ಕರ್ನಾಟಕ ಹಿಂ.ವ. ಆಯೋಗ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆಜಾತಿ ಕಾಲಂ ನಂ:9ರಲ್ಲಿ ಕಡ್ಡಾಯವಾಗಿ ‘ಬಿಲ್ಲವ’ ನಮೂದಿಸಲು ಸಮುದಾಯಕ್ಕೆ ಮನವಿ

ಬೆಳ್ತಂಗಡಿ : ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇಂದಿನಿಂದ (ಸೆ.22) ನಡೆಯುವ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಬೆಳ್ತಂಗಡಿ ತಾಲೂಕಿನ ಬಿಲ್ಲವ ಸಮುದಾಯದ ಪ್ರತಿಯೊಬ್ಬರು ಜಾತಿ ಕಾಲಂ ನಂ 9ರಲ್ಲಿ ಕಡ್ಡಾಯವಾಗಿ ‘ಬಿಲ್ಲವ ‘ ಎಂದೇ ನಮೂದಿಸಬೇಕು ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ತಿಳಿಸಿದ್ದಾರೆ.
ಅವರು ಸೋಮವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ
ಸರಕಾರದ ಎಲ್ಲಾ ಮೀಸಲಾತಿ, ಸೌಲಭ್ಯಗಳು ಜನಸಂಖ್ಯೆಯ ಆಧಾರದಲ್ಲಿ ನಿರ್ಧಾರವಾಗುವುದರಿಂದ, ಬಿಲ್ಲವರೆಲ್ಲರೂ 9ನೇ ಜಾತಿ ಕಾಲಂನಲ್ಲಿ ಬಿಲ್ಲವ ಎಂದೇ ನಮೂದಿಸಬೇಕು.
ಯಾರೂ ತಮ್ಮ ‘ಬಳಿ’ಯನ್ನು (ಸರ್‌ನೇಮ್ ಉದಾ: ಬಂಗೇರ, ಸಾಲಿಯಾನ್, ಸುವರ್ಣ, ಇತ್ಯಾದಿ… ) ನೀಡಬಾರದು. ಹಿಂದಿನ ಜಾತಿಗಣತಿ ವೇಳೆ ಬಿಲ್ಲವರು ತಮ್ಮ ‘ಜಾತಿ’ಯನ್ನು ನಮೂದಿಸುವಾಗ ‘ಬರಿ’ಯನ್ನು ಜಾತಿಯಾಗಿ ನೀಡಿದ್ದರಿಂದ ಬಿಲ್ಲವರ ಜನಸಂಖ್ಯೆ ತೀರಾ ಕಡಿಮೆ ಬಂದಿತ್ತು.
ಕಾರಣ ನಮ್ಮವರ ಕೆಲವು ಸರ್‌ನೇಮ್ ಗಳು ಮತ್ತು ಉಳಿದ ಕೆಲವು ಜಾತಿಗಳ ಸರ್‌ನೇಮ್ ಒಂದೇ ಆಗಿರುವುದರಿಂದ ಗೊಂದಲವಾಗಿತ್ತು. ಈ ಗೊಂದಲವನ್ನು ತಪ್ಪಿಸಲು ಕರಾವಳಿಯ ಬಿಲ್ಲವರೆಲ್ಲರೂ ಜಾತಿ ಹೆಸರನ್ನು ಸ್ಪಷ್ಟವಾಗಿ ನೀಡಿ 9ನೇ ಜಾತಿ ಕಾಲಂನಲ್ಲಿ ‘ಬಿಲ್ಲವ’ ಎಂದೇ ಬರೆಸಬೇಕು ಎಂದು ಕರೆ ನೀಡಿದರು.
10ನೇ ಉಪಜಾತಿ ಕಾಲಂನಲ್ಲಿ ಅನ್ವಯಿಸುವುದಿಲ್ಲ ಎಂದು ಬರೆಯಬೇಕು. ಅಲ್ಲದೇ 11ನೇ ಕಾಲಂನ ಜಾತಿಗೆ ಇರುವ ಸಮಾನರ್ಥಕ ಹೆಸರು ಎಂದು ಇರುವಲ್ಲಿ ಅನ್ವಯಿಸುವುದಿಲ್ಲ ಎಂದೇ ಬರೆಯಬೇಕು ಎಂದ ಅವರು ಕರ್ನಾಟಕದಲ್ಲಿ ಈಗ 26 ಒಳಪಂಗಡಗಳಿರುವ ಬಿಲ್ಲವ ಸಮುದಾಯದ ಜನಸಂಖ್ಯೆ 40ರಿಂದ 50ಲಕ್ಷವಿದ್ದು, ರಾಜ್ಯದ ನಾಲ್ಕನೇ ಗರಿಷ್ಠ ಜನಸಂಖ್ಯೆ ಹೊಂದಿರುವ ಬಿಲ್ಲವ, ಈಡಿಗ, ನಾಮಧಾರಿ, ನಾಯಕ್, ಎಲ್ಲವೂ ಬಿಲ್ಲವ ಜಾತಿಯಡಿ ಬರಲಿದ್ದು, ಕರಾವಳಿಯ ಬಿಲ್ಲವರು ಮಾತ್ರ ಕಡ್ಡಾಯವಾಗಿ ಜಾತಿಯನ್ನು ‘ಬಿಲ್ಲವ’ ಎಂದೇ ನಮೂದಿಸುವಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಮುದಾಯ ನಾಯಕರು ಒಮ್ಮತದಿಂದ ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ)ದ ಉಪಾಧ್ಯಕ್ಷರು ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಜ್, ಕೋಶಾಧಿಕಾರಿ ಪ್ರಶಾಂತ್ ಕುಮಾರ್ ಮಚ್ಚಿನ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ
ಎಂ.ಕೆ ಪ್ರಸಾದ್, ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಸಂಘದ ಪ್ರಮುಖರಾದ ಶುಭಕರ ಪೂಜಾರಿ ಸಾವ್ಯ, ಸಂತೋಷ್ ಉಪ್ಪಾರ್, ರೂಪೇಶ್ , ಚಂದ್ರಶೇಖರ, ಚಿದಾನಂದ ಪೂಜಾರಿ ಎಲ್ದಡ್ಕ, ಜಯರಾಂ ಬಂಗೇರ ಹೇರಾಜೆ ಉಪಸ್ಥಿತರಿದ್ದರು.














Post Comment