ಕಣಿಯೂರು : ಹೃದ್ರೋಗಿಯ ಜೀವ ಉಳಿಸಲು 12 ಬಾಟಲ್ ‘ಜೀವಾಮೃತ’ ಒದಗಿಸಿದ ರಕ್ತದಾನಿಗಳು.

ಬೆಳ್ತಂಗಡಿ : ನಿರಂತರ ಕೋಮು ಸಾಮರಸ್ಯವನ್ನು ಕೆಡಿಸಿ ಸಮಾಜದ ಶಾಂತಿ ಕದಡಿಸುವ ವಿಲಕ್ಷಣ ಮನಸ್ಥಿತಿಯ ಜನರು ಒಂದೆಡೆಯಾದರೆ ಕೋಮು ಸಾಮರಸ್ಯವನ್ನು ಕಾಪಾಡುವ ಕೆಲಸವನ್ನು ಮಾಡುವವರೂ ಇದೇ ಸಮಾಜದಲ್ಲಿ ಇದ್ದೇ ಇರುತ್ತಾರೆ; ಇದಕ್ಕೊಂದು ಸಾಕ್ಷಿ ಎಂಬಂತೆ ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಹಂತ ತಲುಪಿದ ಕಣಿಯೂರು ಗ್ರಾಮದ ದೇವಪ್ಪ ಎಂಬವರಿಗೆ 4 ಬಾಟಲಿ ರಕ್ತ ಬೇಕೆಂಬ ಬೇಡಿಕೆ ಬಂದಾಕ್ಷಣ ಎಚ್ಚೆತ್ತುಕೊಂಡ ಯುವಕರು ಅಗತ್ಯಕ್ಕಿಂತ ಅಧಿಕ ರಕ್ತದಾನ ಮಾಡಿ ಜೀವ ಉಳಿಸಿ ನೊಂದ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ದೇವಪ್ಪ ನಾಯ್ಕ ಎಂಬವರಿಗೆ ತುರ್ತಾಗಿ ನಾಲ್ಕು ಬಾಟಲಿ ರಕ್ತದ ಅಗತ್ಯ ಬಂದಿದ್ದು ಸಂಬಂಧಪಟ್ಟ ವೈದ್ಯರ ಸೂಚನೆ ಬಂದ ತಕ್ಷಣ ದೇವಪ್ಪ ಅವರು ತಮ್ಮ ಪರಿಚಯಸ್ಥರಲ್ಲಿ ರಕ್ತದ ಬೇಕಾಗಿದೆ ಎಂದು ಹೇಳಿಕೊಂಡು ವಿನಂತಿಸಿಕೊಂಡಿದ್ದರೂ ರಕ್ತ ಒದಗಿಸಲು ಯಾರೂ ಮುಂದೆ ಬರದಿದ್ದಾಗ ತೀವ್ರ ಆತಂಕಗೊಂಡ ದೇವಪ್ಪ ಅವರ ಮನೆಯವವರು ಸಹೋದರ ಸುಂದರ ಎಂಬವರು ಕಣಿಯೂರು ಗ್ರಾಮದ ಪದ್ಮುಂಜ ‘ಗ್ರಾಮ ವನ್ A to Z’ ಸೈಬರ್ ಮಾಲಕ ಖಲಂದರ್ ಪದ್ಮುಂಜ ಅವರನ್ನು ಸಂಪರ್ಕಿಸಿ ರಕ್ತದ ಅಗತ್ಯದ ಬಗ್ಗೆ ವಿನಂತಿಸಿಕೊಂಡರು. ಖಲಂದರ್ ಪದ್ಮುಂಜ ಅವರು ಕೂಡಲೇ ಅಕ್ಷಯ ಚಾರಿಟೇಬಲ್ ಪ್ರಮುಖರಾದ ಕರೀಂ ಕದ್ಕಾರ್ ಅವರ ಮೂಲಕ ತುರ್ತಾಗಿ 4 ಬಾಟಲಿ ರಕ್ತ ಬೇಕೆಂದು ವಿನಂತಿಸಿಕೊಂಡಿದ್ದರು. ಆದರೆ ಮುಂದಿನ ಹಂತದಲ್ಲಿ 4 ಬಾಟಲಿ ಸಾಕಾಗದೆ ಕೊನೆಗೆ 14 ಬಾಟಲಿ ರಕ್ತದ ತುರ್ತು ಅಗತ್ಯ ಕಂಡುಬಂದಾಗ 12 ಬಾಟಲಿ ರಕ್ತವನ್ನು ‘ಅಕ್ಷಯ ಚಾರಿಟೇಬಲ್’ ಮೂಲಕ ಒದಗಿಸಿ ದೇವಪ್ಪ ಅವರ ಚಿಕಿತ್ಸೆಗೆ ಅಗತ್ಯವಿದ್ದಷ್ಟು ರಕ್ತ ಕೊಡುಗೆ ನೀಡಿ ಜೀವ ಉಳಿಸಿದ್ದಾರೆ.
ದೇವಪ್ಪ ಅವರ ಅಣ್ಣ ಪೂವಪ್ಪ ಎಂಬವರು ಇತ್ತೀಚೆಗಷ್ಟೇ ತೀರಿಕೊಂಡಿದ್ದು ಆ ದುಃಖದಿಂದ ಚೇತರಿಸಿಕೊಳ್ಳುವ ಮೊದಲೇ ಮುನ್ನವೆ ಇದೀಗ ದೇವಪ್ಪ ಅವರಿಗೆ ಹೃದಯ ಸಂಕಷ್ಟಕ್ಕೆ ಸಿಲುಕಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ದೇವಪ್ಪ ನಾಯ್ಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ರಕ್ತ ಹೊಂದಿಸಲು ಹಲವರು ಶ್ರಮಿಸಿದ್ದರೂ ಸಹಕರಿಸಿದವರಲ್ಲಿ ಪದ್ಮುಂಜದ ನಚ್ಚು (ನಸ್ರುದ್ದೀನ್) ಅವರ ಶ್ರಮ ಶ್ಲಾಘನಾರ್ಹವಾಗಿದೆ.
Post Comment