ಗೇರುಕಟ್ಟೆ ಸುತ್ತಮುತ್ತ ಕೆರೆ, ಬಾವಿಗಳಲ್ಲಿ ಶವವಾಗಿ ಪತ್ತೆಯಾದವರ ಸಾವುಗಳಿಗೆ ನ್ಯಾಯ ಮರೀಚಿಕೆಯೇ..!?

ಗೇರುಕಟ್ಟೆ ಸುತ್ತಮುತ್ತ ಕೆರೆ, ಬಾವಿಗಳಲ್ಲಿ ಶವವಾಗಿ ಪತ್ತೆಯಾದವರ ಸಾವುಗಳಿಗೆ ನ್ಯಾಯ ಮರೀಚಿಕೆಯೇ..!?

Share

ಬೆಳ್ತಂಗಡಿ : ಗೇರುಕಟ್ಟೆ ಸುತ್ತಮುತ್ತ ಅಂದರೆ ಕಳಿಯ, ನ್ಯಾಯತರ್ಪು ಗ್ರಾಮದಲ್ಲಿ ಕೆಲವು ವರ್ಷಗಳಿಂದ ಕೆರೆ ಮತ್ತು ಬಾವಿಯಲ್ಲಿ ಶವವಾಗಿ ಪತ್ತೆಯಾದ ನಾಲ್ವರು ವ್ಯಕ್ತಿಗಳ ನಿಗೂಢ ಅಸಹಜ ಸಾವುಗಳ ಆರೋಪಿಗಳು ಪತ್ತೆಯಾಗಿಲ್ಲ ಮತ್ತು ನೊಂದ ಕುಟುಂಬಗಳಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ.
ನ್ಯಾಯ ಸಿಗದ , ಆರೋಪಿಗಳೇ ಪತ್ತೆಯಾಗದ ಈ ನಾಲ್ಕು ಗಂಭೀರ ಪ್ರಕರಣಗಳ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆಯೇ ಅಥವಾ ಹಳ್ಳ ಹಿಡಿದಿದೆಯೇ ಎಂಬಿತ್ಯಾದಿ ಕುತೂಹಲ, ಚರ್ಚೆ ಸುಮಂತ್ ಸಾವಿನ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದಿದ್ದು ಸ್ಥಳೀಯರನ್ನು‌ ಕಾಡುತ್ತಿದೆ.


ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಪೇಟೆಯ ಬದಿಯ ಕೆರೆಯಲ್ಲಿ ಮೊದಲನೆಯದಾಗಿ ಒಬ್ಬ ಹಿಂದಿ ಭಾಷಿಕನ ಶವ ಪತ್ತೆಯಾಗಿತ್ತು. ಈತನ ಸಾವಿನ ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ? ಈ ಪ್ರಕರಣದ ಪೊಲೀಸ್ ತನಿಖೆ ಯಾವ ಹಂತದಲ್ಲಿ ಮೂಲೆ ಸೇರಿತೋ ಎಂಬ ಸ್ಥಳೀಯರ ಕುತೂಹಲ, ಸಂಶಯಗಳಿಗೆ ಇಂದಿಗೂ ಉತ್ತರ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಎರಡನೇಯ ಪ್ರಕರಣವಾಗಿ ಕಳೆದ ವರ್ಷ ಸ್ಥಳೀಯ ನಿವಾಸಿ ಕೊಲೆ ಮತ್ತಿತರ ಪ್ರಕರಣಗಳ ಆರೋಪಿ ಫಾರೂಕ್ ಎಂಬಾತನ ಶವ ಇದೇ ಕೆರೆಯಲ್ಲಿ ಪತ್ತೆಯಾಗಿತ್ತು. ಫಾರೂಕ್ ಹಳೆಯ ಪ್ರಕರಣಗಳ ಆರೋಪಿಯಾಗಿದ್ದರೂ ಕೆರೆಯಲ್ಲಿ ಪತ್ತೆಯಾಗಿದ್ದ ಈತನ ಸಾವು ಆತ್ಮಹತ್ಯೆಯೋ ಕೊಲೆಯೋ ಎಂಬುದು ಸ್ಥಳೀಯರ ಪಾಲಿಗೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಮೂರನೇ ಪ್ರಕರಣವಾಗಿ‌ ಕಳೆದ ವರ್ಷ ಆಗಸ್ಟ್ 26ರಂದು ನ್ಯಾಯತರ್ಪು ಗ್ರಾಮದ ಪಲ್ಲಾದೆ ಎಂಬಲ್ಲಿ ಕಣಿಯೂರು ಗ್ರಾಮದ ಕುಂಡಗುರಿ ನಿವಾಸಿ ಕೊರಗು ಎಂಬವರ ಪುತ್ರ ಶ್ರೀಧರ (36) ಎಂಬ ವಿವಾಹಿತ ಯುವಕನ ಮೃತದೇಹ ಕೆರೆಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾಗಿತ್ತು. ‌‌ ಈ ಪ್ರಕರಣದ ಬೆನ್ನಲ್ಲೇ ಶ್ರೀಧರನ ಸಾವು ಆಕಸ್ಮಿಕ ಸಾವಲ್ಲ, ಇದೊಂದು ಪೂರ್ವಯೋಜಿತ ಕೊಲೆ ಎಂದು ಬಲವಾದ ಸಂಶಯ ವ್ಯಕ್ತಪಡಿಸಿ ಸ್ಥಳೀಯ ಕೆಲವರ ಹೆಸರುಗಳನ್ನು ಉಲ್ಲೇಖಿಸಿ ಮೃತನ ಮನೆಯವರು ದ.ಕ.ಎಸ್ಪಿಗೆ ದೂರು ನೀಡಿ ನ್ಯಾಯಕ್ಕಾಗಿ‌ ಕಾಯುತ್ತಿದ್ದಾರೆ. ಎಸ್ಪಿಗೆ ದೂರು ನೀಡಿ ಐದು ತಿಂಗಳುಗಳೇ ಕಳೆದಿದ್ದು ಇದುವರೆಗೂ ಸಾವಿನ ಕಾರಣವೂ ಗೊತ್ತಾಗಿಲ್ಲ, ಮೇಲ್ನೋಟಕ್ಕೆ ಆರೋಪಿಗಳೂ ಪತ್ತೆಯಾಗಿಲ್ಲ. ಶ್ರೀಧರನ ನಿಗೂಢ ಸಾವಿನ ಪ್ರಕರಣದ ತನಿಖೆ ಅಪೂರ್ಣವಾಗಿ ಹಸಿ ಹಸಿಯಾಗಿ ಉಳಿದಿರುವಾಗಲೇ ಇದೀಗ ಜನವರಿ 14- 2026ರಂದು ಓಡಿಲ್ನಾಳ ಗ್ರಾಮದ ಜನವರಿ ಸಂಭೋಳ್ಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಮತ್ತು ರತ್ನ ದಂಪತಿಯ ಪುತ್ರ ಸುಮಂತ್ ನಾಯಕ್ (15) ಧನುಪೂಜೆಗೆ ಹೋದವನು ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಮಂತ್ ನಿಗೂಢ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿಕೊಂಡು ಪೊಲೀಸರು ನಾಲ್ಕು ತಂಡ ರಚಿಸಿ ತನಿಖೆ ನಡೆಸುತ್ತಿದ್ದರೂ ಇದುವರೆಗೂ ಆರೋಪಿಗಳ ಬಗ್ಗೆ ಬಲವಾದ ಯಾವುದೇ ಸುಳಿವು ಇದುವರೆಗೂ ಪತ್ತೆಯಾಗಿಲ್ಲ. ಗೇರುಕಟ್ಟೆ ಆಸುಪಾಸು ಸಂಶಯಾಸ್ಪದವಾಗಿ ಬೆಳಕಿಗೆ ಬಂದ ನಾಲ್ಕು ನಿಗೂಢ ಸಾವುಗಳ ಪ್ರಕರಣಗಳಲ್ಲೂ ಕೆರೆ ಅಥವಾ ಬಾವಿಯಲ್ಲಿ ಶವ ಪತ್ತೆಯಾಗಿದ್ದು ಒಂದೇ ರೀತಿಯಲ್ಲಿ ಪತ್ತೆಯಾದ ಸರಣಿ ಸಾವುಗಳು ಕೊಲೆಯೋ? ಆತ್ಮಹತ್ಯೆಯೋ? ಆಕಸ್ಮಿಕವೋ?
ಈ ಸಾವುಗಳ ಹಿಂದಿನ ನಿಗೂಢತೆಗಳೇನು ? ಎಂಬಿತ್ಯಾದಿ ಪ್ರಶ್ನೆಗಳು ಗ್ರಾಮಸ್ಥರ ಕುತೂಹಲ ಸಂಶಯಗಳಿಗೂ ಕಾರಣವಾಗಿ ನಿದ್ದೆಗೆಡಿಸಿವೆ.


ಫಾರೂಕ್, ಶ್ರೀಧರ, ಸುಮಂತ್ ಸಂಶಯಾಸ್ಪದ ಸಾವುಗಳು ಸೇರಿದಂತೆ ಗೇರುಕಟ್ಟೆ ಸುತ್ತ ಬಾವಿ ಮತ್ತು ಕೆರೆಗಳಲ್ಲಿ ಶವ ಪತ್ತೆಯಾಗುವ ಮೂಲಕ ಬೆಳಕಿಗೆ ಬಂದ ನಾಲ್ಕು ಮಂದಿಯ ನಿಗೂಢ ಸಾವುಗಳ ಪೈಕಿ ಕೆರೆಯಲ್ಲಿ ಶವವಾಗಿ ಪತ್ತೆಯಾದ ಬಾಲಕ ಸುಮಂತ್ ಸಾವಿನ ಪ್ರಕರಣವು ಸೂಕ್ಷ್ಮವಾಗಿ ಮತ್ತು ಭಿನ್ನವಾಗಿದ್ದು ಪೊಲೀಸರು ‘ಕೊಲೆ’ ಎಂದು ಗಂಭೀರವಾಗಿ ಪರಿಗಣಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರೂ ಪೊಲೀಸ್ ತನಿಖಾ ಈ ಕ್ಷಣದವರೆಗೂ ಪ್ರಕರಣದ ಸುತ್ತ ಹಲವಾರು ಪ್ರಶ್ನೆ, ಚರ್ಚೆ, ಕುತೂಹಲ, ಅನುಮಾನಗಳು ಹೆಚ್ಚುತ್ತಲೇ ಇದೆ.

Post Comment

ಟ್ರೆಂಡಿಂಗ್‌

error: Content is protected !!