ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ಅಧ್ಯಕ್ಷತೆಯಲ್ಲಿ ಪರಿಶಿಷ್ಠರ ಕುಂದು ಕೊರತೆ ಸಭೆ:

ಸುಳ್ಳು ದಲಿತ ದೌರ್ಜನ್ಯ ಪ್ರಕರಣಗಳಿಗೆ ದಲಿತೇತರರು ದಲಿತರನ್ನು ದುರುಪಯೋಗಿಸುವುದು ನಿಜವಾದ ದೌರ್ಜನ್ಯ : ದಲಿತ ಮುಖಂಡರ ಆಕ್ರೋಶ
ಬೆಳ್ತಂಗಡಿ : ದಲಿತೇತರರು ತಮ್ಮ ಸ್ವಾರ್ಥ ಲಾಭಕ್ಕಾಗಿ ಅವರ
ಜಮೀನು , ರಸ್ತೆ ಮತ್ತಿತರ ವಿವಾದಿತ ಕೆಲಸಗಳಿಗೆ ಬಡ ಅಮಾಯಕ ದಲಿತ ಕಾರ್ಮಿಕರಿಗೆ ಹಣಕಾಸಿನ ಆಮಿಷವೊಡ್ಡಿ ದುರುಪಯೋಗಪಡಿಸಿಕೊಂಡು ಸುಳ್ಳು ದಲಿತ ದೌರ್ಜನ್ಯ (ಅಟ್ರಾಸಿಟಿ) ಪ್ರಕರಣಗಳನ್ನು ದಾಖಲಿಸುವ ಘಟನೆಗಳು ನಡೆಯುತ್ತಿದ್ದು ಇಂಥ ದಲಿತ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಬೆಳ್ತಂಗಡಿಯ ದಲಿತ ಮುಖಂಡರು ಪರಿಶಿಷ್ಠರ ಕುಂದು – ಕೊರತೆ ಸಭೆಯಲ್ಲಿ ಒತ್ತಾಯಿಸಿದರು.
ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ/ಪಂಗಡಗಳ ಕುಂದುಕೊರತೆಗಳ ಸಭೆಯಲ್ಲಿ ದಸಂಸ (ಅಂಬೇಡ್ಕರ್ ವಾದ) ಮೈಸೂರು ವಿಭಾಗ ಸಂ.ಸಂಚಾಲಕ ಬಿ.ಕೆ. ವಸಂತ್ ಈ ಬಗ್ಗೆ ಪ್ರಸ್ತಾಪಿಸುತ್ತಾ ದಲಿತ ಸಮುದಾಯದ ಜನರ ದುರುಪಯೋಗವೇ ನಿಜವಾದ ದಲಿತ ದೌರ್ಜನ್ಯವಾಗಿದೆ,
ಇಂಥ ಕೃತ್ಯವೆಸಗುವವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಧ್ವನಿಗೂಡಿಸಿದ ಮಾಜಿ ಜಿ. ಪಂ. ಸದಸ್ಯ ಶೇಖರ್ ಕುಕ್ಕೇಡಿ , ನಿಜವಾಗಿ ದೌರ್ಜನ್ಯ , ಹಿಂಸೆ ಅನುಭವಿಸುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ದಲಿತ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿದೆ , ಆದರೆ ಅದರ ದುರುಪಯೋಗ ಸರಿಯಲ್ಲ ಎಂದ ಅವರು ಜಮೀನು, ರಸ್ತೆ ವಿವಾದಗಳಲ್ಲಿ ಪೋಲಿಸರು ಅನಗತ್ಯವಾಗಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದರು.

ಹಿರಿಯ ದಲಿತ ಮುಖಂಡ ವೆಂಕಣ್ಣ ಕೊಯ್ಯೂರು ಮಾತನಾಡಿ ಕೊಯ್ಯೂರು ಗ್ರಾಮದಲ್ಲಿ ಸರಕಾರಿ ಜಮೀನು ಒತ್ತುವರಿ ವಿವಾದದಲ್ಲಿ ದಲಿತ ಯುವಕರನ್ನು ದುರುಪಯೋಗ ಮಾಡಿಕೊಂಡು ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂಬ ವಿಚಾರವನ್ನು ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ರೋಹಿಣಿ ಸಿ.ಕೆ. ಯಾರೇ ದೂರು ಕೊಟ್ಟರೂ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿ ವಿಚಾರಣೆಯ ಹಂತದಲ್ಲಿ ಸುಳ್ಳು ಎಂದು ಸಾಬೀತಾದಲ್ಲಿ ಬಿ. ರಿಪೋರ್ಟ್ ಸಲ್ಲಿಸಲಾಗುತ್ತದೆ ಎಂದರು.
ಗುತ್ತಿಗೆದಾರ ಪ್ರಭಾಕರ್ ಕನ್ಯಾಡಿ ಮಾತನಾಡಿ ಗ್ರಾಮ ಪಂಚಾಯತ್ ಗಳಲ್ಲಿ ಕಾಮಗಾರಿಗಳನ್ನು ದಲಿತ ಗುತ್ತಿಗೆದಾರರ ಬದಲಾಗಿ ಇತರ ಗುತ್ತಿಗೆದಾರರಿಗೆ ನೀಡಿ ದಲಿತರಿಗೆ ಮೋಸ ಮಾಡಲಾಗುತ್ತದೆ ಎಂದು
ಆರೋಪಿಸಿದರು. ಧರ್ಮಸ್ಥಳ ಅಶೋಕನಗರ ದಲಿತ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ಧೀರಜ್ ತಿಳಿಸಿದರು.
ಕುಂದುಕೊರತೆ ಸಭೆಗೆ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ದಲಿತ ಸಮುದಾಯದ ಅತಿ ಹೆಚ್ಚು ಸಮಸ್ಯೆಗಳು ಈ ಇಲಾಖೆಗಳಿಗೆ ಸಂಬಂಧಿಸಿದ್ದು , ಅವರ ಗೈರುಹಾಜರಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳಲು ಕಾರಣವಾಗುತ್ತದೆ ಎಂದು ಶೇಖರ್ ಕುಕ್ಕೇಡಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಸುಕುಮಾರ್ ದಿಡುಪೆ ಮಾತನಾಡಿ ಮಲವಂತಿಗೆ ಗ್ರಾಮದ ಮಲೆಕುಡಿಯ ಸಮುದಾಯ ಭವನವು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿ 6 ವರ್ಷಗಳಾದರೂ ಇನ್ನೂ ನಿರ್ಮಾಣವಾಗಿಲ್ಲ ಎಂದರು.
ಮಾಜಿ ಜಿ. ಪಂ. ಸದಸ್ಯೆ ಸಿಕೆ ಚಂದ್ರಕಲಾ ಮಾತನಾಡಿ ಕೆಲಸದ ಸ್ಥಳಗಳಲ್ಲಿಯೂ ದಲಿತ ಮಹಿಳೆಯರು ವಿವಿಧ ರೀತಿಯಲ್ಲಿ ದೌರ್ಜನ್ಯ , ಹಿಂಸೆಗೆ ಒಳಗಾಗುತ್ತಾರೆ ಇದನ್ನು ತಡೆಯಲು ಪೋಲಿಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಎಲ್ ಮಾತನಾಡಿ ರಾಜ್ಯ ಸರ್ಕಾರ ಮಂಜೂರುಗೊಳಿಸಿದ ಮಹತ್ವಾಕಾಂಕ್ಷೆಯ ಬೆಳ್ತಂಗಡಿ ಪೋಲಿಸ್ ಉಪ ವಿಭಾಗವನ್ನು ರದ್ದುಗೊಳಿಸಲು ಷಡ್ಯಂತ್ರ ನಡೆಸುತ್ತಿರುವುದನ್ನು ವಿರೋಧಿಸಿ , ಯಾವುದೇ ಕಾರಣಕ್ಕೂ ಪೋಲಿಸ್ ಉಪ ವಿಭಾಗವನ್ನು ರದ್ದು ಪಡಿಸದಂತೆ ಸರ್ಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.
ಪರಿಶಿಷ್ಟ ಜಾತಿ/ ಪಂಗಡಗಳ ವಸತಿ ನಿಲಯ , ವಸತಿ ಶಾಲೆಗಳಲ್ಲಿ ರಾತ್ರಿ ವೇಳೆಯಲ್ಲಿ ವಾರ್ಡನ್ ಗಳು ಇರುವುದಿಲ್ಲ. ಹಾಸ್ಟೆಲ್ ಗಳಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿದ್ದು , ಮಕ್ಕಳ ರಕ್ಷಣಾ ಜವಾಬ್ದಾರಿ ಯಾರು ಎಂದು ಪ್ರಶ್ನಿಸಿದರು.

ಬೆಳ್ತಂಗಡಿ ತಾಲೂಕಿನ ಐದಾರು ಗ್ರಾಮಗಳ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳು ವಂಚಿತಗೊಂಡಿದೆ. ಕಳೆದ ಮಳೆಗಾಲದಲ್ಲಿ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿಯಲ್ಲಿ ಯುವಕರಿಬ್ಬರೂ ಕೊಚ್ಚಿಕೊಂಡು ಹೋಗಿ ಬದುಕುಳಿದಿದ್ದು , ಇದುವರೆಗೂ ಸೇತುವೆ ನಿರ್ಮಾಣವಾಗಿಲ್ಲ , ಕುತ್ಲೂರು ಗ್ರಾಮದಲ್ಲಿಯೂ ಸೇತುವೆ ಮುರಿದು ನಾಲ್ಕೈದು ವರ್ಷಗಳಾದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಡಿವೈಎಸ್ಪಿ ರೋಹಿಣಿ ಸಿ.ಕೆ. ತಿಳಿಸಿದರು.
ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ್ ಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ದಲಿತ ಮುಖಂಡರಾದ ಚೆನ್ನಕೇಶವ , ಸಂಜೀವ ಆರ್, ಕೆ.ನೇಮಿರಾಜ್ , ರಮೇಶ್ ಆರ್, ಶ್ರೀಧರ ಕಳೆಂಜ, ಜಯಾನಂದ ಕೊಯ್ಯೂರು , ಮತ್ತಿತರರು ಉಪಸ್ಥಿತರಿದ್ದರು. ಬೆಳ್ತಂಗಡಿ , ವೇಣೂರು, ಧರ್ಮಸ್ಥಳ ಪೋಲಿಸ್ ಠಾಣೆಗಳ ಸಬ್ ಇನ್ಸ್‌ಪೆಕ್ಟರ್ ಗಳು ಉಪಸ್ಥಿತರಿದ್ದರು.















Post Comment