ಧರ್ಮಸ್ಥಳ ಸೌಜನ್ಯ ಪ್ರಕರಣ : ಮಹತ್ವದ ಹಂತದತ್ತ ಸಾಗುತ್ತಿರುವ ಎಸ್.ಐ.ಟಿ. ಮರುತನಿಖೆ

12ಕ್ಕೂ ಅಧಿಕ ಶಂಕಿತ ಆರೋಪಿಗಳ ಪಟ್ಟಿ ಸಿದ್ಧ!
ಸಿ.ಎನ್.ಚಿನ್ನಯ್ಯಗೂ ನೋಟಿಸ್ ಜಾರಿ ಸಾಧ್ಯತೆ?!
ಮಂಗಳೂರು : ಸೌಜನ್ಯಳ ಮೇಲಿನ ಅತ್ಯಾಚಾರ- ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ
(ಎಸ್ ಐಟಿ) ತನಿಖಾ ಹಾದಿಯಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು ಹದಿಹರೆಯದ ಬಾಲಕಿ ಮೇಲೆ ನಡೆದ ಅತ್ಯಾಚಾರ (ಅಥವಾ ಸಾಮೂಹಿಕ ಅತ್ಯಾಚಾರ) ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ನಂಬಲಾಗಿರುವ ಶಂಕಿತರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ರಾಜಧಾನಿಯ ಜನಪ್ರಿಯ ವೆಬ್ ನ್ಯೂಸ್
‘BLR post’ ವರದಿ ಮಾಡಿದೆ.
ದ.ಕ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ
17 ವರ್ಷ ವಯಸ್ಸಿನ ವಿದ್ಯಾರ್ಥಿನಿ ಸೌಜನ್ಯ 2012ರ ಅಕ್ಟೋಬರ್ 9ರಂದು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಣ್ಣಸಂಕ (‘ಪ್ರಕೃತಿ ಚಿಕಿತ್ಸಾಲಯ’ ಗೇಟ್’) ಪರಿಸರದಿಂದ ಅಪಹರಣಕ್ಕೊಳಗಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿ ಮರುದಿನ ಅಕ್ಟೋಬರ್ 10ರಂದು ಇದೇ ಪರಿಸರದ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿ ಈ ಹಿಂದಿನ ವಿವಿಧ ತನಿಖಾ ತಂಡಗಳು ಕೈಬಿಟ್ಟ ಅಥವಾ ಕಡೆಗಣಿಸಿದ ಆಯಾಮಗಳನ್ನೇ ಹುಡುಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದು ತನಿಖೆಯ ಹಾದಿಯಲ್ಲಿ ತಿಳಿದು ಬರುತ್ತಿದೆ. ಒಂದು ಮೂಲದ ಪ್ರಕಾರ ಸೌಜನ್ಯ ಪ್ರಕರಣದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾದ
12ಕ್ಕೂ ಅಧಿಕ ಶಂಕಿತರನ್ನು ಪಟ್ಟಿ ಮಾಡಿ ಕೊಂಡಿರುವ ಸಂಗತಿ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.
ಎಸ್ ಐ ಟಿ ಗುರುತಿಸಿದ ಶಂಕಿತರ ಸಂಖ್ಯೆಯು ನಿಖರವಾಗಿ ಇನ್ನಷ್ಠೇ ತಿಳಿದು ಬರಬೇಕಾಗಿದೆ.
ವಿವಿಧ ಆಯಾಮಗಳ ಪ್ರಾಥಮಿಕ ತನಿಖೆಯ ಮೂಲಕ ಸಿಕ್ಕಿದ ಸುಳಿವುಗಳ ಆಧಾರದಲ್ಲಿ ಎಸ್ ಐ ಟಿ ಸಿದ್ಧಪಡಿಸಿರುವ ಶಂಕಿತ ಪಟ್ಟಿಯಲ್ಲಿರುವ ಹೆಸರುಗಳನ್ನು ರಹಸ್ಯವಾಗಿಟ್ಟುಕೊಂಡು ತನಿಖೆ ಮುಂದುವರಿಸಿದ್ದು ಸದ್ಯದಲ್ಲೇ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ.

2012ರಲ್ಲಿ ಕೃತ್ಯದ ಬಳಿಕ ಅಪ್ರಾಪ್ತ ಬಾಲಕಿಯ ಶವವನ್ನು ವಿಲೇವಾರಿ ಮಾಡಿರುವ ಶಂಕೆ ಇರುವುದರಿಂದ, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಮಾಜಿ ಸ್ವಚ್ಛತಾ ಸಿಬ್ಬಂದಿ, ಸಮೂಹ ಸಮಾಧಿ ಪ್ರಕರಣದ
ಸಾಕ್ಷಿ ದೂರುದಾರ ಸಿ ಎನ್ ಚಿನ್ನಯ್ಯ ಅವರನ್ನು ಎಸ್‌ಐಟಿ ವಿಚಾರಣೆಗೊಳಪಡಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಒಂದು ಮೂಲದ ಪ್ರಕಾರ, ಘೋರ ಅಪರಾಧದಲ್ಲಿ ಭಾಗಿಯಾಗಿರುವವರ ಗುರುತುಗಳು ಅವನಿಗೆ ತಿಳಿದಿರಬಹುದು, ಆದ್ದರಿಂದ ರಾಜ್ಯ ಸರ್ಕಾರವು ಅವನಿಗೆ ಸಾಕಷ್ಟು ರಕ್ಷಣೆ ನೀಡಬೇಕಾಗುತ್ತದೆ.
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ (36/2025) ಚಿನ್ನಯ್ಯ ಸಾಕ್ಷಿ ದೂರುದಾರ ಮತ್ತು ಆರೋಪಿಯಾಗಿದ್ದು ಪ್ರಕರಣವು ವಿಲಕ್ಷಣ ದಿಕ್ಕಿನತ್ತ ತಿರುವು ಪಡೆದುಕೊಳ್ಳಲು ಚಿನ್ನಯ್ಯನೇ ಕಾರಣನಾಗಿದ್ದನೆಂಬ ಅಚ್ಚರಿಯ ಸಂಗತಿಯನ್ನು ನೆನಪಿಸಿಕೊಳ್ಳಬಹುದು.

ಸೌಜನ್ಯ ಪ್ರಕರಣದ ತನಿಖೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ ಬಹುತೇಕ ಪೊಲೀಸ್ ಅಧಿಕಾರಿಗಳ ಮೊದಲ ಹಂತದ ವಿಚಾರಣೆಯನ್ನು ಎಸ್ ಐ ಟಿ ಮುಗಿಸಿರುವುದು ಗಮನಾರ್ಹವಾಗಿದೆ.
ಪಟ್ಟಿ ಮಾಡಲಾಗಿರುವ ಎಲ್ಲಾ ಶಂಕಿತರನ್ನು ಎಸ್ ಐ ಟಿ ವಿಚಾರಣೆ ನಡೆಸಿ ತನಿಖೆಯ ಮಹತ್ವದ ಭಾಗವಾಗಿ
ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ನಿರೀಕ್ಷೆ ಹೆಚ್ಚಿದೆ.
ಎಸ್‌ಐಟಿ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯೊಬ್ಬರಿಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆ ಬಲವಾಗಿದೆ.

ಇನ್ನೊಂದೆಡೆ 14 ವರ್ಷಗಳ ಹಿಂದೆ ಸೌಜನ್ಯ ಮೃತದೇಹದಿಂದ ಸಂಗ್ರಹಿಸಲಾದ ಯೋನಿ ದ್ರವ ಮಾದರಿಯನ್ನು ಹೈದರಾಬಾದ್‌ನ ಸುಧಾರಿತ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮರುಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂಬ ಮಾಹಿತಿಯೂ ಗೃಹ ಇಲಾಖೆಯ ಬಳಿ ಇದೆ.
ಜೊತೆಗೆ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲು ಮತ್ತು ಪ್ರಕರಣವನ್ನು ಬೇಧಿಸಿ ಶೀಘ್ರವಾಗಿ ಬಗೆಹರಿಸಲು ಸಹಾಯ ಮಾಡಲು ಅಗತ್ಯವಾದ ವಿಧಿವಿಜ್ಞಾನ
ಪರೀಕ್ಷಾ ವರದಿಯ ನಿರೀಕ್ಷೆಯಲ್ಲಿದೆ.
ಇದೀಗ ಎಸ್ ಐ ಟಿ ತನಿಖೆಯ ಮೂಲಕ ಮಾಡಿರುವ 10-15 ಮಂದಿ ಶಂಕಿತ ಆರೋಪಿಗಳ ಪಟ್ಟಿಯಲ್ಲಿ
ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು 2012ರಿಂದಲೂ ದೂರಿನಲ್ಲಿ ಉಲ್ಲೇಖಿಸಿದ ಮೂರು ಹೆಸರುಗಳು ಮಾತ್ರವಲ್ಲದೆ ಉಳಿದ ಹೆಸರುಗಳ ಬಗ್ಗೆ ತೀವ್ರ ಕುತೂಹಲ ಮೂಡಿದೆ.














Post Comment