ಜ:18ರಿಂದ ಫೆ:1ರವರೆಗೆ ಏಳು ಮಂಡಲಗಳಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ

ಬೆಳ್ತಂಗಡಿ : ಹಿಂದು ಸಂಗಮ ಆಯೋಜನಾ ಸಮಿತಿ, ಬೆಳ್ತಂಗಡಿ ತಾಲೂಕು ಇದರ ಆಯೋಜನೆಯಂತೆ ಜನವರಿ 18ನೇ 2026ರಂದು ಪ್ರಾರಂಭಗೊಂಡು ಫೆಬ್ರವರಿ 1ರವರೆಗೆ ತಾಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ‘ಹಿಂದು ಸಂಗಮ’ ಎಂಬ ಹಿಂದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ‘ಹಿಂದು ಸಂಗಮ’ ಸಂಯೋಜಕ ಅನಿಲ್ ಯು ಹೇಳಿದರು.
ಮಂಗಳವಾರ ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು , ಇದು ಯಾವುದೇ ಒಬ್ಬ ಸಂಘಟನೆ ಅಥವಾ ವ್ಯಕ್ತಿ ಕೇಂದ್ರಿತ ಕಾರ್ಯಕ್ರಮವಲ್ಲ; ಸಮಾಜದೊಳಗಿನ ಶಕ್ತಿಗಳನ್ನು ಒಂದೇ ವೇದಿಕೆಗೆ ತರುವ, ಸಮಾಜವೇ ರೂಪಿಸಿ ಸಮಾಜವೇ ನಡೆಸುವ ಮಹತ್ವದ ಸಾಮಾಜಿಕ ಅಭಿಯಾನವಾಗಿದೆ.
ಇಂದಿನ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವುದು, ಸಾಮಾಜಿಕ ಸಾಮರಸ್ಯಕ್ಕೆ ಸವಾಲುಗಳು ಎದುರಾಗುತ್ತಿರುವುದು,
ಪರಿಸರ ಸಂರಕ್ಷಣೆಯ ಅಗತ್ಯ ತೀವ್ರವಾಗಿರುವುದು ಹಾಗೂ ಸ್ವಾವಲಂಬಿ–ಸ್ವಾಭಿಮಾನಿ ಜೀವನ ಪದ್ಧತಿಯ ಅವಶ್ಯಕತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ‘ಹಿಂದು ಸಂಗಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಕಾರಾತ್ಮಕ ಚಿಂತನೆ ಮತ್ತು ಕ್ರಿಯಾಶೀಲತೆಯನ್ನು ಬೆಳೆಸುವುದೇ ಹಿಂದು ಸಂಗಮ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ.
ಸಾಮಾಜಿಕ ಸೇವೆ, ಸಹಕಾರ, ಸ್ವಾವಲಂಬನೆ ಮತ್ತು ಸೇವಾಭಾವನೆಗಳನ್ನು ಉತ್ತೇಜಿಸುವ ಸಲುವಾಗಿ ಸಮಾಜದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ
ಎಲ್ಲಾ ರೀತಿಯ ಸ್ವಯಂಸೇವಾ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಮುದಾಯದ ಹಿರಿಯರು, ಯುವಕರು ಮತ್ತು ಮಹಿಳೆಯರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದ ಅವರು
ಇದು ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸುವ ಸಮನ್ವಯದ ವೇದಿಕೆಯಾಗಿರಲಿದೆ,
ಹಿಂದು ಸಂಗಮದ ಮೂಲಕ ಕೌಟುಂಬಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯದ ಜಾಗರಣೆ, ಪರಿಸರ ಸಂರಕ್ಷಣೆಯ ಸಂಕಲ್ಪ, ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಜೀವನ ಪದ್ಧತಿ ಮತ್ತು ನಾಗರಿಕ ಕರ್ತವ್ಯಗಳ ಪಾಲನೆ ಎಂಬ ಆದರ್ಶಗಳನ್ನು ಜನಸಾಮಾನ್ಯರ ಬದುಕಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ. ಮಾತುಗಳ ಮಟ್ಟಕ್ಕೆ ಸೀಮಿತವಾಗದೇ, ಪ್ರಾಯೋಗಿಕವಾಗಿ ಸಮಾಜಕ್ಕೆ ದಿಕ್ಕು ತೋರಿಸುವ ಕಾರ್ಯಕ್ರಮಗಳಾಗಿ ಹಿಂದು ಸಂಗಮ ರೂಪುಗೊಂಡಿದೆ.
ಈ ಕಾರ್ಯಕ್ರಮಗಳಿಗಾಗಿ ಕಳೆದ ಕೆಲವು ತಿಂಗಳುಗಳಿಂದ ತಾಲೂಕು ಮಟ್ಟದಲ್ಲಿ ಮಂಡಲ ಮಟ್ಟದಲ್ಲಿ ವ್ಯಾಪಕ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಪ್ರತಿಯೊಂದು ಮಂಡಲದಲ್ಲೂ ಸ್ಥಳೀಯ ಸಮಾಜದ ಬಂಧುಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ತಾಲೂಕು ಆಯೋಜನಾ ಸಮಿತಿಯನ್ನು ಮಂಡಲದಲ್ಲಿ ಮಂಡಲ ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಸಂಘಟನೆಗಳು, ದೈವಸ್ಥಾನ–ದೇವಾಲಯಗಳ ಭಜನಾ ಮಂದಿರಗಳ ಪ್ರಮುಖರು, ಸಾಮಾಜಿಕ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನಾ ಸಭೆಗಳು ನಡೆದಿವೆ.
ಕಾರ್ಯಕ್ರಮಗಳ ಯಶಸ್ಸಿಗಾಗಿ ಸ್ವಯಂಸೇವಕರ ತಂಡಗಳನ್ನು ರೂಪಿಸಲಾಗಿದ್ದು, ಶಿಸ್ತು, ಸಮಯಪಾಲನೆ ಹಾಗೂ ಸಮನ್ವಯಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದರು. ಸಮಾಜದ ಎಲ್ಲಾ ವರ್ಗಗಳಿಗೂ ತಲುಪುವಂತೆ ಆಹ್ವಾನ ಕಾರ್ಯ, ಜಾಗೃತಿ ಅಭಿಯಾನಗಳು, ಪ್ರತಿ ಮಂಡಲಗಳಲ್ಲಿ ಮಾತ್ರ ಸಂಗಮ, ಬೂತ ಬೂತಗಳಲ್ಲಿ ಮನೆ ಮನೆ ಮಹಾ ಸಂಪರ್ಕ ಅಭಿಯಾನ, ಪಟ್ಟಣ ಪ್ರದೇಶಗಳಲ್ಲಿ ಹಿಂದೂ ಸಂಗಮ ಸಂಪರ್ಕ ಯಾತ್ರೆ ಮತ್ತು ವಿವಿಧ ರೀತಿಯಲ್ಲಿ ಸಂಪರ್ಕವನ್ನು ಹೊಂದಿದೆ.
ಹಿಂದು ಸಂಗಮವು ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಸಮಾಜದಲ್ಲಿ ದೀರ್ಘಕಾಲೀನ ಸಕಾರಾತ್ಮಕ ಪರಿಣಾಮ ಬೀರುವ ಚಳವಳಿಯಾಗಿ ರೂಪುಗೊಳ್ಳಬೇಕು ಎಂಬ ದೃಷ್ಟಿಯಿಂದ ಪೂರ್ವಭಾವಿ ತಯಾರಿಗಳು ಸಾಗುತ್ತಿವೆ.
ಈ ಮಹತ್ವದ ಸಾಮಾಜಿಕ ಅಭಿಯಾನಕ್ಕೆ ಬೆಳ್ತಂಗಡಿ ತಾಲೂಕಿನ ಸರ್ವ ಸಮಾಜ ಬಾಂಧವರು, ಸಂಘಟನೆಗಳು ಸಹಕಾರ ನೀಡಬೇಕು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹಿಂದು ಸಂಗಮ ಕಾರ್ಯಕ್ರಮಗಳನ್ನು ಯಶಸ್ವಿಯಾಗೊಳಿಸಬೇಕೆಂದು ಹಿಂದು ಸಂಗಮ ಆಯೋಜನಾ ಸಮಿತಿಯು ಪತ್ರಿಕಾ ಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದೆ.
ಗುರುವಾಯನಕೆರೆ ‘ಸಂಗಮ’ದಲ್ಲಿ ಮಾಣಿಲಶ್ರೀ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿದಿದ್ದಾರೆ. ಹಿಂದೂ ಸಂಗಮ ಆಯೋಜನ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಮಾತನಾಡಿ, ಹಿಂದೂ ಸಂಗಮದ ಯಶಸ್ಸಿಗಾಗಿ ಸ್ವಯಂಸೇವಕರ ತಂಡಗಳನ್ನು ರೂಪಿಸಲಾಗಿದ್ದು, ಶಿಸ್ತು, ಸಮಯಪಾಲನೆ ಹಾಗೂ ಸಮನ್ವಯಕ್ಕೆ ವಿಶೇಷ ಒತ್ತು ನೀಡಲಾಗಿದೆ. ಸಮಾಜದ ಎಲ್ಲ ವರ್ಗಗಳಿಗೂ ತಲುಪುವಂತೆ ಆಹ್ವಾನ ಕಾರ್ಯ, ಜಾಗೃತಿ ಅಭಿಯಾನಗಳು, ಪ್ರತೀ ಮಂಡಲಗಳಲ್ಲಿ ಮಾತೃ ಸಂಗಮ, ಬೂತ್‌ಗಳಲ್ಲಿ ಮನೆ ಸಂಪರ್ಕ ಅಭಿಯಾನ, ಪಟ್ಟಣ ಪ್ರದೇಶಗಳಲ್ಲಿ ಹಿಂದೂ ಸಂಗಮ ಸಂಪರ್ಕ ಯಾತ್ರೆ ಮತ್ತು ವಿವಿಧ ರೀತಿಯಲ್ಲಿ ಸಂಪರ್ಕ ಕಾರ್ಯಗಳು ನಡೆಯುತ್ತಿವೆ ಎಂದರು.
ಜಾತಿ, ಪಕ್ಷ ಎಲ್ಲವನ್ನು ಮೀರಿದ ಎಲ್ಲಾ ಹಿಂದೂ ಬಾಂಧವರು ಹಿಂದೂ ಸಂಗಮ ಎಂಬ ಮಹತ್ವದ ಹಿಂದೂ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಅವರು ಕರೆ ಕೊಟ್ಟರು.
ಪತ್ರಿಕಾ ಗೋಷ್ಠಿಯಲ್ಲಿ ‘ಹಿಂದೂ ಸಂಗಮ ಕಾರ್ಯದರ್ಶಿ ವಸಂತ ಮರಕಡ, ಉಪಾಧ್ಯಕ್ಷೆ ಪ್ರೀತಿ ರಾವ್, ಗುರುವಾಯನಕೆರೆ ಮಂಡಲ ಸಂಯೋಜಕ ಚಿದಾನಂದ ಇಡ್ಯ, ಬಂದಾರು ಮಂಡಲ ಸಂಯೋಜಕ ಉದಯ ಕುಮಾರ್ ಬಿ.ಕೆ., ಮಡಂತ್ಯಾರು ಮಂಡಲ ಸಂಯೋಜಕ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.















Post Comment