ಎಸ್.ಐ.ಟಿ. ಮೆಟ್ಟಲೇರಿದ ಸೌಜನ್ಯ ತಾಯಿ ಕುಸುಮಾವತಿ

ಬುರುಡೆ ಚೆನ್ನಯ್ಯ ಬಾಯ್ಬಿಟ್ಟ ಸ್ಫೋಟಕ ಹೇಳಿಕೆ ಬಗ್ಗೆ ತನಿಖೆಗೆ ಒತ್ತಾಯ
ಬೆಳ್ತಂಗಡಿ : ಧರ್ಮಸ್ಥಳ ಸರಣಿ ಸಮಾಧಿ ಪ್ರಕರಣದ ದೂರುದಾರನಾಗಿ ಕೆಲವು ಸುಳ್ಳು ಹೇಳಿಕೆಗಳನ್ನು ನೀಡಿರುವ ಆರೋಪದಲ್ಲಿ ಇದೀಗ ಎಸ್ ಐ ಟಿ ಕಸ್ಟಡಿಯಲ್ಲಿರುವ ಚೆನ್ನಯ್ಯ ವಿಚಾರಣೆ ವೇಳೆ ಸೌಜನ್ಯ ಪ್ರಕರಣದ ಬಗ್ಗೆ ನೀಡಿರುವ ಮಹತ್ವದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯ ತಾಯಿ ಕುಸುಮಾವತಿ ಅವರು ಎಸ್.ಐ.ಟಿ. ಕಚೇರಿಗೇ ದೂರು ನೀಡಿದ್ದಾರೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಉಜಿರೆ ಎಸ್.ಡಿ.ಎಂ. ಕಾಲೇಜು ಪಿಯುಸಿ ವಿದ್ಯಾರ್ಥಿನಿ ಕು.ಸೌಜನ್ಯಾ 2012ರ ಅಕ್ಟೋಬರ್ 9ರಂದು ಬೆಳಿಗ್ಗೆ ಎಂದಿನಂತೆ ಕಾಲೇಜಿಗೆ ಹೋದವಳು ಸಂಜೆ ಕಾಲೇಜು ಬಿಟ್ಟು ಹೊರಟು ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ನಿಲ್ದಾಣದಲ್ಲಿ ಇಳಿದು ಮುಖ್ಯ ರಸ್ತೆಯಲ್ಲಿ ಪಾಂಗಾಳ ಕ್ರಾಸ್ ನತ್ತ
ನಡೆದುಕೊಂಡು ಹೋಗಿದ್ದಳು. ಆದರೆ ಅಂದು ಮನೆಗೆ ತಲುಪದೆ ಕಾಣೆಯಾಗಿದ್ದು ಮರುದಿನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸಮೀಪದ ಮಣ್ಣಸಂಕ ಎಂಬಲ್ಲಿ ಕಾಡಿನ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಶವ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸ್ಥಿತಿಯಲ್ಲಿ ಅರೆ ನಗ್ನವಾಗಿ ಪತ್ತೆಯಾಗಿತ್ತು. ಜಿಲ್ಲೆ, ರಾಜ್ಯ, ದೇಶಾದ್ಯಂತ ನಿರಂತರ ಹೋರಾಟಗಳು ನಡೆದ ಫಲವಾಗಿ ಪ್ರಕರಣವನ್ನು ಸೌಜನ್ಯ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಲಾಗಿತ್ತು.
ಸಾಕ್ಷ್ಯ ನಾಶ, ನೈಜ ಆರೋಪಿಗಳ ರಕ್ಷಣೆಯ ಬಗ್ಗೆ ಆರೋಪಗಳು ಕೇಳಿ ಬಂದಿತ್ತು. ಸಂತೋಷ್ ರಾವ್ ಆರೋಪಿ ಎಂದು ಹಲವು ವರ್ಷ ಜೈಲಲ್ಲಿ ಕೊಳೆಯ ಬೇಕಾಯಿತು. ಬಳಿಕ ಸಿಬಿಐ ಕೋರ್ಟ್ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ್ದು ಮರುತನಿಖೆಯ ಕೂಗು ಕೇಳಿ ಬರುತ್ತಲೇ ಇದ್ದು ಮರುತನಿಖೆ ನಡೆಯಲೇ ಇಲ್ಲ, ಪ್ರಕರಣದ ನೈಜ ಆರೋಪಿಗಳು ಇದುವರೆಗೂ ಪತ್ತೆಯಾಗಿಲ್ಲ. ಇದೀಗ ಸೌಜನ್ಯ ತಾಯಿ ಕುಸುಮಾವತಿ ಮತ್ತೆ ಎಸ್.ಐ.ಟಿ. ಕಚೇರಿಯ ಮೆಟ್ಟಲೇರಿದ್ದು ಮಗಳ ಸಾವಿನ ಪ್ರಕರಣದ ಬಗ್ಗೆ ಎಸ್ ಐ ಟಿ ಕಸ್ಟಡಿಯಲ್ಲಿರುವ ದೂರುದಾರ ಚೆನ್ನಯ್ಯ ವಿಚಾರಣೆ ವೇಳೆ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಬೇಕೆಂದು ದೂರು ನೀಡಿದ್ದಾರೆ.















Post Comment