ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಯೋಜನೆಗಳ ಹೆಸರು ಬದಲಿಸುವುದೇ ನರೇಂದ್ರ ಮೋದಿ ಸರ್ಕಾರದ ಸಾಧನೆ: ರಕ್ಷಿತ್ ಶಿವರಾಂ

ಬೆಳ್ತಂಗಡಿ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ( ಎಂಜಿ ನೆರೇಗಾ) ಹಿಂದಿನ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಇದು ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ 125 ದಿನಗಳ ಕೆಲಸವನ್ನು ಖಾತರಿಪಡಿಸುವ ಕಾರ್ಯಕ್ರಮ ಮಾತ್ರವಲ್ಲ ಬದಲಾಗಿ ಉದ್ಯೋಗ ಖಾತ್ರಿ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾವೂ ಆಗಿದೆ.
ಇದರ ಹೆಸರನ್ನು ಬದಲಾಯಿಸಿ ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ-ಜಿ ರಾಮ್ ಜಿ ) ಎಂದು ಬದಲಾಯಿಸುವ ಕೇಂದ್ರ ಸರ್ಕಾರದ ಕ್ರಮ ರಾಜಕೀಯ ಪ್ರೇರಿತವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಆರೋಪಿಸಿದ್ದಾರೆ.
ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಬದಲಾವಣೆ ತಂದಂತಹ ಈ ಯೋಜನೆಗೆ ಮಹತ್ವಾಗಾಂಧಿ ಹೆಸರು ಅತ್ಯಂತ ಸೂಕ್ತವಾಗಿದ್ದು ಗಾಂಧೀಜಿ ಹೆಸರನ್ನು ಬದಲಾವಣೆ ಮಾಡಬೇಕು ಎಂಬ ಬಿಜೆಪಿಯ ಹುನ್ನಾರ ಗಾಂಧೀಜಿಯೊಂದಿಗೆ ಬಿಜೆಪಿಗೂ ಮತ್ತು ಸಂಘ ಪರಿವಾರಕ್ಕೆ ಇರುವ ಸೈದ್ಧಾಂತಿಕ ಭಿನ್ನಮತಕ್ಕೂ ಸಂಬಂಧ ಇರುವಂತಿದೆ. ಗ್ರಾಮೀಣ ಭಾಗದ ಜನರ ಜೀವನದಲ್ಲಿ ಬದಲಾವಣೆ ತರುವ ಯಾವುದೇ ಒಂದು ಕಾರ್ಯಕ್ರಮ ನೀಡದ ಬಿಜೆಪಿ ಸರ್ಕಾರ ಈಗ ಹಿಂದಿನ ಕಾಂಗ್ರೆಸ್ ಸರ್ಕಾರ ತಂದಂತ ಮಹಾತ್ವಕಾಂಕ್ಷೆಯ ಯೋಜನೆಗಳನ್ನು ಹೆಸರು ಬದಲಾಯಿಸಿ ತನ್ನ ಸಾಧನೆ ಎಂದು ಬಿಂಬಿಸುವ ಮೂಲಕ ಬಿಜೆಪಿ ಭೌತಿಕ ದಿವಾಳಿತನವನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿರುವ ರಕ್ಷಿತ್ ಶಿವರಾಮ್
ಕಪೋಲಕಲ್ಪಿತ 2047 ‘ ವಿಕಸಿತ ಭಾರತದ’ ಗುರಿ ಸಾಧನೆಗೆ ‘ (ವಿಬಿ-ಜಿ ರಾಮ್ ಜಿ ) ಯೋಜನೆ ಪುರಕವಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಸ್ಪಷ್ಟವಾಗಿ ಇದು ದ್ವೇಷ ರಾಜಕಾರಣದ ಸಂಕೇತವು ಹೌದು ಮತ್ತು ಹೊಸ ಯೋಜನೆಗಳನ್ನು ರೂಪಿಸುವ ಸೃಜನಶೀಲತೆಯ ಕೊರತೆ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಪ್ರಸ್ತುತ ನರೆಗಾ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಪ್ರಾಯೋಜತ್ವದಲ್ಲಿ ನಡೆಯುವ ಯೋಜನೆ. ಆದರೆ ಉದ್ದೇಶಿತ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ 60:40 ಅನುಪಾತದಲ್ಲಿ ಹಣ ಹಂಚಿಕೆಯ ಪದ್ಧತಿಯನ್ನು ಜಾರಿಗೆ ತರಲು ಯೋಜನೆ ರೂಪಿಸಿದೆ.
ಈ ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರದ ಮೇಲೆ ಹೇರುವ ಮೂಲಕ ಕೇಂದ್ರ ಸರ್ಕಾರವು ಯೋಜನೆಯ ಮೂಲ ಬುನಾದಿಯನ್ನು ಹಾಳು ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಹೆಜ್ಜೆಯು ಬಡವರ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ ರಕ್ಷಿತ್ ಶಿವರಾಂ ಪ್ರತಿಪಾದಿಸಿದ್ದಾರೆ.















Post Comment