ಲೈಂಗಿಕ ಕಿರುಕುಳ, ಬೆದರಿಕೆಯಿಂದ ನೊಂದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ : ಫೋಕ್ಸೋ ಪ್ರಕರಣ ದಾಖಲು

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಇಳಂತಿಲ ಗ್ರಾಮದಲ್ಲಿ ನಡೆದಿದ್ದು ಲೈಂಗಿಕ ಕಿರುಕುಳ ಮತ್ತು ಬೆದರಿಕೆಯೇ ಬಾಲಕಿಯ ಸಾವಿಗೆ ಕಾರಣವಾಗಿತ್ತೆಂಬ ಸಂಗತಿ ಉಪ್ಪಿನಂಗಡಿ ಪೊಲೀಸರ ತನಿಖೆಯಿಂದ ಇದೀಗ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಅಪ್ರಾಪ್ತ ಬಾಲಕಿ ನವೆಂಬರ್ 4ರಂದು ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ನವೆಂಬರ್ 12 ರಂದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂಬ್ರ: 56/2025 ಕಲಂ: 194 (3) (IV)BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಮೃತ ಬಾಲಕಿಯನ್ನು ಸ್ಥಳೀಯ ಓರ್ವ ಆರೋಪಿಯು ಲೈಂಗಿಕವಾಗಿ ಬಳಸಿಕೊಂಡಿಕೊಂಡಿದ್ದು ಮತ್ತೋರ್ವ ಆರೋಪಿಯೊಂದಿಗೆ ಸೇರಿ ಬಾಲಕಿಗೆ ಕಿರುಕುಳ ನೀಡಿ, ಬೆದರಿಸಿರುವುದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತ ಬಾಲಕಿಯ ತಾಯಿ ನವೆಂಬರ್28ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನೀಡಿ ದೂರಿನ ಮೇರೆಗೆ ಅ.ಕ್ರ: 111/2025 ಕಲಂ ಕಲಂ: 74, 79, 108 ಜೊತೆಗೆ 3(5) BNS & ಕಲಂ: 8 ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವಂತೆ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ಪೈಕಿ ಪ್ರಮುಖ ಆರೋಪಿಯೂ ಅಪ್ರಾಪ್ತನಾಗಿದ್ದಾನೆ ಎಂಬ ಸಂಗತಿ ಇದೀಗ ಬಯಲಾಗಿದೆ. ಉಪ್ಪಿನಂಗಡಿ ಪೊಲೀಸರು ಮುಂದಿನ ಕಾನೂನು ಕ್ರಮಕ್ಕಾಗಿ ತನಿಖೆ ಮುಂದುವರಿಸಿದ್ದಾರೆ.















Post Comment