ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ

ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ

Share
IMG-20260928-WA0010-1024x266 ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ

ಬೆಳ್ತಂಗಡಿ : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ಪ್ರಕರಣಗಳಲ್ಲಿ ರಾಜಿ ಪಂಚಾಯತಿಕೆ ನಡೆಸಲು ಪೊಲೀಸ್ ಠಾಣೆಗಳಲ್ಲಿ ಒತ್ತಡ ಹೇರಲಾಗುತ್ತಿದೆ. ಇದರಿಂದ ದೌರ್ಜನ್ಯಕ್ಕೊಳಗಾದವರು ಮಾನಸಿಕವಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ಮುಖಂಡ ಕೇಶವ ಆರೋಪಿಸಿದರು.

ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ
ಸೆ.27 ರಂದು ಭಾನುವಾರ ಡಿವೈಎಸ್ಪಿ ಸಿ.ಕೆ. ರೋಹಿಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಭೆಯಲ್ಲಿ ಮಾತನಾಡಿದ ಅವರು ಪರಿಶಿಷ್ಟರ ಮೇಲಿನ‌ ದೌರ್ಜನ್ಯ ಪ್ರಕರಣಗಳಲ್ಲಿ ನಡೆಯುತ್ತಿರುವ ಪೊಲೀಸ್ ಕರ್ತವ್ಯಲೋಪಗಳ ಬಗ್ಗೆ ಪ್ರಸ್ತಾಪಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

IMG-20260615-WA0021-33 ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ಮನೆಗೆ ನುಗ್ಗಿ ಆಸ್ತಿಪಾಸ್ತಿ ಧ್ವಂಸ ಮಾಡಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರು ರಾಜಿ ಪಂಚಾಯತಿಕೆಗೆ ಪ್ರಯತ್ನಿಸಿದ್ದರು. ಬಳಿಕ ಘಟನೆಯ ವಿಡಿಯೋ ಪರಿಶೀಲಿಸಿದ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕೇಶವ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಸಿ.ಕೆ. ರೋಹಿಣಿ, ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು. ಪೊಲೀಸ್ ಠಾಣೆಗಳಲ್ಲಿ ಎಲ್ಲಾ ರೀತಿಯ ಪ್ರಕರಣಗಳನ್ನು ದಾಖಲಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮನೆಗೆ ಹಾನಿಯಾಗುವ ಕಾಮಗಾರಿ ಆರೋಪ: ಲಾಯಿಲ ಗ್ರಾಮದ ಮಮತಾ ಅವರು ಮಾತನಾಡಿ, ಹಲವು ವರ್ಷಗಳಿಂದ ವಾಸಿಸುತ್ತಿರುವ ತಮ್ಮ ಮನೆಗೆ ಹಾನಿಯಾಗುವ ರೀತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಕಾಮಗಾರಿ ನಡೆಸುತ್ತಿದೆ ಆರೋಪಿಸಿದರು.

ಈ ಕುರಿತು ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ತಡೆಗೋಡೆ ಕಾಮಗಾರಿಯನ್ನು ಸಂಪೂರ್ಣಗೊಳಿಸುವಂತೆ ಆಡಳಿತ ಮಂಡಳಿಗೆ ಸೂಚಿಸಲು ಬೆಳ್ತಂಗಡಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆನಂದ್ ಅವರಿಗೆ ನಿರ್ದೇಶನ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟರ ಹಕ್ಕು- ಕಾನೂನು ಹಕ್ಕುಗಳ ಬಗ್ಗೆ ಮಾಹಿತಿ ಶಿಬಿರ ಆಯೋಜಿಸಲು‌ ಸಲಹೆ ಮಡಂತ್ಯಾರು ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಮಾತನಾಡಿ, ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಕ್ಕುಗಳು ಹಾಗೂ ಕಾನೂನುಗಳ ಕುರಿತು ಮಾಹಿತಿ ಶಿಬಿರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಡಿವೈಎಸ್ಪಿ ತಿಳಿಸಿದರು.

ಸಮುದಾಯ ಭವನ ಧ್ವಂಸಕ್ಕೆ ಆಕ್ಷೇಪ: ವೇಣೂರಿನಲ್ಲಿ
1955ರಲ್ಲಿ ನಿರ್ಮಿಸಲಾಗಿದ್ದ ಸಮುದಾಯ ಭವನವನ್ನು ಯಾವುದೇ ಇಲಾಖೆಯ ಪೂರ್ವಾನುಮತಿ ಇಲ್ಲದೆ ಗ್ರಾಮ ಪಂಚಾಯತ್ ಆಡಳಿತ ಧ್ವಂಸ ಮಾಡಿದೆ ಎಂದು ಶೇಖರ್ ಲಾಯಿಲ ಆರೋಪಿಸಿದರು. ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಪಂಚಾಯತ್ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಮಾತನಾಡಿ, ವೇಣೂರು ಸಮುದಾಯ ಭವನದ ಧ್ವಂಸಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್‌ನಿಂದ ಕೆಲವು ದಾಖಲೆಗಳನ್ನು ಕೇಳಲಾಗಿದೆ. ದಾಖಲೆಗಳು ದೊರೆತ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಆಸ್ತಿಗಳನ್ನು ಬೇಕಾಬಿಟ್ಟಿಯಾಗಿ ಧ್ವಂಸ ಮಾಡಲು ಅವಕಾಶವಿಲ್ಲ. ಸಮಾಜ ಕಲ್ಯಾಣ ಇಲಾಖೆ ದೂರು ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಸಿ.ಕೆ. ರೋಹಿಣಿ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಟುಂಬಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳು ದೊರೆಯದಿರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಅಭಿವೃದ್ಧಿಗಾಗಿ ಸರ್ಕಾರಗಳು ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದರೂ ಹಲವು ವರ್ಷಗಳ ಬಳಿಕವೂ ಮೂಲಭೂತ ಸೌಕರ್ಯಗಳಿಗಾಗಿ ಜನರು ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಮೂಲಭೂತ ಸೌಕರ್ಯಗಳ ಕೊರತೆಯಿರುವ ಕುಟುಂಬಗಳ ಸಮಸ್ಯೆಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಿದರೆ ಸೂಕ್ತ ಪರಿಹಾರ ದೊರೆಯಲಿದೆ ಎಂದು ಡಿವೈಎಸ್ಪಿ ತಿಳಿಸಿದರು.

IMG-20260921-WA0003-11-1024x1024 ಬೆಳ್ತಂಗಡಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಪರಿಶಿಷ್ಟರ ಕುಂದು ಕೊರತೆ ಸಭೆ

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ, ವಾರ್ಡನ್ ಬಸವರಾಜ್, ಉಪ್ಪಿನಂಗಡಿ ಇನ್ಸ್‌ಪೆಕ್ಟರ್ ನಾಗರಾಜ್ ಎಚ್.ಇ., ಬೆಳ್ತಂಗಡಿ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎಂ., ವೇಣೂರು ಸಬ್‌ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ಧರ್ಮಸ್ಥಳ ಸಬ್‌ಇನ್ಸ್‌ಪೆಕ್ಟರ್ ಸಮರ್ಥ ಆರ್. ಗಾಣಿಗೇರ, ಬೆಳ್ತಂಗಡಿ ಸಂಚಾರಿ ಸಬ್‌ಇನ್ಸ್‌ಪೆಕ್ಟರ್ ಕಿಶೋರ್.ಪಿ ಮತ್ತು ನಿಂಗಪ್ಪ ಡಿ. ಜಕ್ಕಣ್ಣನವರ್, ಡಿವೈಎಸ್ಪಿ ಕಚೇರಿ ಸಿಬ್ಬಂದಿ ಮನೋಹರ್ ಪಿ.ಸಿ, ಪ್ರವೀಣ್ ಎಂ, ಧರೇಶ್ ಹಾಗೂ ಅಭಿಜಿತ್ ನಾಯ್ಕ್ ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!