ಅಕ್ರಮ ಬೃಹತ್ ಕಟ್ಟಡಗಳ ಸ್ವರ್ಗವಾಗುತ್ತಿದೆ; ಲಾಯಿಲಾ ಗ್ರಾ.ಪಂ. ವ್ಯಾಪ್ತಿ !

ಅಕ್ರಮ ಬೃಹತ್ ಕಟ್ಟಡಗಳ ಸ್ವರ್ಗವಾಗುತ್ತಿದೆ; ಲಾಯಿಲಾ ಗ್ರಾ.ಪಂ. ವ್ಯಾಪ್ತಿ !

Share

ಬೆಳ್ತಂಗಡಿ : ಗ್ರಾಮಪಂಚಾಯತ್ ಆಡಳಿತದ ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸರಕಾರಿ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡುವ ದಂಧೆಯಲ್ಲಿ ಕುಖ್ಯಾತಿ ಹೊಂದಿರುವ ಮತ್ತು ಗ್ರೇಡ್ 1 ಗ್ರಾಮ ಪಂಚಾಯತ್ ಎಂಬ ‘ಆರೋಪ’ ಹೊತ್ತ ಲಾಯಿಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರದ ಗೈಡ್ ಲೈನ್ ‘ಮೂಡಾ’ ನಿಯಮಗಳನ್ನು ಗಟಾರಕ್ಕೆಸೆದು ನವೀಕರಣ ದುರಸ್ತಿ ಹೆಸರಿನಲ್ಲಿ ಅನುಮತಿ ನೀಡಲಾಗುತ್ತಿದ್ದು
ಕಾನೂನುಬಾಹಿರವಾಗಿ ತಲೆ ಎತ್ತಿರುವ ಬೃಹತ್ ಅಕ್ರಮ ಕಟ್ಟಡಗಳು ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಪ್ರಾಮಾಣಿಕತೆಯನ್ನು ಶಂಕಿಸುವಂತಿದೆ.


ಬೆಳ್ತಂಗಡಿ ತಾಲೂಕು ಕೇಂದ್ರದ ಕೂಗಳತೆ ದೂರದಲ್ಲಿರುವ ಲಾಯಿಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆಲವು ವರ್ಷಗಳಿಂದ ನಿರಾತಂಕವಾಗಿ ಸರಕಾರಿ ನಿವೇಶನಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುವ ದಂಧೆಯಲ್ಲಿ ಶಾಮೀಲಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇದ್ದು ಇನ್ನೊಂದೆಡೆ ಬೃಹತ್ ಅಕ್ರಮ ಕಟ್ಟಡಗಳ ಮಾಲಕರೊಂದಿಗೆ ಡೀಲಿಂಗ್ ನಲ್ಲಿ ತೊಡಗಿದ್ದಾರೆ ಗಂಭೀರ ಆರೋಪಗಳು ನಾಗರಿಕರಿಂದ ಕೇಳಿ ಬರುತ್ತಿದೆ. ನಾಗರಿಕರ ಆರೋಪಗಳಿಗೆ ಪುಷ್ಠಿ ನೀಡುವಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಲಂಗು ಲಗಾಮಿಲ್ಲದೆ ಬೃಹತ್ ಅಕ್ರಮ ವಾಣಿಜ್ಯ ಕಟ್ಟಡಗಳು ತಲೆ ಎತ್ತಿರುವುದನ್ನು ಕಾಣಬಹುದು.


ತಾ. ಪಂ. ಅಧಿಕಾರಿಗಳ ಅಭಯ ಹಸ್ತದಿಂದ ಗ್ರಾಮಪಂಚಾಯತ್ ನ ಭ್ರಷ್ಟ ಅಧಿಕಾರಿಗಳು ಮತ್ತು ಭ್ರಷ್ಟ ಜನಪ್ರತಿನಿಧಿಗಳು
ಅಕ್ರಮ ಕಟ್ಟಡಗಳ ಮಾಲಕರೊಂದಿಗೆ ಎಷ್ಟೊಂದು ವ್ಯವಸ್ಥಿತವಾಗಿ ಡೀಲಿಂಗ್ ನಡೆಸುತ್ತಾರೆಂದರೆ ಹೊಸ ಖಾಸಗಿ ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಕನ್ವರ್ಶನ್ 9/11 ನಿಯಮಗಳನ್ನು ಉಲ್ಲಂಘಿಸಿ ಬಹುಮಹಡಿಗಳ ಬೃಹತ್ ವಾಣಿಜ್ಯ ಕಟ್ಟಡಗಳಿಗೆ ಹಳೆಯ ಕಟ್ಟಡ ವಿಸ್ತರಣೆ , ದುರಸ್ತಿ ಎಂಬಿತ್ಯಾದಿ ದಾಖಲೆ ಸೃಷ್ಟಿಸಿ ಸಂಬಂಧಪಟ್ಟ ಇಲಾಖೆಗೆಗೂ ಸರಕಾರಕ್ಕೂ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ. ಲಾಯಿಲಾ ಗ್ರಾಮಪಂಚಾಯತ್ ಆಡಳಿತದೊಳಗೆ ಅಕ್ರಮ ವಾಣಿಜ್ಯ ಕಟ್ಟಡಗಳ ಮಾಲಕರೊಂದಿಗೆ ವ್ಯವಹಾರ ಕುದುರಿಸುವ ‘ವಿದ್ವತ್’ ಹೊಂದಿರುವ ಭ್ರಷ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಯಾರು ಎಂಬುದನ್ನು ಪತ್ತೆ ಹಚ್ಚುವವರು ಯಾರು ಎಂಬ ಪ್ರಶ್ನೆಯನ್ನು ಗ್ರಾಮಸ್ಥರು ಕೇಳುವಂತಾಗಿದೆ.

ಭ್ರಷ್ಟ ಅಧಿಕಾರಿಗಳ ಬೆಂಗಾವಲಿನಲ್ಲಿ ಬೆಳ್ತಂಗಡಿ ತಾಲೂಕಿನಲ್ಲೇ ಲಾಯಿಲಾ ಮತ್ತು ಕುವೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿ ಎಂದರೆ ಅಕ್ರಮ ಕಟ್ಟಡಗಳ ಸ್ವರ್ಗವಾಗಿ ಪರಿಣಮಿಸಿದೆಯೇ? ಎಂಬ ಅನುಮಾನ ಮೂಡುತ್ತಿದೆ. ಲಾಯಿಲಾ ಗ್ರಾಮದ ಕಾಶಿಬೆಟ್ಟು ಬಳಿ ಒಂದು ಶಿಕ್ಷಣ ಸಂಸ್ಥೆಯ ಅಕ್ರಮ ಕಟ್ಟಡ ವರ್ಷದ ಹಿಂದೆಯೇ ಬೆಳಕಿಗೆ ಬಂದಿದ್ದು ಕೆಲವು ಸಮಯಗಳ ಹಿಂದೆ ಬೆಳ್ತಂಗಡಿಯ ರಾಜಕೀಯ ಪಕ್ಷವೊಂದರ ಅಧ್ಯಕ್ಷನ ಮಾಲಕತ್ವದ ಹೊಸ ಶಿಕ್ಷಣ ಸಂಸ್ಥೆಯ ಬೃಹತ್ ಅಕ್ರಮ ಕಟ್ಟಡವೊಂದು ತಲೆ ಎತ್ತಿದೆ.
ಕೊಯ್ಯೂರು ಕ್ರಾಸ್ ಬಳಿ ಕೊಯ್ಯೂರು ರಸ್ತೆ ಬದಿಯಲ್ಲಿ ಲೋಕೋಪಯೋಗಿ ಇಲಾಖಾ ರಸ್ತೆ ಅಂಚಿನಲ್ಲೇ ಮತ್ತೊಂದು ಬೃಹತ್ ಅಕ್ರಮ ಕಟ್ಟಡ ಲಾಯಿಲಾ ಗ್ರಾ.ಪಂ. ಕೊಡುಗೆಯಾಗಿದೆ.
ಸಾಮಾನ್ಯ ಸಭೆ, ಗ್ರಾಮಸಭೆಗಳಲ್ಲಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುವ ವಾಗ್ಚತುರರು, ತಾವೆಸಗಿದ ಅವ್ಯವಹಾರ, ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ವಿದ್ಯುತ್ ಅವಘಡದ ಹೆಸರಿನಲ್ಲಿ ದಾಖಲೆಗಳನ್ನೇ ಸುಟ್ಟು ಹಾಕಿದ ಖದೀಮರ ಆಟವನ್ನು ಅರಿತ ಗ್ರಾಮಸ್ಥರಿಗೆ ಅಕ್ರಮ ಕಟ್ಟಡ ದಂಧೆಯ ದರ್ಬಾರು ಹೊಸದೇನಲ್ಲ.
ಆದರೆ ಲಾಯಿಲಾ ಗ್ರಾ.ಪಂ. ವ್ಯಾಪ್ತಿಯ ಸರಕಾರಿ ನಿವೇಶನ ಮಾರಾಟ ದಂಧೆಯನ್ನಾಗಲಿ ಸಾಲು ಸಾಲು ಅಕ್ರಮ ಕಟ್ಟಡಗಳ ಭ್ರಷ್ಟಾಚಾರವನ್ನಾಗಲಿ ತನಿಖೆ ಮಾಡುವ ಧಮ್ಮು , ದಕ್ಷತೆ ಬೆಳ್ತಂಗಡಿ ತಾ. ಪಂ. ಕಾರ್ಯನಿರ್ವಹಣಾಧಿಕಾರಿಗೆ ಇದೆಯೇ ? ಇದ್ದರೆ ಇಷ್ಟೊಂದು ಸರಣಿ ಅಕ್ರಮ ಬೃಹತ್ ಕಟ್ಟಡಗಳು ನಿರಾತಂಕವಾಗಿ ತಲೆ ಎತ್ತಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಗ್ರಾಮಸ್ಥರಿಂದ ಬಲವಾಗಿ ಕೇಳಿ ಬರುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!