ಬೆಳಾಲಿನಲ್ಲಿ ಮೂರು ತಿಂಗಳ ಹೆಣ್ಣು ಮಗುವನ್ನು ರಸ್ತೆ ಬದಿಬಿಟ್ಟು ಹೋದ ನಿಗೂಢ ನಿರ್ದಯಿ ತಾಯಿ: “ಉಂಡೋರು ಎಲೆಯ ಬಿಸಾಡೋ ಹಾಗೆ ಹೆತ್ತೋಳು ಕಂದನ ಎಸೆದಾಯ್ತು…”

ಬೆಳ್ತಂಗಡಿ : ಸುಮಾರು ಮೂರು ತಿಂಗಳ ಮುದ್ದಾದ ಹೆಣ್ಣು ಮಗುವೊಂದನ್ನು ಯಾರೋ ನಿರ್ದಯಿಗಳು ಬಿಟ್ಟು ಹೋದ ಮನಕಲಕುವ ಪ್ರಸಂಗ ಬೆಳಾಲು ಗ್ರಾಮದ ಕೂಡೋಳುಕೆರೆ ಎಂಬಲ್ಲಿ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮುಂಡ್ರೋಟ್ಟು ರಸ್ತೆ ಬದಿಯಲ್ಲಿ ಯಾರೋ ಬಿಟ್ಟು ಹೋಗಿರುವುದು ಮಾ.22 ರಂದು ಬೆಳಗ್ಗೆ ಬೆಳಕಿಗೆ ಬಂದಿದ್ದು ಮಗುವನ್ನು ಕಂಡು ಕುತೂಹಲಗೊಂಡ ಸಾರ್ವಜನಿಕರು ರಕ್ಷಿಸಿ ಉಪಚರಿಸಿ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಉಪಚರಿಸಲಾಯಿತು.
ಹೆಣ್ಣು ಮಗುವೆಂಬ ಕಾರಣಕ್ಕಾಗಿ ಪತಿ ಅಥವಾ ಪತಿ ಮನೆಯವರಿಂದ ಮಾನಸಿಕ ಕಿರುಕುಳಕ್ಕೊಳಗಾಗಿ ಬೇಸತ್ತು ತಾಯಿಯೇ ಮಗುವನ್ನು ಕಾಡಿನಲ್ಲಿ ಹೋಗಿರಬಹುದೇ? ನಂಬಿದ ಪ್ರಿಯಕರನಿಂದ ಗರ್ಭಿಣಿಯಾದ ಹೆಣ್ಣು ಮಗಳು ಮನೆಯಲ್ಲೆ ಹೆತ್ತ ಬಳಿಕ ಮರ್ಯಾದೆಗಂಜಿ ಇದುವರೆಗೆ ಸಾಕಿದ ಯಾರದೋ ಒತ್ತಡಕ್ಕೆ ಮಣಿದು ಮಗುವನ್ನು ಕಾಡಲ್ಲಿ ಬಿಟ್ಟು ಹೋಗಿರಬಹುದೇ? ಮಗುವನ್ನು ಕಾಡಲ್ಲಿ ಬಿಟ್ಟು ಹೋದವರು ಬೆಳಾಲು ಗ್ರಾಮದವರೇ? ಬೇರೆ ಗ್ರಾಮದವರೇ ಎಂಬ ಬಗ್ಗೆ ವ್ಯಾಪಕ ಸಂಶಯದ ಚರ್ಚೆಗಳು ನಡೆಯುತ್ತಿದೆ. ಆದರೆ ಯಾವ ಕಾರಣಕ್ಕಾಗಿ ಈ ಮಗುವನ್ನು ಅನಾಥ ಮಾಡಿ ಹೋದರು ಎಂಬುದೇ ನಿಗೂಢವಾಗಿದೆ.
ಗುಲಾಬಿ ಎಂಬ ಮಹಿಳೆ ಮನೆಗೆ ಹೋಗುತ್ತಿದ್ದ ವೇಳೆ ಕಾಡಿನಲ್ಲಿ ಮಗು ಅಳುವ ಸದ್ದು ಕೇಳಿಸಿಕೊಂಡಿದ್ದು ಇಣುಕಿ ನೋಡಿದಾಗ ಯಾರೋ ಮಗುವನ್ನು ಬಿಟ್ಟು ಹೋಗಿರುವುದು ಪತ್ತೆಯಾಗಿದೆ.
ಕೂಡಲೇ ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಅವರಿಗೆ ಕರೆ ಮಾಡಿ ತಿಳಿಸಿದ್ದು ಅವರು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು ಈ ಭಾಗದ ಆಶಾ ಕಾರ್ಯಕರ್ತೆ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಲಾಯಿತು.
ಮೊದಲಿಗೆ ಊರಿನ ತಾಯಿಯೊಬ್ಬಳು ಈ ತಬ್ಬಲಿ ಮಗುವಿಗೆ ತಮ್ಮ ಎದೆ ಹಾಲು ಕೊಟ್ಟಿರುವ ಪ್ರಸಂಗ ತಾಯ್ತನದ ಮಮತೆಗೆ ಸಾಕ್ಷಿಯಾಗಿತ್ತು.
ಆದರೆ ಇಷ್ಟೊಂದು ಮುದ್ದಾದ ಮೂರು ತಿಂಗಳ ಮಗುವನ್ನು ಇಂಥ ಅಪಾಯಕಾರಿ ಕಾಡಿನಲ್ಲಿ ಬಿಟ್ಟು ಹೋದವರು ಎಂಥಾ ಕಟುಕ ಮನಸ್ಸಿನವರಿರಬೇಕು ಎಂಬ ಆಕ್ರೋಶದ ಮಾತುಗಳು ಸ್ಥಳಕ್ಕಾಗಮಿಸಿದ ಮಹಿಳೆಯರಿಂದಲೇ ಕೇಳಿ ಬರುತ್ತಿದೆ.
ಈ ಪ್ರಕರಣದ ಮಾಹಿತಿ ಸಿಕ್ಕಿದಾಕ್ಷಣ ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಿಸಿ ಸ್ಥಳ ಮಹಜರು ನಡೆಸಿ ಪ್ರಕ್ರಿಯೆ ಮುಗಿಸಬೇಕಾಗಿದ್ದ ಬೆಳ್ತಂಗಡಿ ತಾಲೂಕು ಸಿಡಿಪಿಒ ಮತ್ತು ಸ್ಥಳೀಯ ಅಂಗನವಾಡಿ ಮೇಲ್ವಿಚಾರಕಿ ರಜೆಯಲ್ಲಿದ್ದು ಬೇರೆ ವಿಭಾಗದ ಮೇಲ್ವಿಚಾರಕಿ ಮತ್ತು
ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಇಡೀ ಪ್ರಕರಣವನ್ನು ನಿಭಾಯಿಸಬೇಕಾಯಿತು.
ಈ ಮಧ್ಯೆ “ಮಗುವನ್ನು ನಮಗೆ ಕೊಡಿ, ನಮಗೆ ಬೇಕು ನಾವು ಸಾಕುತ್ತೇವೆ” ಎಂದು ಮಕ್ಕಳಿಲ್ಲದ ಅನೇಕರು ಕರೆ ಮಾಡುತ್ತಿರುವ ಸಂಗತಿ ತಿಳಿದು ಬಂದಿದೆ.
ಪತ್ತೆಯಾದ ಮಗುವಿನ ಬಗ್ಗೆ ಹೆಚ್ಚಿನ ನಿಖರ ಮಾಹಿತಿ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಧರ್ಮಸ್ಥಳ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದೀಗ ತಬ್ಬಲಿ ಮಗುವನ್ನು ಸಂಬಂಧಪಟ್ಟ ಇಲಾಖಾ ಪ್ರಕ್ರಿಯೆಗಳಂತೆ ಮಕ್ಕಳ ಕಲ್ಯಾಣ ಸಮಿತಿಯ ಅನುಮತಿ ಆದೇಶದಂತೆ ಪುತ್ತೂರಿನ ಸರಕಾರದಿಂದ ಮಾನ್ಯತೆ ಪಡೆದ ರಾಮಕೃಷ್ಣ ಸೇವಾಶ್ರಮ (ದತ್ತು ಸ್ವೀಕಾರ ಕೇಂದ್ರ)ದ ಸುಪರ್ದಿಗೆ ಒಪ್ಪಿಸಲಾಗಿದೆ.
ಮಗುವನ್ನು ಬಿಟ್ಟು ಹೋದ ನಿಜವಾದ ಹೆತ್ತವರು ನೇರವಾಗಿ ಹಾಜರಾಗಿ ಸೂಕ್ತ ದಾಖಲೆ ಹಾಜರುಪಡಿಸಿ ಸಕಾರಣ ನೀಡಿದ್ದಲ್ಲಿ ಅಗತ್ಯ ಪ್ರಕ್ರಿಯೆಗಳ ಮೂಲಕ ಮತ್ತೆ ಮಗುವನ್ನು ಸ್ವೀಕರಿಸುವ ಅವಕಾಶವಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
Post Comment