ಉಜಿರೆ ಘರ್ಷಣೆ ಪ್ರಕರಣ: ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಸೇರಿ ಹಲವರು ಬೆಳ್ತಂಗಡಿ ಠಾಣೆಗೆ ಹಾಜರು

ಬೆಳ್ತಂಗಡಿ : ಇತ್ತೀಚೆಗೆ ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಉಜಿರೆಯ ಖಾಸಗಿ ಆಸ್ಪತ್ರೆ ಮುಂಭಾಗ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಬುಧವಾರ
ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 76/77/79/2025 ಪ್ರಕರಣದ ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಪ್ರಕರಣದಲ್ಲಿ 16 ಮಂದಿ ಆರೋಪಿಗಳಿಗೆ ಆ.20 ರಂದು 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ನೋಟಿಸ್ ತಲುಪಿದ ಬೆನ್ನಲ್ಲೇ ಬುಧವಾರ ಸಂಜೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಉಜಿರೆಯ ಖಾಸಗಿ ಆಸ್ಪತ್ರೆ ವಠಾರದಲ್ಲಿ ಅಕ್ರಮ ಕೂಟ ಆರೋಪದಲ್ಲಿ ಸಮೊಟೊ ಪ್ರಕರಣ, ಖಾಸಗಿ ಚಾನೆಲ್ ವರದುಗಾರನ ಮೇಲೆ ಹಲ್ಲೆ ಆರೋಪದಲ್ಲಿ ಪ್ರಕರಣ, ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ಆರೋಪ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಯೂಟ್ಯೂಬರ್ ಗಳ ಮೇಲಿನ ಹಲ್ಲೆಯ ಬೆನ್ನಲ್ಲೇ ಉಜಿರೆಯಲ್ಲಿ ನಡೆದ ಘರ್ಷಣೆ ಪ್ರಕರಣದಲ್ಲಿ
ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣಣವರ್, ಜಯಂತ್.ಟಿ ವೆಂಕಪ್ಪ ಕೋಟ್ಯಾನ್, ಶ್ರೀನಿವಾಸ್ ಗೌಡ, ಮೋಹನ್ ಶೆಟ್ಟಿ , ತನುಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಗಣೇಶ್ ಶೆಟ್ಟಿ, ರಾಜೇಶ್ ಭಟ್ ಸೇರಿದಂತೆ 16 ಮಂದಿಗೆ ಆ.20 ರಂದು ವಿಚಾರಣೆಗೆ ಹಾಜರಾಗಲು ಪೊಲೀಸ್ ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದಾರೆ.














Post Comment