ಕುತೂಹಲ ಮೂಡಿಸುವ ರೀತಿಯಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಹಿಡಿದು ಗೋಣಿಗೆ ತುಂಬಿಸಿ ಕೊಯ್ಯೂರು ಕಾಡಿನೊಳಗೆ ಬಿಟ್ಟಿದ್ದಾರೆ.
ರಸ್ತೆ ಬದಿಯಲ್ಲಿ ಒಂದು ಹೆಬ್ಬಾವು ಕೋಳಿಯೊಂದನ್ನು ಹಿಡಿದು ಭೋಜನ ಶುರು ಮಾಡಿದ್ದು ಈ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ಹೆಬ್ಬಾವಿನಿಂದ ಬಿಡಿಸಲು ಕೋಳಿಯನ್ನು ಹೆಬ್ಬಾವಿನಿಂದ ರಕ್ಷಿಸಲು ಹರಸಾಹಸ ಪಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಆಶಾ ಅವರು ಹೆಬ್ಬಾವಿನ ಬಾಲವನ್ನು ಹಿಡಿದು ಎಳೆದು, ಹೆಬ್ಬಾವಿನ ಬಾಯಿಯಿಂದ ಕೋಳಿಯನ್ನು ನಿರ್ಭೀತಿಯಿಂದ ಬಿಡಿಸಿ ರಕ್ಷಿಸಿದ್ದು ಬಳಿಕ ಕೆಲವೇ ನಿಮಿಷಗಳ ಕಾರ್ಯಾಚರಣೆಯಲ್ಲಿ ಹಲವು ಪುರುಷರ ಮಧ್ಯೆ ಹೆಬ್ಬಾವಿನ ಬಾಲ ಮತ್ತು ತಲೆಯನ್ನು ಹಿಡಿದು ಸ್ಥಳೀಯರ ಸಾಕ್ಷಿಯಾಗಿ ಗೋಣಿಗೆ ತುಂಬಿಸುವಲ್ಲಿ ಯಶಸ್ವಿಯಾದರು.
ಸ್ಥಳದಲ್ಲಿ ಪುರುಷರು ಸೇರಿದಂತೆ ಹತ್ತಾರು ಜನರಿದ್ದರೂ ಮೊದಲಿಗೆ ತಾನೇ ಹೆಬ್ಬಾವಿನ ಬಾಲದಲ್ಲಿ ಹಿಡಿದೆತ್ತಿ “ಬೀಲೊಡು ಪತ್ಲೆ, ತರೆಟ್ ಯಾನ್ ಪತ್ವೆ… ” (ಬಾಲದಲ್ಲಿ ಹಿಡಿಯಿರಿ, ನಾನು ತಲೆಯಲ್ಲಿ ನಾನು ಹಿಡಿಯುತ್ತೇನೆ..) ಎಂದು ಹಿಡಿಯಲು ಪುರುಷರಲ್ಲಿ ಸಹಾಯ ಮಾಡುವಂತೆ ಮಹಿಳೆ ಕೇಳಿಕೊಂಡರೂ ಅಲ್ಲಿದ್ದ ಪುರುಷರೂ ಮೊದಲಿಗೆ ಹಿಂಜರಿಯುತ್ತಾರೆ. ವೀಡಿಯೋದಲ್ಲಿ ಮಹಿಳೆ ಸ್ಥಳದಲ್ಲಿದ್ದ ಜನರೊಂದಿಗೆ ತುಳುವಿನಲ್ಲಿ “ಪೆರ್ಮರಿ ಅತ್ತ್, ಕೋರಿ ಮರ್ಲೆ” ( ಹೆಬ್ಬಾವಲ್ಲ, ಕೋಳಿ ಹುಚ್ಚ) ಎಂದು ಹೇಳುತ್ತಿರುವುದು ಕೇಳಿಸುತ್ತದೆ.
ಕೋಳಿಗಳನ್ನು ಹಿಡಿದು ನುಂಗಲು ಬರುವ ನಿರಂತರವಾಗಿ ಬರುವ ಹೆಬ್ಬಾವುಗಳನ್ನು ಹಳ್ಳಿಯಲ್ಲಿ ”ಕೋರಿ ಮರ್ಲೆ” ಎಂದು ಕೂಡ ಕರೆಯುವುದಿದೆ, ಇದನ್ನು ‘ಇಂಡಿಯನ್ ರಾಕ್ ಪೈಥಾನ್’ ಎಂದು ಕರೆಯಲಾಗುತ್ತದೆ.
ಹೆಚ್ಚಾಗಿ ಕೋಳಿಗಳೇ ಇದರ ಟಾರ್ಗೆಟ್ ಆಗಿದ್ದು ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಈ ಹೆಬ್ಬಾವುಗಳಿಗೆ ತುಳುವಿನಲ್ಲಿ ‘ಕೋರಿಮರ್ಲೆ’ ಎಂದು ಕರೆಯಲಾಗುತ್ತದೆ. ಘಟನೆಯಲ್ಲಿ ಸುತ್ತಮುತ್ತ ಪುರುಷರಿದ್ದರೂ ಹೆದರಿ ಹಾವಿನ ಹತ್ತಿರ ಬರಲು ಹಿಂದೇಟು ಹಾಕಿದ್ದಾರೆ.
ಆದರೆ ಇದೇ ವೇಳೆ ಆಶಾ ಒಬ್ಬರೇ ಉರಗ ಪ್ರೇಮಿಗಳಿಗೂ ಕಮ್ಮಿ ಇಲ್ಲ ಎಂಬಂತೆ ಧೈರ್ಯವಾಗಿ ಹೆಬ್ಬಾವಿನ ಬಾಲ ಹಾಗೂ ತಲೆಯಲ್ಲಿ ಹಿಡಿದಿದ್ದಾರೆ ಬಳಿಕ ಪುರುಷರ ಸಹಾಯದಿಂದ ಗೋಣಿ ಚೀಲದೊಳಗೆ ಹೆಬ್ಬಾವನ್ನು ತುಂಬಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಈಕೆ ಅವರು ಅಷ್ಟು ದೊಡ್ಡ ಗಾತ್ರದ ಹೆಬ್ಬಾವನ್ನು ಯಾವುದೇ ನೋವು ಮಾಡದೆ ಹಿಡಿದಿದ್ದು ಮಹಿಳೆಯ ಧೈರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.
ಹೆಬ್ಬಾವು ಹಿಡಿದ ಉರಗ ರಕ್ಷಕಿ ಇದೀಗ ಉಪ್ಪಿನಂಗಡಿ ಅಟೋ ಚಾಲಕರ ಸಂಘದ ವತಿಯಿಂದ ಶಾಲು ಹೊದಿಸಿ, ಪೇಟಾ ತೊಡಿಸಿ ಸ್ಮರಣಿಕೆ, ಫಲಪುಷ್ಪದೊಂದಿಗೆ ಸನ್ಮಾನಿಸಿದ್ದಾರೆ. ಅಭಿನಂದನೆಗಳು ಧೈರ್ಯವಂತ ಹೆಣ್ಣು ಮಗಳು ಶೋಭಕ್ಕನಿಗೆ..!
Post Comment