ದ.ಕ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶಿಷ್ಟರ ತಾಲೂಕು ಮಟ್ಟದ ಕುಂದು ಕೊರತೆ ಸಭೆ

“ಡಿ.ಸಿ. ಮನ್ನಾ ಭೂಮಿ ಸೈಟ್ ಬೇಡ, 2024ರ ಆದೇಶದಂತೆ ಕೃಷಿಭೂಮಿ ಹಂಚಿಕೆ ಮಾಡಿ” : ದಲಿತ ಮುಖಂಡರ ಒಕ್ಕೊರಲ ಆಗ್ರಹ
ಬೆಳ್ತಂಗಡಿ : 2024ರ ಸರಕಾರದ ಆದೇಶದಂತೆ ತಲಾ
2 ಎಕ್ರೆ ಡಿ.ಸಿ. ಮನ್ನಾ ಭೂಮಿಯನ್ನು ಹಂಚುವಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕೆನ್ನುವುದು ಜಿಲ್ಲೆಯ ಎಲ್ಲಾ
ದಲಿತ ಸಂಘಟನೆಗಳ ಒಕ್ಕೊರಲ ಬೇಡಿಕೆಯಾಗಿದೆ ಎಂದು
ಕರ್ನಾಟಕ ದ.ಸಂ.ಸ.(ಅಂಬೇಡ್ಕರ್ ವಾದ) ವಿಭಾಗೀಯ ಸಂಚಾಲಕ ಬಿ.ಕೆ.ವಸಂತ್ ಒತ್ತಾಯಿಸಿದರು.
ಅವರು ಗುರುವಾರ ಬೆಳ್ತಂಗಡಿ ತಾ.ಪಂ. ನೇತ್ರಾವತಿ ಸಭಾಂಗಣದಲ್ಲಿ ದ.ಕ. ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಾಲೂಕು ಮಟ್ಟದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಡಿ.ಸಿ. ಮನ್ನಾ ಭೂಮಿಯ ಹಂಚಿಕೆಗಾಗಿ ದಲಿತರ ಸಂಘಟನೆಗಳು ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿವೆ. ಇಂದಿಗೂ ಡಿ.ಸಿ. ಮನ್ನಾ ಭೂಮಿ ಮಂಜೂರಾತಿ ಬಾಕಿ ಇದೆ. ಸಾವಿರಾರು ಎಕ್ರೆ ಉಳಿಕೆ ಡಿ.ಸಿ. ಮನ್ನಾ ಭೂಮಿಯನ್ನು ಮತ್ತು ಆಕ್ರಮಿತ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ದಲಿತರಿಗೆ ಮಂಜೂರಾತಿಗೊಳಿಸಬೇಕು ಎಂಬ ಕೂಗು 25 ವರ್ಷಗಳಿಂದಲೂ ಇದೆ, ಡಿ.ಸಿ. ಮನ್ನಾ ಭೂಮಿಗಾಗಿ 2017ರಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು. ಸನ್ಮಾನ್ಯ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿ ಜಿಲ್ಲೆಗೆ ಬಂದಾಗ ಎಲ್ಲಾ ದಲಿತ ಸಂಘಟನೆಗಳ ಒತ್ತಾಯದ ಮೇರೆಗೆ ಡಿ.ಸಿ. ಮನ್ನಾ ಭೂಮಿಯನ್ನು ದಲಿತರಿಗೆ ಹಂಚುವ ಉದ್ದೇಶದಿಂದ ಟಾಸ್ಕ್ ಫೋರ್ಸ್ ರಚಿಸಿದ್ದರು.
ಬಳಿಕ ಕೃಷ್ಣಭೈರೇ ಗೌಡ ಅವರು ಕಂದಾಯ ಸಚಿವರಾಗಿದ್ದಾಗ ದಲಿತರಿಗೆ ಎರಡು ಎಕ್ರೆಯಂತೆ ಡಿ.ಸಿ. ಮನ್ನಾ ಭೂಮಿಯನ್ನು ಹಂಚುವ ಯೋಜನೆ ರೂಪಿಸಿ ಈ ಬಗ್ಗೆ 2024ರಲ್ಲಿ ಆದೇಶ ಹೊರಡಿಸಿ ಡಿ.ಸಿ. ಮನ್ನಾ ಭೂಮಿ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಸರಕಾರದ ಇದೇ ಆದೇಶದಂತೆ ಉಡುಪಿ ಜಿಲ್ಲೆಯಲ್ಲಿ ಅರ್ಜಿಗಳನ್ನು ಕರೆದು ಕಡತ ತಯಾರಿಸಿ ಭೂಮಿ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ ಆದೇಶದಂತೆ ನಮ್ಮ ಜಿಲ್ಲೆಯಲ್ಲಿ ಇದುವರೆಗೂ ಒಂದು ಸೆಂಟ್ಸ್ ಡಿ.ಸಿ. ಮನ್ನಾ ಭೂಮಿಯನ್ನೂ ದಲಿತರಿಗೆ ಹಂಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ ದಲಿತರಿಗಾಗಿ ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯನ್ನು ತಲಾ ಎರಡು ಎಕ್ರೆಯಂತೆ ಹಾಗೂ ನಗರ ಪ್ರದೇಶದಲ್ಲಿ ಸೈಟ್ ಕೂಡಲೇ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು.

ಈ ಸಂದರ್ಭ ಧ್ವನಿಗೂಡಿಸಿದ ದಲಿತ ಮುಖಂಡ ಸಂಜೀವ ಆರ್ ನಾವು ಡಿ.ಸಿ. ಮನ್ನಾ ಭೂಮಿಯನ್ನು ಕೇಳುತ್ತಿರುವುದು ಹಸಿವಿಗಾಗಿ, ನಮ್ಮಲ್ಲಿ ಹಣ, ಆಸ್ತಿ, ಜಮೀನು ಯಾವುದೂ ಇಲ್ಲ, ಒಳ್ಳೆಯ ಬಟ್ಟೆ ಧರಿಸುತ್ತೇವೆ ಇದು ನಮಗೆ ಅಂಬೇಡ್ಕರ್ ಕಲಿಸಿದ್ದು ಆದರೆ ನಮಲ್ಲಿ ಕೃಷಿಭೂಮಿ ಇಲ್ಲ, ನಮಗೆ ಸ್ವಾಭಿಮಾನ ಮತ್ತು ಸ್ವಾಭಿಮಾನದಿಂದ ಬದುಕಲು ಕೃಷಿ ಯೋಗ್ಯ ಜಮೀನು ಬೇಕಾಗಿದೆ, ಇದು ನಮ್ಮೆಲ್ಲರ ಆಗ್ರಹವಾಗಿದೆ ಎಂದರು.
ಹಿಂದೆ ಸುಭೋದ್ಯದವ್ದ. ಕ.ಜಿಲ್ಲಾಧಿಕಾರಿಗಳಾಗಿರುವಾಗ ದಲಿತರ ಮೇಲಿನ ಕಾಳಜಿಯಿಂದ ಡಿ.ಸಿ. ಮನ್ನಾ ಭೂಮಿ ಹಂಚಿಕೆಯ ಬಗ್ಗೆ ಉತ್ತಮ ಯೋಜನೆ ರೂಪಿಸುವ ಪ್ರಕ್ರಿಯೆ ಆರಂಭಿಸಿದ್ದರು. ಅಂಥ ದಕ್ಷ ಜಿಲ್ಲಾಧಿಕಾರಿಗಳನ್ನು ಹೆಚ್ಚು ಕಾಲ ಜಿಲ್ಲೆಯಲ್ಲಿ ಇರಲು ಬಿಡಲಿಲ್ಲ. ಅವರ ದಿಡೀರ್ ವರ್ಗಾವಣೆ ನಮಗೆ ತುಂಬಾ ಬೇಸರವಾಗಿದೆ, ಸುಭೋದ್ ಯಾದವ್ ಅವರು ಹೋದ ಬಳಿಕ ಅವರ ಸ್ಥಾನ ತುಂಬುವ ಜಿಲ್ಲಾಧಿಕಾರಿಗಳು ಇದುವರೆಗೂ ಬಂದಿಲ್ಲ, ಈಗ ತಾವು ಜಿಲ್ಲಾಧಿಕಾರಿಗಳಾಗಿ ಬಂದಿದ್ದೀರಿ ದಲಿತರ ಪ್ರಮುಖ ಬೇಡಿಕೆಯಾದ ಡಿ.ಸಿ. ಮನ್ನಾ ಭೂಮಿಯ ಹಂಚಿಕೆ ಬಗೆಗಿನ ಗೊಂದಲಕ್ಕೆ ದಯವಿಟ್ಟು ಶೀಘ್ರವಾಗಿ ತಾರ್ಕಿಕ ಅಂತ್ಯ ಕೊಡಿ ಎಂದು ಕೈಮುಗಿದು ಕೇಳಿ ವಿನಂತಿಸಿಕೊಂಡರು.
ಈ ಸಂದರ್ಭ ಧ್ವನಿಗೂಡಿಸಿದ ಜಿ.ಪಂ. ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಅವರು ಡಿ.ಸಿ. ಮನ್ನಾಭೂಮಿ ಹಂಚಿಕೆ ವಿಚಾರ ಪ್ರಸ್ತಾಪಿಸುತ್ತಾ ಇತರರಿಗೆ ಅಕ್ರಮ ಸಕ್ರಮ ಮತ್ತಿತರ ಭೂಮಂಜೂರಾತಿ ಮಾಡುವಾಗ ಕೇಳಿದಷ್ಟು ಜಮೀನು ಮಂಜೂರಾಗುತ್ತದೆ, ದಲಿತರು ಭೂಮಿ ಕೇಳಿದ್ರೆ ತಾವು ಸೈಟ್ ಹಂಚಿಕೆ ಅಂತ ಮಾತನಾಡುವುದು ತಪ್ಪು, ಹಾಗಾದರೆ ಅವರಿಗೂ ಸೈಟ್ ಕೊಡಿ ಬೇರೆಯವರಿಗೆ ಇಲ್ಲದ ಕಾನೂನು ಅಥವಾ ತಾಂತ್ರಿಕ ತೊಡಕು ದಲಿತರಿಗೆ ಯಾಕೆ ಬರುತ್ತಿದೆ ಎಂದು ಪ್ರಶ್ನಿಸಿದರು. ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ಆದೇಶ ಪಾಲನೆಯಾಗುತ್ತಿಲ್ಲ ಇದರಿಂದ ದಲಿತರು ನೇಮಕಾತಿಯಿಂದ ವಂಚಿತರಾಗುತ್ತಿದ್ದಾರೆ , ಎಂದು ಅಂಕಿ ಅಂಶಗಳ ಸಹಿತ ಜಿಲ್ಲಾಧಿಕಾರಿಗಳ ಗಮನ ಸೆಳೆದು ವಿವರಿಸುತ್ತಾ ಸರಕಾರದ ಆದೇಶದಂತೆ ಮೀಸಲಾತಿ ಅನುಷ್ಠಾನಕ್ಕೆ ಕೂಡಲೇ ಕೈಗೊಳ್ಳಬೇಕು ಎಂದು ಶೇಖರ್ ಕುಕ್ಕೇಡಿ ಒತ್ತಾಯಿಸಿದರು.
ನ್ಯಾಯತರ್ಪು ಗ್ರಾಮದ ನಾಳ ಎಂಬಲ್ಲಿ ದಲಿತ ಕುಟುಂಬಗಳ ಸಾರ್ವಜನಿಕ ದಾರಿಗೆ ಅಂಗನವಾಡಿ ಸಮಿತಿಯವರು ಅಡ್ಡಿಪಡಿಸುತ್ತಿದ್ದು ಸಿ.ಡಿ.ಪಿ.ಒ ಅವರು
ತಹಶೀಲ್ದಾರ್ ಅವರ ಆದೇಶವನ್ನು ಕಡೆಗಣಿಸಿ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ನಮಗೆ ಕೂಡಲೇ ದಾರಿಯನ್ನು ತೆರವು ಮಾಡಿಕೊಡಬೇಕೆಂದು ನೊಂದ ಪರಿಶಿಷ್ಟ ಜಾತಿ ದೂರುದಾರ ಚಂದ್ರಶೇಖರ್ ನಾಳ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಸಭೆಯಲ್ಲಿ ದಲಿತ ಮುಖಂಡರು ಮುಂದಿಟ್ಟ ಡಿ.ಸಿ. ಮನ್ನಾ ಭೂಮಂಜೂರಾತಿ, ಖಾಸಗಿ ಕ್ಷೇತ್ರದ ಮೀಸಲಾತಿ,
ಹೊರಗುತ್ತಿಗೆ ನೇಮಕಾತಿ, ಮುಂತಾದ ಸಾಮುದಾಯಿಕ ಬೇಡಿಕೆಗಳ ಬಗ್ಗೆ ಜಿಲ್ಲಾ ಕೆ.ಡಿ.ಪಿ. ಸದಸ್ಯ ಸಂತೋಷ್ ಕುಮಾರ್ , ಜಿ.ಪಂ. ಮಾಜಿ ಸದಸ್ಯೆ ಸಿ.ಕೆ.ಚಂದ್ರಕಲಾ,
ತಾಲೂಕು ಕೆ.ಡಿ.ಪಿ. ಸದಸ್ಯ ಎಸ್. ಬೇಬಿ ಸುವರ್ಣ. ಬುದ್ಧ ಬಸವ ವಚನ ಟ್ರಸ್ಟ್ ಅಧ್ಯಕ್ಷ ಚೆನ್ನಕೇಶವ , ನಲ್ಕೆ ಸಮುದಾಯ ಸೇವಾ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ, ಸೇಸಪ್ಪ ನಲ್ಕೆ, ಕರ್ನಾಟಕ ದ.ಸಂ.ಸ.(ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್, ದ.ಸಂ.ಸ. ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಮುಖಂಡ ಪಿ.ಕೆ. ರಾಜು ಪಡಂಗಡಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ವೆಂಕಣ್ಣ ಕೊಯ್ಯೂರು, ಕೆ.ನೇಮಿರಾಜ್, ಲಕ್ಷ್ಮಣ ಜಿ.ಎಸ್., ಬಿ.ಎಸ್.ಪಿ. ಜಿಲ್ಲಾ ಮುಖಂಡ ಶಿವಪ್ಪ ಗರ್ಡಾಡಿ, ತಾಲೂಕು ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್, ಮಾಜಿ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಈಶ್ವರಿ ಶಂಕರ್ , ಪುಷ್ಪರಾಜ್ ಎಂ.ಕೆ., ವಿಜಯ ಬಜಿರೆ, ಆಯಾ ಪ್ರತ್ಯೇಕ ಪ್ರಮುಖ ಸಮಸ್ಯೆಗಳನ್ನು ವಿವರಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭ ಪರಿಶಿಷ್ಟರ ಕುಂದು ಕೊರತೆ ಸಭೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಪ್ರಮುಖ ಬೇಡಿಕೆ, ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಂದ ವರದಿ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಭರವಸೆ ನೀಡಿದರು.
ಡಿಎಸ್ ಪಿ ರೋಹಿನಿ, ಐಟಿಡಿಪಿ ಅಧಿಕಾರಿ ಬಸವರಾಜ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಧನಂಜಯ ಹಾಗೂ
ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.















Post Comment