ಮಂಗಳೂರು ಸಂಪುಟ ಸಭೆಯಲ್ಲಿ ಸೀಎಂ ಡಿಕೆಶಿ ಊದಿದರು ತುಳುನಾಡ ಕೊಂಬು; ದ.ಕ. ದಲಿತರಿಗೆ ಬೃಹತ್ ಚೊಂಬು!

ಮಂಗಳೂರು : ಕರಾವಳಿಗೆ ಬಂತು ಕರ್ನಾಟಕ ಸರ್ಕಾರ ಎಂಬ ಉದ್ಘೋಷದೊಂದಿಗೆ ನಡೆದ ಮಂಗಳೂರು
ವಿಶೇಷ ಸಚಿವ ಸಂಪುಟದ ಸಭೆಯ ಮೇಲಿದ್ದ ದಲಿತರ ಬಹು ನಿರೀಕ್ಷಿತ ಬೇಡಿಕೆಗಳು ಈಡೇರದೆ, ಅಥವಾ ಈ ಬಗ್ಗೆ ಯಾವುದೇ ಅನುದಾನಗಳು ಘೋಷಣೆಯಾಗದೆ ಈಡೇರದಿರುವುದು ದಲಿತ ಸಂಘಟನೆಗಳಲ್ಲಿ ವ್ಯಾಪಕ ಚರ್ಚೆಗೂ ದಲಿತ ನಾಯಕರ ಆಕ್ರೋಶಕ್ಕೂ ಕಾರಣವಾಗಿದೆ.
ಮಂಗಳೂರು ವಿಶೇಷ ಸಚಿವ ಸಂಪುಟ ಸಭೆಯಲ್ಲಿ ದ.ಕ. (ಕರಾವಳಿ) ಜಿಲ್ಲೆಯ ಜನರ ಹಲವಾರು ವರ್ಷಗಳ ಪ್ರಮುಖ ಭಾವನಾತ್ಮಕ ಬೇಡಿಕೆಯಾಗಿದ್ದ ತುಳುವಿಗೆ ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷಾ ಮಾನ್ಯತೆ ಘೋಷಣೆಯಾಗಿರುವುದು ಅಭಿನಂದನಾರ್ಹವಾಗಿದೆ. ಜೊತೆಗೆ ಜಿಲ್ಲೆಯ ಪ್ರಮುಖ ಮಠ, ಮಂದಿರಗಳಿಗೆ ತಲಾ ಒಂದು ಕೋಟಿ ಅನುದಾನ ಘೋಷಿಸಲ್ಪಟ್ಟಿದೆ..! ಅದರೆ ದಲಿತರ ನೂರಾರು ವರ್ಷಗಳ ಪ್ರಮುಖ ಬೇಡಿಕೆಯಾದ ಬಹು ನಿರೀಕ್ಷಿತ ಡಿ.ಸಿ. ಮನ್ನಾ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದಿರುವುದು ಅಥವಾ ಘೋಷಣೆಯಾಗದಿರುವುದು ದಲಿತರಲ್ಲಿ ನಿರಾಶೆ ಮೂಡಿಸಿದ್ದು ದಲಿತ ನಾಯಕರ ಆಕ್ರೋಶಕ್ಕೂ ಕಾರಣವಾಗಿದೆ.

ಎರಡು ತಿಂಗಳುಗಳ ಹಿಂದೆ ಹಲವು ವರ್ಷಗಳ ಕನಸಾಗಿರುವ ಡಿ.ಸಿ.ಮನ್ನಾ ಭೂಮಿ ಹಂಚಿಕೆಯ ಸಾಧಕ-ಬಾಧಕಗಳ ಕುರಿತು ದ.ಕ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸರಣಿ ಸಭೆಗಳಲ್ಲಿ
ಮಹತ್ವದ ಚರ್ಚೆ ನಡೆಸಲಾಗಿದ್ದು ದಲಿತರ ಈ ಪ್ರಮುಖ ಬೇಡಿಕೆಗೆ ತಾರ್ಕಿಕ ಮತ್ತು ಸುಖಾಂತ್ಯ ನೀಡಲು ಚಿಂತನೆ ನಡೆದಿತ್ತು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ದಲಿತರ ಪ್ರಮುಖ ಬೇಡಿಕೆಯಾಗಿರುವ ಬೆಳ್ತಂಗಡಿಯ ಉದ್ದೇಶಿತ ಬೃಹತ್ ಅಂಬೇಡ್ಕರ್ ಭವನಕ್ಕೂ ಹೆಚ್ಚುವರಿ ಅನುದಾನ ಘೋಷಣೆಯಾಗಿಲ್ಲ, ಇನ್ನೊಂದೆಡೆ ಆದಿದ್ರಾವಿಡ ಸಮುದಾಯದ ಆರಾಧ್ಯ ಮೂಲ ಕ್ಷೇತ್ರವಾದ ಅಲೇರಿ ದೇವಸ್ಥಾನಕ್ಕೆ ಯಾವುದೇ ಅನುದಾನವನ್ನೂ ಮೀಸಲಿಡದಿರುವುದು ಈ ಸಮುದಾಯದ ನಾಯಕರಲ್ಲಿ ನಿರಾಶೆ ಮೂಡಿಸಿದೆ.
ಮಂಗಳೂರು ಸಚಿವ ಸಂಪುಟ ಸಭೆಯ ಪೂರ್ವದಲ್ಲಿ ಜಿಲ್ಲೆಯ ರಾಜಕಾರಣಿಗಳು ಭರವಸೆ ನೀಡಿದ್ದರೂ
ಈ ಪ್ರಮುಖ ಬೇಡಿಕೆಗಳು ಈಡೇರದಿರುವುದು ದಲಿತ ಸಂಘಟನೆಗಳ ನಾಯಕರಲ್ಲಿ ವಿಶೇಷವಾಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಮೋರ್ಚಾದಲ್ಲಿ ವಿವಿಧ ಹುದ್ದೆಗಳಲ್ಲಿರುವ ದಲಿತ ನಾಯಕರಲ್ಲಿ ಅಸಮಾಧಾನ ಮೂಡಿಸಿದ್ದು ಉಸ್ತುವಾರಿ ಸಚಿವರ ದಲಿತ ವಿರೋಧಿ ನೀತಿಯೇ ಈ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.
ಈ ಬೆಳವಣಿಗೆಯಿಂದ ಬೇಸತ್ತ ದಲಿತ ನಾಯಕರು
ಪಕ್ಷದಲ್ಲಿರುವ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜಿನಾಮೆ ನೀಡುವ ಬಗ್ಗೆ ನಿರ್ಧರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ದಲಿತರ ಪ್ರಮುಖ ಬೇಡಿಕೆಗಳು ಈ ಹಿಂದೆ ಸತತವಾಗಿ ಭರವಸೆಗಳನ್ನು ನೀಡಲಾಗಿದ್ದರೂ ಮೂಲೆಗುಂಪಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದಲಿತ ಸಂಘಟನೆಗಳಿಂದ ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು ದಲಿತ ನಾಯಕರ ಇದೇ ನಿರ್ಧಾರ ಅಂತಿಮವಾದರೆ ದಲಿತ ಸಂಘಟನೆಗಳ ಈ ಹಿಂದೆಯೇ ಪತ್ರಿಕಾ ಗೋಷ್ಠಿಗಳಲ್ಲಿ
ಎಚ್ಚರಿಕೆ ಕೊಟ್ಟಿರುವಂತೆ ದಲಿತ ಸಂಘಟನೆಗಳ
ಹೋರಾಟ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರನ್ನೊಳಗೊಂಡು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸುವ ಸಾಧ್ಯತೆಗಳು ಕಂಡು ಬರುತ್ತಿದೆ. ಮಂಗಳೂರು ಸಚಿವ ಸಂಪುಟ ಸಭೆಯು “ದಲಿತರಿಗೆ ಕೊಟ್ಟಿದ್ದು ಬೃಹತ್ ಚೊಂಬು” ಮಾತ್ರ ಎಂಬ
ಆಕ್ರೋಶದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗುತ್ತಿದೆ. ಈ ಮಧ್ಯೆ ಆದಿವಾಸಿಗಳ ಪ್ರಮುಖ ಬೇಡಿಕೆಗಳೂ ನಿರ್ಲಕ್ಷ್ಯಕ್ಕೊಳಗಾಗಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ. ದಲಿತ ನಾಯಕರ ಇದೇ ಆಕ್ರೋಶ ಪ್ರತಿಭಟನೆಯಾಗಿ ಪರಿವರ್ತನೆಯಾದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಚರ್ಚೆಯಾಗಯತ್ತಿದೆ.














Post Comment