ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಅಮಾನತಿಗೆ ಒತ್ತಾಯಿಸಿ ಡಿ.ವೈ.ಎಫ್.ಐ. ನೇತೃತ್ವದಲ್ಲಿ ಪ್ರತಿಭಟನೆ
ಬೆಳ್ತಂಗಡಿ : ಸಂವಿಧಾನ ವಿರೋಧಿ, ಅಪ್ರಜಾಸತ್ತಾತ್ಮಕವಾಗಿ,
ಕಾನೂನು ಬಾಹಿರವಾಗಿ ಹೋರಾಟಗಾರರ ಮೇಲೆ ಕೇಸು ದಾಖಲಿಸುತ್ತಿರುವ ಮಂಗಳೂರು ಪೋಲಿಸ್ ಕಮೀಷನರ್ ಅವರ
ಸಂವಿಧಾನ ವಿರೋಧಿ ನಡೆ ಖಂಡಿಸಿ ಅಮಾನತಿಗಾಗಿ ಆಗ್ರಹಿಸಿ
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿ.ವೈ.ಎಫ್.ಐ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಂಗಳೂರು ಪೋಲಿಸ್ ಕಮೀಷನರ್ ಅನುಪಮ್ ಅಗರವಾಲ್ ಅವರ ಸಂವಿಧಾನ ವಿರೋಧಿ ನಡೆಯ ವಿರುದ್ಧ, ಪ್ರಜಾಪ್ರಭುತ್ವ ವ್ಯವಸ್ಥೆಯ ದಮನಿಸುವ ಹಾಗೂ ಅವರ ಸರ್ವಾಧಿಕಾರೀ ನಡೆಯನ್ನು ಖಂಡಿಸಿ, ಅನಾವಶ್ಯಕವಾಗಿ ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅವರ ಮೇಲೆ ದಾಖಲಿಸಿದ ಕೇಸ್ ಹಿಂಪಡೆಯಲು ಮತ್ತು ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಅಮಾನತು ಮಾಡಬೇಕೆಂದು ಡಿ.ವೈ.ಎಫ್.ಐ ಬೆಳ್ತಂಗಡಿ ತಾಲೂಕು ಮುಖಂಡರುಗಳು ಸರಕಾರವನ್ನು ಒತ್ತಾಯಿಸಿದರು.
ಪ್ಯಾಲಿಸ್ತೀನಿ ಪರವಾಗಿ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಆಗ್ರಹಿಸಿ ನಡೆಸಿದ ಹೋರಾಟಕ್ಕೂ ಕೇಸ್ ದಾಖಲಿಸಿದ ಮಂಗಳೂರು ಪೋಲೀಸ್ ಕಮೀಷನರ್, ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳ ಮುಚ್ಚಿ ದುರಸ್ತಿಗೆ ಆಗ್ರಹಿಸಿ, ಕಾಮಗಾರಿಗಳ ತ್ವರಿತವಾಗಿ ಮಾಡಿ ಮುಗಿಸಲು ಆಗ್ರಹಿಸಿ ಹೋರಾಟ ನಡೆಸಲು 12 ದಿನ ಮೊದಲೇ ಮೈಕ್ ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದರೂ ಪೊಲೀಸ್ ಠಾಣೆಯಲ್ಲೂ
ಒಪ್ಪಿಗೆ ನೀಡಿದ್ದರೂ ಹೋರಾಟದ ಮೊದಲ ದಿನ ಸಂಜೆ ಮೈಕ್ ಪರವಾನಿಗೆ ನಿರಾಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಮೈಕ್ ಅಳವಡಿಸದೇ ಶಾಂತಿಯುತವಾಗಿ ಹೋರಾಟ ನಡೆಸಿದೆವು, ಕೇಂದ್ರ ಸರಕಾರದ ವಿರುದ್ಧ ನಡೆಸುವ ಯಾವುದೇ ಹೋರಾಟವನ್ನು ದಮನಿಸುವ ಪೊಲೀಸರು ಬಿಜೆಪಿಯವರು ಗಂಟೆ ಗಟ್ಟಲೆ ರಸ್ತೆ ತಡೆ ಮಾಡಿದರೂ ಅವರನ್ನು ಬೆಂಬಲಿಸಿ ಸಹಕರಿಸುತ್ತಾರೆಯೇ ವಿನಃ ಕೇಸ್ ದಾಖಲಿಸುವುದಿಲ್ಲ,
ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಿದರೆ ಯಾವ ಕೇಸ್ ದಾಖಲಿಸದೆ ಇರುವ ಇವರು ಸ್ಪಷ್ಟವಾಗಿ ಬಿಜೆಪಿ ಏಜೆಂಟರಂತೆ ವರ್ತಿಸುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂವಿಧಾನಬದ್ಧ ಪ್ರತಿಭಟನಾ ಹಕ್ಕನ್ನೇ ಕಸಿಯುವ ಸಂವಿಧಾನ ವಿರೋಧಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಮಂಗಳೂರು ಪೋಲೀಸ್ ಕಮೀಶನರ್ ಅನುಪಮ್ ಅಗರವಾಲ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಮತ್ತು ಹೋರಾಟಗಾರರ ಮೇಲೆ ವಿನಾ ಕಾರಣ ದಾಖಲಿಸಿದ ಕೇಸನ್ನು ಹಿಂಪಡೆಯಬೇಕೆಂದು
ಪ್ರತಿಭಟನೆಯ ನೇತೃತ್ವವಹಿಸಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡ ಬಿ.ಎಂ. ಭಟ್, ಮುಖಂಡರಾದ ಶಾಮರಾಜ್ ಪಟ್ರಮೆ ಮತ್ತಿತರು ಒತ್ತಾಯಿಸಿದರು. ಈ ಸಂದರ್ಭ ಹಿರಿಯ ಮುಖಂಡ ಜಯರಾಮ್ ಮಯ್ಯ, ಈಶ್ವರಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆ ಯ ಕೊನೆಯಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ನೀಡಿ “ಮಂಗಳೂರು ಪೋಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಅವರನ್ನು ಸರಕಾರ ಮತ್ತು ಪೊಲೀಸ್ ಇಲಾಖಾಧಿಕಾರಿಗಳು ಎತ್ತಂಗಡಿ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ನ್ಯಾಯವಾದಿ ಬಿ.ಎಂ.ಭಟ್ ಎಚ್ಚರಿಕೆ ನೀಡಿದರು.
ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಪದಾಧಿಕಾರಿಗಳು , ಕಾರ್ಯಕರ್ತರು ಭಾಗವಹಿಸಿದರು.
Post Comment