ನಾವೂರು’ಆರೋಗ್ಯ ಕ್ಲಿನಿಕ್’ ಗೆಬೆಂಕಿಹಚ್ಚಿದ ಪ್ರಕರಣ:

ಸ್ಥಳೀಯ ರಾಜಕೀಯ ‘ಬೆಂಕಿ’ಯಿಂದ ಬಾಣಲೆಗೆ..!
ಬೆಳ್ತಂಗಡಿ : ನಾವೂರು ಗ್ರಾಮವನ್ನೇ ಬೆಚ್ಚಿ ಬೀಳಿಸಿದ ತೀವ್ರ ಕುತೂಹಲ, ಸಂಶಯಗಳಿಗೆ ಕಾರಣವಾದ ನಾವೂರು ಆರೋಗ್ಯ ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಮೂರು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಬೆಳ್ತಂಗಡಿ ತಾಲೂಕು ನಡ ಗ್ರಾಮ ನಿವಾಸಿ ಡಾ.ಪ್ರದೀಪ
ಎ (51) ಎಂಬವರು ಬೆಳ್ತಂಗಡಿ ನಾವೂರ ಎಂಬಲ್ಲಿ ನಡೆಸುತ್ತಿದ್ದ ಆರೋಗ್ಯ ಕ್ಲಿನಿಕ್ ಗೆ ಅಕ್ಟೋಬರ್ 6-2026ರಂದು ರಾತ್ರಿ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಔಷಧಿ ಹಾಗೂ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಅಂದಾಜು ಮೌಲ್ಯ 2ರಿಂದ 3ಲಕ್ಷ ರೂಪಾಯಿಯ ಸೊತ್ತುಗಳು ಸುಟ್ಟುಹೋದ ಘಟನೆ ಬೆಳಕಿಗೆ ಬಂದಿತ್ತು.
ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣಾ ಅ ಕ್ರ 112/2026 ಕಲಂ: 326(f), 326(G), 324(5) ಬಿಎನ್ಎಸ್ 2023ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಪೊಲೀಸರು ಆರೋಪಿಗಳಾದ ಬೆಳ್ತಂಗಡಿ ನಾವೂರು ನಿವಾಸಿಗಳಾದ ರವಿ ಕುಮಾರ್ ಪ್ರಾಯ (31), ಸುರೇಶ್ ಪಿ.ಎನ್ (44) ಮತ್ತು ದಿನೇಶ್ ಪ್ರಭು (51) ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಮಾನ್ಯ ನ್ಯಾಯಲಯಕ್ಕೆ ಹಾಜರುಪಡಿಸಲಿದ್ದಾರೆ.

ದೇವಸ್ಥಾನ ಅಧಿಕಾರಕ್ಕಾಗಿ ಪ್ರತೀಕಾರ?!
ನಾವೂರು ಬೆಂಕಿ ಘಟನೆಯ ಬೆನ್ನಲ್ಲೇ ಒಂದು ಸಮುದಾಯಕ್ಕೆ ಸೇರಿದ ವ್ಯಕ್ತಿಗಳೇ ಕೃತ್ಯವೆಸಗಿದ್ದಾರೆಂದು ಸ್ಥಳೀಯವಾಗಿ ಅನುಮಾನಿಸಲಾಗಿತ್ತು, ಇದೀಗ ಆರೋಪಿಗಳು ಸಿಕ್ಕಿ ಬಿದ್ದಿದ್ದು ಶಂಕಿಸಿದವರ ಅನುಮಾನಿಬ ಸುಳ್ಳಾಯಿತು, ಆದರೆ ಆರೋಪಿಗಳು ಪತ್ತೆಯಾದ ಬೆನ್ನಲ್ಲೆ
ಘಟನೆಯ ರಾಜಕೀಯ ಲಾಭವಾಗಿ ಪರಿವರ್ತಿಸಿಕೊಳ್ಳಲು ಹುನ್ನಾರ ನಡೆಸಿದ್ದ ಸ್ಥಳೀಯ ಗುಂಪಿಗೆ ನಿರಾಶೆಯೂ ಅಚ್ಚರಿಯೂ ಏಕ ಕಾಲದಲ್ಲಿ ಆಯಿತು. ಏಕೆಂದರೆ ಆರೋಪಿಗಳು ಅವರ ನಿರೀಕ್ಷಿಸಿದ ಸಮುದಾಯದವರಾಗಿರಲಿಲ್ಲ!

ಸ್ಥಳೀಯ ದೇವಸ್ಥಾನದಲ್ಲಿ ಕೆಲವು ಸಮಯಗಳಿಂದ ಬೂದಿ ಮುಚ್ಚಿದ ಕೆಂಡದಂತಿರುವ ಕ್ಷುಲ್ಲಕ ವಿವಾದವು ಎರಡು ಗುಂಪುಗಳ ನಡುವಿನ ಹೊಡೆದಾಟಕ್ಕೆ ಕಾರಣವಾಗಿತ್ತು. ಹೊಡೆದಾಟದಲ್ಲಿ ಭಾಗಿಯಾದವರೂ ಇದೀಗ ಬೆಂಕಿ ಹಚ್ಚಿದ ಆರೋಪಿಯಾಗಿ ಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. “ದೇವಸ್ಥಾನದ ಅಭಿವೃದ್ಧಿಗಾಗಿ ರಾತ್ರಿ ಹಗಲು ಕಷ್ಟ ಪಟ್ಟವರು ನಾವು, ಈಗ ದೇವಸ್ಥಾನದಲ್ಲಿ ಮೆರೆಯುವವರು ಯಾರೋ…!” ಎಂಬ ಮಾತೊಂದು ಸ್ಥಳೀಯವಾಗಿ ಚಾಲ್ತಿಯಲ್ಲಿದ್ದು ಈ ವಾದ ಸುತ್ತ ಇರುವ ಪರ ವಿರೋಧವೇ ಹೊಡೆದಾಟಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆ.
ಇದೆಷ್ಟು ಸತ್ಯವೆಂಬುದು ಗ್ರಾಮಸ್ಥರಿಗೆ ಗೊತ್ತು.
ಈ ಮಧ್ಯೆ ಬೆಂಕಿ ಹಚ್ಚಿದ ಕಿಡಿಗೇಡಿ ಕೃತ್ಯ ನಡೆದಿದೆ. ಕೃತ್ಯದ ಹಿಂದೆ ದೇವಸ್ಥಾನ ದ ಸ್ಥಳೀಯ ರಾಜಕೀಯವೂ ‘ಕೈ’ ಹಾಕಿದ್ದರೆ ಮುಂದಿನ ರಾಜಕೀಯ ಮಾರಿ ಹಬ್ಬವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.















Post Comment