ಬೆಳ್ತಂಗಡಿ:ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಆಗಮಿಸಲು ಒಪ್ಪಿ ಕೈಕೊಟ್ಟ ಕಾಂಗ್ರೆಸ್ ಸಚಿವರು : ಸಚಿವರ ಮೂಲಕ ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಲಿದ್ದ ದಲಿತರಿಗೆ ನಿರಾಶೆ

ಬೆಳ್ತಂಗಡಿ : ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶಕ್ಕೆ ಅತಿಥಿಗಳಾಗಿ ಆಹ್ವಾನಿಸಿದಾಗ ಭಾಗವಹಿಸುವುದಾಗಿ ಮಾತು ಕೊಟ್ಟು ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಕೊಳ್ಳಲು ಒಪ್ಪಿದ್ದ ಕಾಂಗ್ರೆಸ್ ಸರಕಾರದ ಮೂರು ರಾಜಕಾರಣಿಗಳು ಮತ್ತು ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ದಲಿತ ಸಂಘರ್ಷ ಸಮಿತಿ ಬಣಗಳ ರಾಜ್ಯ ನಾಯಕರು ಆಗಮಿಸದೆ ಗೈರು ಹಾಜರಾಗುವ ಮೂಲಕ ಬೆಳ್ತಂಗಡಿಯ ದಲಿತರಲ್ಲಿ ನಿರಾಶೆ ಮೂಡಿಸಿದ ಘಟನೆ ದಲಿತ ಚಳುವಳಿಯೊಳಗೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರೊ.ಬಿ.ಕೃಷ್ಣಪ್ಪರವರ ನಾಯಕತ್ವದಲ್ಲಿ ಸ್ಥಾಪನೆಗೊಂಡಿರುವ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಎಂಬ ಸಾಮಾಜಿಕ ಸಂಘಟನೆಯು ನಾಡಿನ ದಲಿತ, ದಲಿತೇತರ ಎಲ್ಲಾ ಶೋಷಿತ ಸಮುದಾಯಗಳ ಆಶಾಕಿರಣವಾಗಿ ಪ್ರಬಲ ಧ್ವನಿಯಾಗಿ ಸಿಡಿದೆದ್ದು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಹರಿದು ಬಂದಂತೆ 50 ವರ್ಷಗಳಲ್ಲಿ ಹಂತ ಹಂತವಾಗಿ ಬೆಳೆದು ಬಂದು ಚಳುವಳಿಯಾಗಿ ಪರಿವರ್ತನೆಗೊಂಡು ನಾಡಿನಲ್ಲಿ ಅಂಬೇಡ್ಕರ್ ವಿಚಾರಧಾರೆಯೊಂದಿಗೆ ವೈಚಾರಿಕ ಪರಿವರ್ತನೆಯತ್ತ ಮುನ್ನಡೆದಿದೆ.
ಕರ್ನಾಟಕ ದಲಿತ ಚಳುವಳಿಗೆ 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಬೆಳ್ತಂಗಡಿಯಲ್ಲಿ ವಿವಿಧ ದಲಿತ ಸಂಘಟನೆಗಳನ್ನೊಳಗೊಂಡ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣಾ ಸಮಿತಿಯಿಂದ ಸಮಾವೇಶ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಎಪ್ರಿಲ್ 28ರಂದು ಆಯೋಜಿಸಲಾಗಿತ್ತು. ಬಈ ಸಮಾವೇಶಕ್ಕೆ ಉದ್ಘಾಟಕರಾಗಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹಾದೇವಪ್ಪ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಂತಾದವರನ್ನು ಆಹ್ವಾನಿಸಲಾಗಿತ್ತು. ಆಗಮಿಸಲು ಒಪ್ಪಿದ್ದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಸತೀಶ್ ಜಾರಕಿ ಹೊಳಿ, ಹೆಚ್.ಸಿ.ಮಹಾದೇವಪ್ಪ, ದಿನೇಶ್ ಗುಂಡೂರಾವ್ ಅವರು ಸಮಾವೇಶಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದರು. ಸಚಿವರುಗಳ ಆಗಮನದ ನಿರೀಕ್ಷೆಯಲ್ಲಿದ್ದ ಸಂಘಟಕರು ಸಚಿವರುಗಳಿಗೆ ಮಹತ್ವದ ಹಕ್ಕೊತ್ತಾಯವನ್ನು ಹಸ್ತಾಂತರಿಸಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಜಿಲ್ಲೆಯವರೇ ಆಗಿರುವ ಸ್ಪೀಕರ್ ಯು.ಟಿ.ಖಾದರ್ ಆಗಲಿ, ಮೂವರು ಸಚಿವರುಗಳಾಗಲಿ ಆಗಮಿಸಲಿಲ್ಲ. ಆದರೆ ಬಿಜೆಪಿ ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ವಿಧಾನಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್ ಮುಂತಾದವರು ಆಗಮಿಸಿದ್ದರು.
ಇಷ್ಟೇ ಅಲ್ಲದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ರಾಜ್ಯ ನಾಯಕರಾದ ಗುರುಮೂರ್ತಿ, ಮಾವಳ್ಳಿ ಶಂಕರ್ , ಜಿಲ್ಲಾ ಮುಖಂಡ ಜಗದೀಶ್ ಪಾಂಡೇಶ್ವರ್, ಮಾಜಿ ಸಚಿವ ಎನ್.ಮಹೇಶ್, ಬಿ.ಎಸ್.ಪಿ. ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ
ಮುಂತಾದವರ ಆಗಮಿಸುವ ಬಗ್ಗೆ ಸಂಘಟಕರಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಕಾರ್ಯಕ್ರಮಗಳ ಒತ್ತಡವೋ ಬೆಳ್ತಂಗಡಿ ಕಾಂಗ್ರೆಸ್ಸಿನ
ಒಣ ಬಣ ವೈಖರಿಯ ಪರಿಣಾಮವೋ ಇವರು ಆಗಮಿಸದೆ ದಲಿತ ನಾಯಕರ ನಿರಾಶೆ ಮೂಡಲು ಕಾರಣರಾದರು.
ರಾಜ್ಯ ಸರಕಾರದ ಕಾಂಗ್ರೆಸ್ ಸಚಿವರು ಆಗಮಿಸದ ಕಾರಣ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ದಲಿತರ ಹಕ್ಕೊತ್ತಾಯಗಳಿಗೆ ಧ್ವನಿಗೂಡಿಸಿ ಮಾತನಾಡಬೇಕಾಯಿತು. ಆಹ್ವಾನಿಸಿದ ಬಿಜೆಪಿ ಶಾಸಕರು ಎಲ್ಲರೂ ಆಗಮಿಸಿದ್ದರು. ಬಿಜೆಪಿ ಶಾಸಕರು ಮತ್ತು ಕಾಂಗ್ರೆಸ್ ನಾಯಕರು ದಲಿತರ ಹಕ್ಕೊತ್ತಾಯಗಳ ಬಗ್ಗೆ ಕೊಟ್ಟ ಭರವಸೆ ವೇದಿಕೆಗೆ ಸೀಮಿತವಾಗುತ್ತದೋ ಸರಕಾರ ಮಟ್ಟದಲ್ಲಿ ಕಾರ್ಯಗತವಾಗುವುದೋ ಎಂಬುದನ್ನು ಕಾದು ನೋಡಬೇಕಾಗಿದೆ.
ಆದರೆ ಹಲವು ದಿನಗಳ ನಿರೀಕ್ಷೆಯಂತೆ ದಲಿತ ಚಳುವಳಿಯ 50ರ ಸಂಭ್ರಮ ಸಮಾವೇಶಕ್ಕೆ ಒಬ್ಬನೇ ಒಬ್ಬ ಸಚಿವರೂ ಆಗಮಿಸದಿರುವುದು ಸ್ಥಳೀಯ ನಾಯಕರ ವೇಫಲ್ಯವೋ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.
ಬೆಳ್ತಂಗಡಿಯವರೇ ಆಗಿದ್ದೂ ಮಾಜಿ ಸಚಿವ ಕೆ. ಗಂಗಾಧರ ಗೌಡ,
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಮುಂತಾದವರು ಸಮಾವೇಶಕ್ಕೆ ಆಗಮಿಸದಿರುವುದೂ ಚರ್ಚೆಗೆ ಕಾರಣವಾಗಿದೆ.
Post Comment