ಸುಮಂತ್, ಶ್ರೀಧರ ಕೊಲೆ ಪ್ರಕರಣ ತನಿಖೆಗೆ ಒತ್ತಾಯಿಸಿ ಸಿಪಿಐ(ಎಂ)ನೇತೃತ್ವದಲ್ಲಿ ಪ್ರತಿಭಟನೆ

“ಧರ್ಮಸ್ಥಳದ ಅಸಹಜ ಸಾವುಗಳಂತೆ ಸುಮಂತ್, ಶ್ರೀಧರ ಕೊಲೆ ಪ್ರಕರಣಗಳನ್ನು ಮುಚ್ಚಿಹೋಗಲು ಬಿಡುವುದಿಲ್ಲ!”
ಬೆಳ್ತಂಗಡಿ : ತಾಲೂಕಿನಲ್ಲಿ ಜನರ ಜೀವಕ್ಕೆ ರಕ್ಷಣೆಯಿಲ್ಲವಾಗಿದೆ. ಕೊಲೆಗಾರರಿಗೆ ಭಯವಿಲ್ಲದಾಗಿದೆ. ಯಾವುದೇ ಕೊಲೆ ಪ್ರಕರಣಗಳು ನಡೆದರೂ ಆರೋಪಿಗಳು ಪತ್ತೆಯಾಗುತ್ತಿಲ್ಲ ಎಂದು ಸಿಪಿಐಎಂ ಮುಖಂಡ ಬಿಎಂ ಭಟ್ ಹೇಳಿದರು.
ಅವರು ಬುಧವಾರ ಓಡಿಲ್ನಾಳದ ಬಾಲಕ ಸುಮಂತ್ ಹಾಗೂ ಕಣಿಯೂರಿನ ದಲಿತ ಯುವಕ ಶ್ರೀಧರ ಕೊಲೆ ಪ್ರಕರಣಗಳ ತನಿಖೆಗೆ ಆಗ್ರಹಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಿಪಿಐಎಂ ಪಕ್ಷ ಹಾಗೂ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಡೆದ
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಬೆಳ್ತಂಗಡಿ ತಾಲೂಕು ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿ ಮಾರ್ಪಡುತ್ತಿದೆ.
ಕಳಿಯ ಗ್ರಾಮದಲ್ಲಿ ಹಲವು ಅಸಹಜ ಸಾವುಗಳಾಗಿದೆ ಆದರೆ ಒಂದರಲ್ಲಿಯೂ ಆರೋಪಿಗಳು ಪತ್ತೆಯಾಗುತ್ತಿಲ್ಲ.
ಶ್ರೀಧರ ಮುಗೇರನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿ ಆರು ತಿಂಗಳು ಕಳೆದಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೂ ಮನವಿ ನೀಡಿದ್ದರೂ ಪ್ರಕರಣದ ಸಮರ್ಪಕವಾದ ತನಿಖೆ ನಡೆದಿಲ್ಲ.
ಇದೀಗ ಶಾಲಾ ಬಾಲಕ ಸುಮಂತ್ ಕೊಲೆಗಾರರ ಬಗ್ಗೆ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ . ಎರಡೂ ಪ್ರಕರಣಗಳ ತನಿಖೆಯೂ ಸಮರ್ಪಕವಾಗಿ ನಡೆದಿಲ್ಲ ಎಂದು ಅವರು ಆರೋಪಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಸಹಜ ಸಾವುಗಳಂತೆ
ಈ ಪ್ರಕರಣಗಳೂ ಪತ್ತೆಯಾಗದ ಪ್ರಕರಣಗಳಾಗಿ ಮುಗಿದು ಹೋಗಲು ಅವಕಾಶ ನೀಡುವುದಿಲ್ಲ ಈ ತಿಂಗಳ ಕೊನೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಮಾರ್ಚ್ ತಿಂಗಳಲ್ಲಿ ಕೊಂದವರು ಯಾರು ಎಂದು ಪತ್ತೆಯಾಗುವವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ದಲಿತವಹಕ್ಕುಗಳ ಸಮಿತಿಯ ಕಾರ್ಯದರ್ಶಿ ಈಶ್ವರಿ ಶಂಕರ್ ಮಾತನಾಡಿ ಬೆಳ್ತಂಗಡಿ ಪೊಲೀಸರು ಎರಡೂ ಪ್ರಕರಣಗಳ ತನಿಖೆಯನ್ನು ಸಮರ್ಪಕವಾಗಿ ನಡೆಸಿಲ್ಲ ಶ್ರೀಧರ ಪ್ರಕರಣದಲ್ಲಿ ಆರೋಪಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರೂ ಯಾವುದೆ ಕ್ರಮ ಕೈಗೊಳ್ಳಲಾಗಿಲ್ಲ ಇಲ್ಲಿ ನಡೆದಿರುವ ಕೊಲೆಗಳಲ್ಲಿ ಒಂದಕ್ಕೊಂದು ಸಾಮ್ಯತೆಯಿದೆ ಎಲ್ಲ ಮೃತದೇಹಗಳೂ ಕೆರೆಯಲ್ಲಿ ಪತ್ತೆಯಾಗಿದೆ ಒಟ್ಟು ಘಟನೆಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕೊಲೆಗಾರರನ್ನು ಪತ್ತೆಹಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಮನವಿಯನ್ನು ಸಲ್ಲಿಸಿದರು.














Post Comment