‘ನ್ಯೂಸ್ 18’ ವರ್ಷದ ಕನ್ನಡಿಗ- 2026 ಪ್ರಶಸ್ತಿಗೆ ಆಯ್ಕೆಯಾದ ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಗೌಡ

‘ನ್ಯೂಸ್ 18’ ವರ್ಷದ ಕನ್ನಡಿಗ- 2026 ಪ್ರಶಸ್ತಿಗೆ ಆಯ್ಕೆಯಾದ ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಗೌಡ

Share

ಬೆಳ್ತಂಗಡಿ : ಸಾಮಾಜಿಕ ಹೋರಾಟಗಾರ ದಿ.ಕಡಮಾಜೆ ದಿನಕರ ಗೌಡ ಅವರ ಹಿರಿಯ ಪುತ್ರ ಕಡಮ್ಮಾಜೆ ಫಾರ್ಮ್ಸ್ ನ ಪ್ರಗತಿಪರ ಸಾವಯವ ಕೃಷಿಕ ದೇವಿಪ್ರಸಾದ್ ಕಡಮಾಜೆ ಇವರು ತಮ್ಮ‌ ಕೃಷಿ ಕ್ಷೇತ್ರದ ವಿಶೇಷ ಪರಿಶ್ರಮ ಸಾಧನೆಗಾಗಿ ಜನಪ್ರಿಯ ಕನ್ನಡ ಸುದ್ದಿವಾಹಿನಿ ‘ನ್ಯೂಸ್ 18’ ಅರ್ಪಿಸುವ ಪ್ರತಿಷ್ಠಿತ ‘ವರ್ಷದ ಕನ್ನಡಿಗ- 2026’ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಸಾಮಾಜಿಕ ಹೋರಾಟಗಾರ, ನವಸಾಕ್ಷರರ ಸಂಘಟಕ , ಗ್ರಾಮಪಂಚಾಯತ್ ಸದಸ್ಯರಾಗಿ ಸಮಾಜ ಸೇವಕರಾಗಿ‌ ಮತ್ತು ಪ್ರಗತಿಪರ ಕೃಷಿಕರಾಗಿದ್ದ ದಿ.ಕೆ.ದಿನಕರ ಗೌಡ ಕಡಮ್ಮಾಜೆ ಇವರ ಹಿರಿಯ ಪುತ್ರ , ವಕೀಲ ಪ್ರಗತಿಪರ ಸಾವಯವ ಕೃಷಿಕ ದೇವಿಪ್ರಸಾದ್ ಗೌಡ ಅವರು ಎಲ್ ಎಲ್ ಬಿ ಪದವೀಧರರಾಗಿದ್ದು ವಕೀಲ ವೃತ್ತಿ ಮಾಡುವ ಬದಲಾಗಿ ತಂದೆಯ ಸ್ಫೂರ್ತಿಯಿಂದ ಕೃಷಿಯತ್ತ ಆಕರ್ಷಿತರಾಗಿ ಕೃಷಿ ಕಾಯಕದಲ್ಲೇ ಧ್ಯಾನಸ್ಥನಂತೆ ತೊಡಗಿದರು.
ದೇವಿಪ್ರಸಾದ್ ಅವರು ವಿವಿಧ ಜಾತಿಯ ಪಕ್ಷಿ, ಕೋಳಿ, ಮೊಲ, ಹಂದಿ ಸಾಕಣೆ ಮಾತ್ರವಲ್ಲದೆ ಮೀನು ಕೃಷಿಯಲ್ಲೂ ಯಶಸ್ವಿಯಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡು ಅನೇಕ ಸಭೆ ಸಮಾರಂಭಗಳಲ್ಲಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ.
ಕೆ.ದಿನಕರ ಗೌಡ ದಂಪತಿಯ ಪುತ್ರರಾದ ದೇವಿಪ್ರಸಾದ್ ಮತ್ತು ಜಯಪ್ರಕಾಶ್ ಕೃಷಿ ಕ್ಷೇತ್ರದ ಸಾಧಕರಾಗಿ ಸನ್ಮಾನಾರ್ಹರಾಗಿ ನಾಡಿನಾದ್ಯಂತ ಚಿರಪರಿಚಿತರಾಗಿದ್ದಾರೆ.
ರಾಜ್ಯದ ವಿವಿಧ ಮೂಲೆಗಳಿಂದ ಶಾಲಾ ಕಾಲೇಜುಗಳ ಅಧ್ಯಯನ ಪ್ರವಾಸವೂ ಸೇರಿದಂತೆ ಹಲವಾರು ಅಧ್ಯಯನ ಪ್ರವಾಸದ ತಂಡಗಳು, ನಿಯೋಗಗಳು ಕಡಮ್ಮಾಜೆ ಫಾರ್ಮ್ಸ್ ಅನ್ನೇ ಅಧ್ಯಯನ ಮತ್ತು ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಕಡಮ್ಮಾಜೆ ಸಹೋದರರು ಕೃಷಿ ಕ್ಷೇತ್ರದಲ್ಲಿ ಯಶಸ್ವಿಯ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದರೂ ಅತಿಶಯೋಕ್ತಿಯಲ್ಲ.

-ಅಚುಶ್ರೀ ಬಾಂಗೇರು.
shreebaangeru@gmail.com

Post Comment

ಟ್ರೆಂಡಿಂಗ್‌

error: Content is protected !!