ಹೋಟೆಲ್ ಕಸದ ಮಧ್ಯೆ ಒಡೆದ ಗಾಜು : ಕರ್ತವ್ಯನಿರತ ಪೌರ ಕಾರ್ಮಿಕನ ಕೈಗೆ ಗಂಭಿರ ಗಾಯ

ಹೋಟೆಲ್ ಕಸದ ಮಧ್ಯೆ ಒಡೆದ ಗಾಜು : ಕರ್ತವ್ಯನಿರತ ಪೌರ ಕಾರ್ಮಿಕನ ಕೈಗೆ ಗಂಭಿರ ಗಾಯ

Share
IMG-20260123-WA0008-1024x576 ಹೋಟೆಲ್ ಕಸದ ಮಧ್ಯೆ ಒಡೆದ ಗಾಜು : ಕರ್ತವ್ಯನಿರತ ಪೌರ ಕಾರ್ಮಿಕನ ಕೈಗೆ ಗಂಭಿರ ಗಾಯ

ಬೆಳ್ತಂಗಡಿ : ಕರ್ತವ್ಯ ನಿರತ ಪೌರ ಕಾರ್ಮಿಕರೋರ್ವರಿಗೆ ನಗರದ ಹೋಟೆಲ್ ಒಂದರ ಮುಂದೆ ರಾಶಿ ಹಾಕಿದ ಹಸಿ ಕಸ ಮತ್ತು ಒಣ ಕಸ ತುಂಬಿಸುವ ವೇಳೆ ಒಡೆದ ಗಾಜಿನ ತುಂಡುಗಳು ಕೊಯ್ದ ಪರಿಣಾಮ ಕೈಗೆ ಗಾಯವಾದ ಘಟನೆ ಶುಕ್ರವಾರ ಬೆಳ್ತಂಗಡಿ ಮಾರಿಗುಡಿ ಬಳಿ ನಡೆದಿದೆ.
ಬೆಳ್ತಂಗಡಿ ಪಟ್ಟಣಪಂಚಾಯತ್ ನ ಪೌರ ಕಾರ್ಮಿಕರೊಬ್ಬರು ಎಂದಿನಂತೆ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದು ಕರ್ತವ್ಯ ನಿರ್ವಹಿಸುತ್ತಾ ಸಹೋದ್ಯೋಗಿಗಳ ಜೊತೆಗೆ ಸಂತೆಕಟ್ಟೆ ಮಾರಿಗುಡಿ ಸಮೀಪದ ಕ್ಷೇತ್ರ ಶಿಕ್ಷಣಾಧಿಕಾರಿಯವರ (ಬಿ.ಇ.ಒ.) ಕಚೇರಿಯ ಮುಂಭಾಗದಲ್ಲಿರುವ ‘ನಿಸರ್ಗ ಗ್ರ್ಯಾಂಡ್’ ಎಂಬ ಸಸ್ಯಾಹಾರಿ ಹೋಟೆಲ್ ನ ಮುಂದೆ ರಾಶಿ ಹಾಕಲಾಗಿದ್ದ ಕಸ ಮತ್ತಿತರ ತ್ಯಾಜ್ಯಗಳನ್ನು ಹೆಕ್ಕಿ ವಾಹನಕ್ಕೆ ತುಂಬಿಸುತ್ತಿದ್ದ ವೇಳೆ ಕೈಗೆ ಹರಿತವಾದ ಗಾಜಿನ ತುಂಡುಗಳು ತಾಗಿ ಗಂಭೀರ ಗಾಯವಾಗಿದೆ.
ಪೌರ ಕಾರ್ಮಿಕರು‌ ದಿನನಿತ್ಯ ಬೆಳಗ್ಗಿನ ಜಾವ ಕರ್ತವ್ಯಕ್ಕೆ ಹಾಜರಾಗಿ ನಗರಪಂಚಾಯತ್ ವ್ಯಾಪ್ತಿಯ ರಸ್ತೆ ಬದಿ , ಜನವಸತಿ ಪರಿಸರ, ಹೋಟೆಲ್, ಬಾರ್ ಎಂಡ್ ರೆಸ್ಟೋರೆಂಟ್ ಮತ್ತಿತರ ವಾಣಿಜ್ಯ ಕಟ್ಟಡಗಳ ಮುಂದೆ ಚೆಲ್ಲಾಪಿಲ್ಲಿ ಎಸೆದು ಹೋದ ರಾಶಿ ರಾಶಿ ಕಸ, ತ್ಯಾಜ್ಯಗಳನ್ನು ತಮ್ಮ ಕೈಗಳಲ್ಲಿ ಹೆಕ್ಕಿ, ಎತ್ತಿ ವಾಹನಕ್ಕೆ ತುಂಬಿಸುತ್ತಾ ಇಡೀ ನಗರವನ್ನು ಶುಚಿಗೊಳಿಸುವ ಕೆಲಸದಲ್ಲಿ ತೊಡಗುವುದು ಸರಕಾರದ ಸಂಬಳಕ್ಕಾದರೂ ತಮ್ಮ ಆರೋಗ್ಯ, ಸುರಕ್ಷತಾ ಕ್ರಮಗಳ ಬಗ್ಗೆ ಚಿಂತಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ,
ಇಂಥ ಪೌರ ಕಾರ್ಮಿಕರ ಸ್ವಚ್ಛತಾ ಕಾರ್ಯಕ್ಕೆ ಹೋಟೆಲ್, ಬಾರ್ ಗಳ ಮಾಲಕರು, ಸಿಬ್ಬಂದಿ ವರ್ಗ ಪೌರ ಕಾರ್ಮಿಕರೊಂದಿಗೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ, ಒಣ-ಹಸಿ ಕಸ, ತ್ಯಾಜ್ಯಗಳನ್ನು ಬೇರ್ಪಡಿಸುವ ಸಂದರ್ಭ ಎಷ್ಟು ಬೇಜವಾಬ್ದಾರಿತನ ತೋರಿಸುತ್ತಾರೆ ಎನ್ನುವುದಕ್ಕೆ ಇದೀಗ ಬೆಳ್ತಂಗಡಿಯಲ್ಲಿ ನಡೆದ ಘಟನೆ ಸಾಕ್ಷಿಯಂತಿದೆ. ಒಡೆದ ಗಾಜಿನಿಂದ ಗಂಭೀರ ಗಾಯಗೊಂಡ ಪೌರ ಕಾರ್ಮಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.
ಘಟನೆಯನ್ನು ಪರಿಶೀಲಿಸಿದ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಪೌರ ಕಾರ್ಮಿಕನ ಹೇಳಿಕೆ ಆಧರಿಸಿ ಹೋಟೆಲ್ ಮಾಲಕನಿಗೆ ದಂಡ ನೋಟೀಸ್ ನೀಡಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!