ಬೆಳ್ತಂಗಡಿ ಪಟ್ಟಣ ಪಂಚಾಯತ್ ಪರಿಶಿಷ್ಟರ ಸಭೆಗೆ ಅಧ್ಯಕ್ಷರ ಸಹಿತ 10 ಜನಪ್ರತಿನಿಧಿಗಳು ಗೈರು

ಬೆಳ್ತಂಗಡಿ : ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡ ಸಮುದಾಯದ ಕುಡಿಯುವ ನೀರಿನ ಶುಲ್ಕ ಪಾವತಿಸುವ ಬಗ್ಗೆ ಮತ್ತು ಕೆರಳೆಕೋಡಿ ಸ್ಮಶಾನದ ಶಿಥಿಲಾವಸ್ಥೆಯ ಬಗ್ಗೆ ಸಮಾಲೋಚನೆಗಾಗಿ ಪಟ್ಟಣ ಪಂಚಾಯತ್ ಕರೆದಿದ್ದ ಅಧಿಕೃತ ಸಭೆಗೆ ಅಧ್ಯಕ್ಷರನ್ನೊಳಗೊಂಡ ಇಡೀ ‘ಬಾಡಿ’ಯೇ ಗೈರು ಹಾಜರಾಗಿ ತಮ್ಮದೇ ಆಡಳಿತ ಗೌರವಯುತ ಸಭೆಗೆ ಅಗೌರವ ತೋರಿದ ಪ್ರಸಂಗ ಸೋಮವಾರ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪಂಗಡದ ಕುಡಿಯುವ ನೀರಿನ ಶುಲ್ಕ ಪಾವತಿಸುವ ಬಗ್ಗೆ ಹಾಗೂ ರೆಂಕೆದಗುತ್ತು – ಕೆಲ್ಲಗುತ್ತು ಪ್ರದೇಶದ ಕೆರಳೆಕೋಡಿ ಎಂಬಲ್ಲಿನ ಸ್ಮಶಾನ ದುರಸ್ತಿ ಮತ್ತು ನಿರ್ವಹಣೆ ಬಗ್ಗೆ ಸಮಾಲೋಚನೆ ನಡೆಸಲು ಮುಖ್ಯಾಧಿಕಾರಿಯವರು ಸ್ಥಳೀಯ ಪರಿಶಿಷ್ಟ ಮುಖಂಡರಿಗೆ ಅಧಿಕೃತ ನೋಟೀಸ್ ನೀಡಿ ಸಭೆ ಕರೆದಿದ್ದರು.
ನೋಟೀಸ್ ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು, ಕೆಲ್ಲಗುತ್ತು, ಸುದೆಮುಗೇರು, ಕಲ್ಕಣಿ ಪರಿಶಿಷ್ಟ ಜಾತಿ ಕಾಲೋನಿಗಳ ಮುಖಂಡರು ಸಭೆಗೆ ಹಾಜರಾಗಿದ್ದರು.
ಆದರೆ ಈ ಸಭೆಗೆ ಸಮಯಕ್ಕೆ ಹಾಜರಾದ ಪರಿಶಿಷ್ಟ ಜಾತಿ/ಪಂಗಡದ ಮುಖಂಡರಿಗೆ ಅಚ್ಚರಿ ಕಾದಿತ್ತು; ಏಕೆಂದರೆ ಸಭಾ ವೇದಿಕೆಯಲ್ಲಿ ಮುಖ್ಯಾಧಿಕಾರಿ ರಾಜೇಶ್ , ಸಿಬ್ಬಂದಿ ಹೊರತುಪಡಿಸಿ ಬಿಜೆಪಿ-ಕಾಂಗ್ರೆಸ್ ನ ಒಬ್ಬನೇ ಒಬ್ಬ ಸದಸ್ಯೆಯೂ ಹಾಜರಾಗಿರಲಿಲ್ಲ.
ಉಪಾಧ್ಯಕ್ಷೆ ಕು.ಗೌರಿ ಅವರು ಮಾತ್ರ ಭಾಗವಹಿಸಿದ್ಧರು.
ಈ ಮಧ್ಯೆ ಸಭೆ ನಡೆಯುತ್ತಿದ್ದ ವೇಳೆ ತುಂಬಾ ತಡವಾಗಿ ಸಭಾಂಗಣಕ್ಕೆ ಬಂದ ಸದಸ್ಯೆ ತುಳಸಿ ಇತರ ಸದಸ್ಯರ ಗೈರು ಹಾಜರಿಯನ್ನು ಮನಗಂಡು ಸಭಾ ಗೌರವ ಪಾಲಿಸದೆ ವಾಪಾಸಾದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯವರು ಕರೆದ ಪರಿಶಿಷ್ಟರ ಸಭೆಗೆ ಅಧ್ಯಕ್ಷ ಜಯಾನಂದ ಗೌಡ ಅವರನ್ನೊಳಗೊಂಡು 10 ಮಂದಿ ಸದಸ್ಯರು ಗೈರು ಹಾಜರಾಗಲು ಬಲವಾದ ಕಾರಣವೇನು?
ಪರಿಶಿಷ್ಟರ ಕುಂದು ಕೊರತೆಗಳೆಂದರೆ ಅಲರ್ಜಿಯೇ?
ಪರಿಶಿಷ್ಟರ ಸಭೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು
ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಮತ್ತು ಮುಖ್ಯಾಧಿಕಾರಿಯವರ ಹೆಗಲಿಗೆ ಹಾಕಿ ಸಮಸ್ಯೆಗಳಿಗೆ ಉತ್ತರಿಸಲಾಗದೆ ಚಡಪಡಿಸುವುದು
ಗೈರು ಹಾಜರಾದ ಜನಪ್ರತಿನಿಧಿಗಳಿಗೆ ಬೇಕಿತ್ತೇ?
ಜವಾಬ್ದಾರಿಗಳಿಂದ ಜಾರಿಕೊಳ್ಳುವ ಬುದ್ಧಿವಂತಿಕೆಯೇ?
ಅಥವಾ ಸ್ಮಶಾನದ ಅವ್ಯವಸ್ಥೆ ಬಗ್ಗೆ ದಲಿತ ಮುಖಂಡರು ಕೇಳಲಿದ್ದ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವೆಂದು ತಪ್ಪಿಸಿಕೊಂಡರೇ?
ಪರಿಶಿಷ್ಟರ ಕುಂದು ಕೊರತೆಗಳೆಂದರೆ ತಪ್ಪಿಸಿಕೊಳ್ಳುವಷ್ಟು ನಿರ್ಲಕ್ಷ್ಯವೇ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿ ಬರುವಂತಾಗಿದೆ.

ಒಟ್ಟಿನಲ್ಲಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ಕುಡಿಯುವ ನೀರಿನ ಶುಲ್ಕ ಪಾವತಿಸುವ ಬಗ್ಗೆ ಮತ್ತು ಕೆರಳೆಕೋಡಿ ಸ್ಮಶಾನ ದುರಸ್ತಿ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲು ಕರೆದ ಸಭೆಗೆ ಸಾಮೂಹಿಕ ಗೈರು ಹಾಜರಾದ ಸದಸ್ಯರ ಇಂಥ ನಡೆಗೆ ಕಾರಣವೇನಿರಬಹುದು? ಮುಖ್ಯಾಧಿಕಾರಿ ಮತ್ತು ಉಪಾಧ್ಯಕ್ಷೆಯ ವಿರುದ್ಧ ಪರಿಶಿಷ್ಟ ಮುಖಂಡರ ಆಕ್ರೋಶ ಮೂಡಿಸುವ ಯತ್ನವೇ ಎಂಬ ಸಂಶಯವೂ ವ್ಯಕ್ತವಾಗಿದೆ. ಆದರೆ ಗೈರುಹಾಜರಾದ ಅಧ್ಯಕ್ಷರು ಮತ್ತು ಸದಸ್ಯರ ಈ ನಡೆಯ ವಿರುದ್ಧ ಖಂಡನಾ ನಿರ್ಣಯಕೈಗೊಳ್ಳುವಂತೆ ಸಭೆಗೆ ಹಾಜರಾಗಿದ್ದ ಪರಿಶಿಷ್ಟ ಮುಖಂಡರು ಒತ್ತಾಯಿಸಿದರು.
ಎಪರಿಶಿಷ್ಟರ ಕುಂದು ಕೊರತೆಗಳ ಸಭೆಗೆ ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳು ಗೈರು ಹಾಜರಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
Post Comment