ಧರ್ಮಸ್ಥಳ ಸಮೂಹ ಸಮಾಧಿ ಪ್ರಕರಣದ ಸಾಕ್ಷಿ ದೂರುದಾರ, ಆರೋಪಿ ಚಿನ್ನಯ್ಯಗೆ ಜಾಮೀನು ಮಂಜೂರು

ಬೆಳ್ತಂಗಡಿ : ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿ ದೂರುದಾರನಾಗಿ ಬಳಿಕ ತನ್ನ ಸಂಶಯಾಸ್ಪದ ಗೊಂದಲಮಯ
ಹೇಳಿಕೆಯಿಂದಲೇ ಎಸ್ ಐ ಟಿಯಿಂದ ಆರೋಪಿಯಾಗಿ
ಪರಿಗಣಿಸಲ್ಪಟ್ಟು ಬಂಧಿತನಾಗಿ ಜೈಲಿನಲ್ಲಿದ್ದ ಸಿ ಎನ್ ಚಿನ್ನಯ್ಯ ಅವರಿಗೆ ಸೋಮವಾರ ಮಂಗಳೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ನಿರೀಕ್ಷೆಯಂತೆ ಷರತ್ತುಬದ್ಧ ಜಾಮೀನು ನೀಡಿದೆ.
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿ ದೂರುದಾರನಾಗಿದ್ದ (ಎಫ್‌ಐಆರ್- 39/2025)
ಚಿನ್ನಯ್ಯ ಅವರನ್ನು ಬಳಿಕ ಆಗಸ್ಟ್ 23ರಂದು ಸುಳ್ಳು ಸಾಕ್ಷ್ಯ ಮತ್ತು ನಕಲಿ ದಾಖಲೆಗಳ ಆರೋಪದ ಮೇಲೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರನ್ನು ಬಂಧಿಸಿತ್ತು.
ಮೂಲಗಳ ಪ್ರಕಾರ ಇದೀಗ ಸೋಮವಾರ ಚಿನ್ನಯ್ಯನಿಗೆ ನ್ಯಾಯಾಲಯವು ಜಾಮೀನು ನೀಡಿದ್ದು ಜಾಮೀನು ಮಂಜೂರುಗೊಳಿಸುವ ಸಂದರ್ಭ ನ್ಯಾಯಾಲಯವು
ಸಾರ್ವಜನಿಕವಾಗಿ ಮಾತನಾಡುವುದನ್ನು ನಿಷೇಧಿಸಿದೆ. ಜಾಮೀನು ಕೊಡುವುದಕ್ಕೂ ಮುನ್ನ ನ್ಯಾಯಾಲಯವು ವಿಧಿಸಿದ ಮಹತ್ವದ ಷರತ್ತುಗಳಲ್ಲಿ ಇದು ಒಂದು.

ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಗುರುವಾರ (ನವೆಂಬರ್ 20, 2025) ಬೆಳ್ತಂಗಡಿ ನ್ಯಾಯಾಲಯದಲ್ಲಿ ಎಸ್‌ಐಟಿ ದೂರು ವರದಿಯನ್ನು ಸಲ್ಲಿಸಿದ ಮೂರು ದಿನಗಳ ನಂತರ ಚಿನ್ನಯ್ಯನಿಗೆ ಜಾಮೀನು ಸಿಕ್ಕಿದೆ. ನ್ಯಾಯಾಧೀಶರು ಆರೋಪಿಗೆ ಸಾರ್ವಜನಿಕವಾಗಿ ಮಾತನಾಡದಂತೆ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ನ್ಯಾಯಾಲಯದ ಷರತ್ತು ಉಲ್ಲಂಘಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರೆ, ಜಾಮೀನು ರದ್ದಾಗುವ ಸಂದರ್ಭ ಬರಬಹುದು.
ಜುಲೈ 3ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಚಿನ್ನಯ್ಯ ಅವರಿಗೂ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಸಾಕ್ಷಿ ರಕ್ಷಣೆಯನ್ನು ವಿಸ್ತರಿಸಲಾಗಿತ್ತು.
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ತನ್ನನ್ನು ಕೊಲೆ, ಅತ್ಯಾಚಾರ ಮತ್ತಿತರ ದೌರ್ಜನ್ಯಗಳಿಗೆ ಒಳಗಾದ ಮಾನವರ ಮೃತ ದೇಹಗಳನ್ನು ಹೂಳಲು ತನ್ನನ್ನು ಒತ್ತಾಯಿಸಲಾಗಿದೆ ಎಂದು ಚಿನ್ನಯ್ಯ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಸೆಕ್ಷನ್ 183 ರ ಅಡಿಯಲ್ಲಿ ಅವರು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ. ಅವರ ದೂರು ಮತ್ತು ಹೇಳಿಕೆಯ ನಂತರ, ಪ್ರಥಮ ಮಾಹಿತಿ ವರದಿ (ಎಫ್‌ಐಆರ್ 39/2025) ದಾಖಲಿಸಲಾಗಿತ್ತು.
ಮಹಿಳಾ ಆಯೋಗದ ಪತ್ರದ ಬೆನ್ನಲ್ಲೇ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ಜುಲೈ 19ರಂದು ಎಸ್‌ಐಟಿಯನ್ನು ರಚಿಸಿತು.
ತನಿಖೆಯನ್ನು ಪ್ರಾರಂಭಿಸಿದ ಎಸ್‌ಐಟಿ, ಮೊದಲ ಸಮಾಧಿಯನ್ನು ಹೊರತೆಗೆಯುವ ಕಾರ್ಯಾಚರಣೆಗಳನ್ನು ನಡೆಸಿತು ಮತ್ತು ಎರಡು ಅಸ್ಥಿಪಂಜರಗಳ ಅವಶೇಷಗಳನ್ನು ಕಂಡುಹಿಡಿದಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ ಚಿನ್ನಯ್ಯ ಈ ಶವಗಳನ್ನು ತಾನು ನಿರ್ವಹಿಸುತ್ತಿಲ್ಲ ಎಂದು ಹೇಳಿಕೊಂಡರು. ನಂತರ ಅವರು ಪ್ರಮಾಣವಚನದ ಅಡಿಯಲ್ಲಿ ಸುಳ್ಳು ಹೇಳಿದ್ದಾರೆ ಮತ್ತು 183 ರ ಅಡಿಯಲ್ಲಿ ಅವರ ಹೇಳಿಕೆಗಳು ಸುಳ್ಳು ಎಂದು ಹೇಳಿಕೊಂಡರು. ಸೌಜನ್ಯ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಮತ್ತು ಸೌಜನ್ಯ ಮಾವ ವಿಠಲ್ ಗೌಡ ಅವರು ಸುಳ್ಳು ಹೇಳಿಕೆಗಳನ್ನು ದಾಖಲಿಸಲು ಒತ್ತಾಯಿಸಿದರು ಎಂದು ಅವರು ಆರೋಪಿಸಿ ಅಚ್ಚರಿ ಮೂಡಿಸಿದ್ದರು.

ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪ್ರಸ್ತುತಪಡಿಸಲಾದ ತಲೆಬುರುಡೆಯನ್ನು ಅಪರಾಧ ಸ್ಥಳದಿಂದ ತಾನಾಗಿ ಪಡೆದುಕೊಂಡಿಲ್ಲ, ಬದಲಾಗಿ ಒಬ್ಬ ಕಾರ್ಯಕರ್ತ ಅದನ್ನು ತನಗೆ ಹಸ್ತಾಂತರಿಸಿದ್ದಾನೆ ಎಂದು ಅವರು ಹೇಳಿಕೊಂಡರು. ನಂತರ ಎಸ್‌ಐಟಿ ಚಿನ್ನಯ್ಯ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿ ಬಂಧಿಸಿತು. ಮತ್ತು ಬಳಿಕ ಪ್ರಕರಣದಲ್ಲಿ ಈತನೇ ಏಕೈಕ ಆರೋಪಿ ಎಂದು ಪರಿಗಣಿಸಲ್ಪಟ್ಟರು. ಎಸ್‌ಐಟಿ ಚಿನ್ನಯ್ಯ ಮತ್ತು ಕಾರ್ಯಕರ್ತರಿಬ್ಬರನ್ನೂ ವಿಚಾರಣೆ ನಡೆಸಿತು. ಕಾರ್ಯಕರ್ತರನ್ನು ಸಾಕ್ಷಿಗಳಾಗಿ ಪ್ರಶ್ನಿಸಲಾಯಿತು. ಸುಮಾರು 13 ದಿನಗಳ ವಿಚಾರಣೆಯ ನಂತರ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು.
ಕಾರ್ಯಕರ್ತರು ತಮ್ಮನ್ನು ಸುಳ್ಳು ಹೇಳಲು ಒತ್ತಾಯಿಸುತ್ತಿದ್ದಾರೆ ಎಂಬ ಮೊದಲ ಆರೋಪಕ್ಕೆ ಪ್ರತಿಯಾಗಿ ಅವರು 183ರ ಅಡಿಯಲ್ಲಿ ಮತ್ತೊಂದು ಹೇಳಿಕೆಯನ್ನು ದಾಖಲಿಸಿದ್ದು ಪ್ರಕರಣವು ಹಲವು ಕುತೂಹಲಕರ ತಿರುವುಗಳನ್ನು ಪಡೆದುಕೊಂಡಿತ್ತು.















Post Comment