ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ‘ಸರ್ವೇ’ ಜನ ಸುಖಿನೋಭವಂತು..!

ಬೆಳ್ತಂಗಡಿ : ಕರ್ನಾಟಕ ಸರಕಾರದ ಕಂದಾಯ ಸಚಿವರಾದ ಕೃಷ್ಣಬೈರೇ ಗೌಡ ಅವರು ಸರಕಾರದಿಂದ ಮಂಜೂರಾದ ಭೂಮಿಯ 1 to 5 ಪ್ಲಾಟಿಂಗ್ ದುರಸ್ತಿಯನ್ನು ಸರಕಾರವೇ ಸಾರ್ವಜನಿಕರಿಗೆ ಉಚಿತವಾಗಿ ಮಾಡಿ ಕೊಡಲಾಗುವುದು ಎಂದು ಈ ಬಗ್ಗೆ ಎಲ್ಲಾ ಕಂದಾಯ ಇಲಾಖಾಧಿಕಾರಿಗಳಿಗೆ V C ಮೀಟಿಂಗ್ ನಲ್ಲಿ ಪ್ಲಾಟಿಂಗ್ ಮಾಡಿ ಕೊಡಲು ಸರ್ವೇ ಅಧಿಕಾರಿಗಳು ಯಾರೂ ಕೂಡ ಸಾರ್ವಜನಿಕರಿಂದ ಲಂಚ ತೆಗೆದುಕೊಳ್ಳಬಾರದು , ಉಚಿತವಾಗಿ ಪ್ಲಾಟಿಂಗ್ ಮಾಡಿ ಕೊಡಬೇಕು ಎಂದು ಖಡಕ್ ವಾರ್ನಿಂಗ್ ನೀಡಿದ್ದರು. ಆದರೆ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕೆಲವು ಸರ್ವೇ ವಿಭಾಗದ ಭ್ರಷ್ಟ ಅಧಿಕಾರಿಗಳು ಲಂಚವಿಲ್ಲದೆ ಕಡತವನ್ನು ಮುಟ್ಟುವುದೇ ಇಲ್ಲ . ಲಂಚದ ಸೂಚನೆ ಸಿಕ್ಕಿದರೆ ಮಾತ್ರ ಕಡತ ವಿಲೇವಾರಿ ಮಾಡುತ್ತಾರೆ ಎಂಬ ಆರೋಪಗಳು ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಹೆಬ್ಬಾಗಿಲಲ್ಲಿ ನೊಂದವರಿಂದ ಆಗಾಗ ಕೇಳಿ ಬರುತ್ತಿದೆ.
ಸರ್ವೆ ಕಚೇರಿಯ ಕೆಲವು ಸರ್ವೇಯರ್ ಗಳು ಮತ್ತು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಒಂದೊಂದು ಸರ್ವೇ ನಂಬರ್ ಗೆ ಅರ್ಜಿದಾರರಿಂದ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ, ಮಾತ್ರವಲ್ಲ “ದುಡ್ಡು ಕೊಡದಿದ್ರೆ ಪಹಣಿ ಫ್ಲೋಟಿಂಗ್ ಆಗುವುದೇ ಇಲ್ಲ” ಎಂದು ನೇರವಾಗಿ ಬೆದರಿಸುತ್ತಾ ಕಿರುಕುಳ ನೀಡುತ್ತಾ ಕಡತ ವಿಳಂಬ ಮಾಡುತ್ತಿರುವ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದೆ.
ಪ್ಲೋಟಿಂಗ್ ಆಗಲೇ ಬೇಕೆಂದು ನಿರ್ಧಾರಕ್ಕೆ ಬಂದ ಕೆಲವು ಅರ್ಜಿದಾರರು ದಲ್ಲಾಳಿಗಳು ಮತ್ತು ಸರ್ವೆ ಅಧಿಕಾರಿಗಳ ಲಂಚ ಬಾಚುವ ಜಂಟಿ ಯೋಜನೆಗೆ ಹೆದರಿ ಸಾಲ ಸೂಲ ಮಾಡಿ ಅವರು ಕೇಳಿದಷ್ಟು ಅಥವಾ ದಲ್ಲಾಳಿಗಳು ನಿಗದಿಪಡಿಸಿದಷ್ಟು ದುಡ್ಡು ಕೊಟ್ಟು ಪ್ಲಾಟಿಂಗ್ ಮಾಡಿಸುವಷ್ಟು ನೊಂದಿದ್ದಾರೆ. ಈ ವಿಚಾರ ತಹಶೀಲ್ದಾರ್ ಗಮನಕ್ಕಾಗಲಿ ಉಪ ತಹಶೀಲ್ದಾರ್ ಗಮನಕ್ಕಾಗಲಿ ಅಥವಾ ಇಲಾಖೆಯ ಇತರ ಅಧಿಕಾರಿಗಳ ಗಮನಕ್ಕಾಗಲಿ ಬರುವುದಿಲ್ಲವೇ? ಎಂಬ ಪ್ರಶ್ನೆಗಳು ನಾಗರಿಕರಿಂದ ಕೇಳಿ ಬರುತ್ತಿದೆ.
ಮಾಜಿ ಶಾಸಕ ವಸಂತ ಬಂಗೇರ ಅವರು ಆಗಾಗ ತಾಲೂಕು ಕಚೇರಿಗೆ ಬಂದು ಭ್ರಷ್ಟ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ಬೆವರಿಳಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿ ‘ಲಂಚ’ ಭೂತದಿಂದ ವರ್ಷಗಟ್ಟಲೆ ವಿಳಂಬವಾಗುತ್ತಿದ್ದ ಕಡತಗಳಿಗೆ ವೇಗ ಕೊಡುತ್ತಿದ್ದರು. ಆದರೆ ಅವರಿಲ್ಲದ ಬೆಳ್ತಂಗಡಿಯ ತಾಲೂಕು ಆಡಳಿತ ಸೌಧದಲ್ಲಿ ಸಣ್ಣ ಪುಟ್ಟ ಕೆಲಸಗಳು ಬಿಟ್ಟರೆ ಇತರ ಎಲ್ಲಾ ಪ್ರಮುಖ ಕೆಲಸಗಳು ಕೋಮಾ ಸ್ಥಿತಿಗೆ ತಲುಪಿದೆ ಎಂಬ ದೂರುಗಳು ಇವೆ.
ಈಗ ಕಂದಾಯ ಇಲಾಖೆಯ ಸರ್ವೇ ಇಲಾಖೆ, ದಾಖಲೆ ಕೋಣೆಗಳಲ್ಲಿ ಬಹಿರಂಗವಾಗಿ ದರ ನಿಗದಿ ಮಾಡಿ ಕಡತ ಮುಟ್ಟುವ ಲಂಚ ಪಟುಗಳ ಕಾರುಬಾರು ಜೋರಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇನ್ನೊಂದೆಡೆ ಸಿಬ್ಬಂದಿ ಕೊರತೆ ನೀಗಿಸಲು ಕೆಲವು ಗ್ರಾಮಗಳ
ಗ್ರಾಮ ಆಡಳಿತಾಧಿಕಾರಿಗಳನ್ನು ಕೆಲವು ವಿಭಾಗಗಳಿಗೆ ನೇಮಿಸಲಾಗಿದ್ದು ಮೇಲಿನ ಅಧಿಕಾರಿಗಳ ಸೂಚನೆಯಂತೆ ಕೆಲವು ಟೇಬಲ್ ಗಳು ವಸೂಲಿ ಶೂರರ ಅಡ್ಡೆಯಂತಾಗಿದೆ. ಕೆಲವು ತಮಗಿಷ್ಟವಿಲ್ಲದಿದ್ದರೂ ಜನರಿಂದ ‘ಕಾಣಿಕೆ’ ಪಡೆದು ಮೇಲಿನ ಅಧಿಕಾರಿಯ ಸನ್ನಿಧಾನಕ್ಕೆ ಒಪ್ಪಿಸಬೇಕಾದ ಪರಿಸ್ಥಿತಿ ಎದುರಿಸುವಂತಾಗಿದೆ ಎಂಬ ದೂರುಗಳಿವೆ.
ಕೆಲವು ವಿಭಾಗಗಳಲ್ಲಿ ಆಯಾ ಸಿಬ್ಬಂದಿಗಳು ದಲ್ಲಾಳಿಗಳಿದ್ದರೆ ಮಾತ್ರ ಕೆಲಸ ಮಾಡಿ ಕೊಡುತ್ತಾರೆ, ದಲ್ಲಾಳಿಗಳ ಮೂಲಕ ಹೋಗುವ ಕಡತಗಳಿಗೆ ಮಾತ್ರ ಹೆಚ್ಚು ‘ಬೆಲೆ’ ಬಡ ಅರ್ಜಿದಾರ ಬೋರೇ ಗೌಡನಿಂದ ಹೋದ ಕಡತಕ್ಕೆ ಬೆಲೆಯೇ ಇಲ್ಲ, ಎಡಗೈಯಲ್ಲಿ ಸ್ವೀಕರಿಸಿದ ಕಡತ ಎಲ್ಲೋ ಮೂಲೆ ಸೇರಿರುತ್ತದೆ, ಕೆಲವು ದಿನ ಬಿಟ್ಟು ಹೋಗಿ ವಿಚಾರಿಸಿದರೆ ” ಹುಡುಕಿ ಇಡುತ್ತೇನೆ ಮತ್ತೆ ಬನ್ನಿ” ಎಂದೂ , ಮತ್ತೆ ಹೋದರೆ ಫೈಲ್ ಸಿಕ್ಕಿದೆ ಒಂದು ವಾರ ಬಿಟ್ಟು ಬನ್ನಿ ಮಾಡಿ ಇಡುತ್ತೇನೆ” ಎಂದೂ ಒಂದು ವಾರ ಬಿಟ್ಟು ಹೋದರೆ ಆ ಜಾಗದಲ್ಲಿ ಇನ್ನೊಬ್ಬ ಇರುತ್ತಾರೆ ,” ಅವರು ರಜೆಯಲ್ಲಿದ್ದಾರೆ ಅಥವಾ ಇನ್ನೂ ಬಂದಿಲ್ಲ, ನಿಮ್ಮ ಫೈಲ್ ನನಗೆ ಗೊತ್ತಿಲ್ಲ , ಅವರು ಬಂದ್ರೆ ಹೇಳುತ್ತೇನೆ, ಈಗ ಹೋಗಿ..” ಎಂಬ ಉತ್ತರ ತಾಲೂಕು ಕಚೇರಿ ಬಹುತೇಕ ವಿಭಾಗಗಳಲ್ಲಿ ಮಾಮೂಲು..!
ಇಂಥ ಅವ್ಯವಸ್ಥೆ ಇಲ್ಲಿ ಬೆರಳೆಣಿಕೆಯ ಪ್ರಾಮಾಣಿಕ ಅಧಿಕಾರಿಗಳನ್ನೂ ಸಿಬ್ಬಂದಿಗಳನ್ನೂ ನಂಬದಂತೆ ಮಾಡಿದೆ. ಮಾತ್ರವಲ್ಲ; ಲಂಚ ಚತುರರ ಹಾವಳಿ ಕಂದಾಯ ಇಲಾಖೆಯ ಮಾನ ಹರಾಜು ಹಾಕುವಂತಿದೆ. ತಾಲೂಕು ಕಚೇರಿಗೆ ಬಂದು ಮಹಡಿಯಿಂದ ಮಹಡಿಗೆ ಹತ್ತಿ ಇಳಿದು ಅಲೆದಾಡಿ ನೊಂದ ಅರ್ಜಿದಾರರನ್ನು ವಿಚಾರಿಸಿದರೆ ಸರ್ವೇ ಇಲಾಖೆಯಲ್ಲಿ ದಿನ ನಿತ್ಯ ನೂರಾರು ‘ಕವರ್ ಸ್ಟೋರಿ’ಗಳು ಸಿಗುತ್ತವೆ.
ಹಾಗಂತ ಸರ್ವೇ ಇಲಾಖೆಯಲ್ಲಿ ಎಲ್ಲಾ ಅಧಿಕಾರಿಗಳೂ ಸಿಬ್ಬಂದಿಗಳೂ ಭ್ರಷ್ಟರೇ ಎಂದಲ್ಲ; ಅಥವಾ ಸರ್ವೇ ವಿಭಾಗದಲ್ಲಿ ಮಾತ್ರ ಲಂಚ ಹಾವಳಿ ಇದೆ ಎಂದಲ್ಲ, ಅತೀ ಹೆಚ್ಚು ಲಂಚ ವೈಭವ ಕೇಳಿ ಬರುತ್ತಿರುವುದು ಇದೇ ವಿಭಾಗದಲ್ಲಿ ಎಂಬುದನ್ನು ತಾಲೂಕು ಕಚೇರಿಗೆ ವಾರಕ್ಕೊಮ್ಮೆ ಭೇಟಿ ನೀಡುವ ಪುತ್ತೂರು ಸಹಾಯಕ ಕಮಿಷನರ್ ಒಮ್ಮೆ ತುರ್ತಾಗಿ ಗಮನಿಸಲೇ ಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಅವರ ಆಶಯಕ್ಕೆ ಇಲ್ಲಿ ನಿತ್ಯ ಎಳ್ಳು ನೀರು ಬಿಡುವ ನಳ್ಳಿಯನ್ನೇ ಅಳವಡಿಸಿದಂತಿದೆ ಎನ್ನುವಷ್ಟರ ಮಟ್ಟಿಗೆ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಹೆಬ್ಬಾಗಿಲಲ್ಲಿ ಲಂಚದ ಘಾಟು ಸಾರ್ವಜನಿಕರ ಮುಖಕ್ಕೆ ಹೊಡೆಯುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿದೆ.
ವಿರೋಧ ಪಕ್ಷದಲ್ಲಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ತಾಲೂಕು ಭ್ರಷ್ಟಾಚಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದರೂ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರದ ತಿಮಿಂಗಿಲಗಳನ್ನು ಸಾಕುವುದರಲ್ಲಿ ಕಾಂಗ್ರೆಸ್ – ಬಿಜೆಪಿ ದಲ್ಲಾಳಿಗಳು ಮೈತ್ರಿ ಮಾಡಿಕೊಂಡಂತಿದೆ.
ಎರಡೂ ಪಕ್ಷಗಳ ಪ್ರಭಾವೀ ದಲ್ಲಾಳಿಗಳ ಹಾವಳಿಯ ಪರಿಣಾಮ ಬಡವರೂ ಕೂಡ ತಾಲೂಕು ಕಚೇರಿಯ ಮೆಟ್ಟಿಲು ಹತ್ತಲು ಹಿಂಜರಿಯುವಂತಾಗಿದೆ. ರಾಜಕೀಯ ಲಾಭವಿರುವ ವಿವಾದಿತ ವಿಚಾರಗಳು ಬಂದಾಗ ಮಾತ್ರ ಎಚ್ಚೆತ್ತುಕೊಂಡು ಧಾವಿಸಿ ಬಂದು ಪೌರುಷ ತೋರುವ ಬಿಜೆಪಿ ಬೆಳ್ತಂಗಡಿ ಮಂಡಲದ ಮಾತಿನ ಮಲ್ಲರು ಕಂದಾಯ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಯಾಕೆ ಮೌನವಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಬಿಜೆಪಿ ಚಾವಡಿಯಲ್ಲೇ ಉತ್ತರವೂ ಇದೆ ಎಂಬ ಅಭಿಪ್ರಾಯಗಳಿವೆ.
ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಗುಮಾಸ್ತನಿಂದ ಹಿಡಿದು ಹಸಿರು ಸಹಿಯ ದೊಡ್ಡ ತಿಮಿಂಗಿಲಗಳವರೆಗೆ ಲಂಚ ಸ್ವೀಕರಿಸುವವರ ಹಾವಳಿ ಹಿಂದಿನಿಂದಲೂ ಇದೆ, ಇನ್ನೊಂದೆಡೆ ಒಂದು ರೂಪಾಯಿ ಲಂಚ ಸ್ವೀಕರಿಸದ ಹಣದ ಬೇಡಿಕೆ ಇಡದ ಮಹಿಳಾ ಸಿಬ್ಬಂದಿ
(ಪಿಪಿಡಿಆರ್ ವಿಭಾಗ) ಉಪತಹಶೀಲ್ದಾರ್ ಗಳೂ ಇತರ ವಿಭಾಗದಲ್ಲಿ ಕೆಲವು ಮಹಿಳಾ ಸಿಬ್ಬಂದಿಗಳೂ ಇದ್ದಾರೆ; ಎಂಬ ಅಭಿಮಾನದ ಮಾತುಗಳನ್ನು ಇಲ್ಲಿ ನೆನಪಿಸಲು ಬೇಕು. =========================================



Post Comment