ವೇಣೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದಲ್ಲಿ 1 ಕೋಟಿ ರೂ. ನಷ್ಟವಾಗಿದ್ದು ನಿಜವೇ?

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವದಲ್ಲಿ 1 ಕೋಟಿ ರೂ. ನಷ್ಟವಾಗಿದ್ದು ನಿಜವೇ?

Share

ಬೆಳ್ತಂಗಡಿ : ಅದ್ಧೂರಿ ಬ್ರಹ್ಮಕಲಶೋತ್ಸವವನ್ನು ನೆರವೇರಿಸಿ ಯಶಸ್ವಿಯಾದ ಹೆಗ್ಗಳಿಕೆಗೆ ಪಾತ್ರವಾಗಿ ಜಿಲ್ಲೆಯಲ್ಲೇ ವ್ಯಾಪಕ ಪ್ರಚಾರ ಪಡೆದಿದ್ದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ , ಬ್ರಹ್ಮಕಲಶೋತ್ಸವ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಮುಖ್ಯಸ್ಥರಿಗೆ ಅಂದಿನ ವಿಜೃಂಭಣೆಯ ಬ್ರಹ್ಮಕಲಶೋತ್ಸವವು ಅವಶ್ಯಕತೆಗಿಂತ ಆಡಂಬರವಾಯಿತೇ ಎಂಬ ಪಶ್ಚಾತಾಪ ಕಾಡುತ್ತಿದೆಯೇ ಎಂಬ ಮಾತುಗಳು ಇದೀಗ ಕೇಳಿ ಬರಲು ಕಾರಣವಾಗಿದೆ.
ಇಂಥ ಮಾತುಗಳಿಗೆ ಪುಷ್ಠಿ ನೀಡುವಂತೆ ಸುಮಾರು 1 ಕೋಟಿ ನಷ್ಟ ಉಂಟಾದ ಪರಿಣಾಮ, ದೊಡ್ಡ ಮೊತ್ತದ ವಾಗ್ದಾನ ನೀಡಿದವರನ್ನು ನಂಬಿ ಪುರುಷೋತ್ತಮ ರಾಯರ ಇಡೀ ಕುಟುಂಬ ಈ ನಷ್ಟವನ್ನು ಮತ್ತೆ ಭರಿಸಲು 90 ಲಕ್ಷ ರೂ. ಬ್ಯಾಂಕ್ ಸಾಲವನ್ನು ತಮ್ಮ ಹೆಗಲ ಮೇಲೆ ಎಳೆದುಕೊಂಡು ರಾತ್ರಿ ಹಗಲು ಪರಿತಪಿಸುತ್ತಿರುವ ಎಂಬ ಕಳವಳಕಾರಿ ಸಂಗತಿಯೊಂದು ಇದೀಗ ಬಯಲಾಗಿದೆ.
ಈ ಬಗ್ಗೆ ದೇವಳದ ಭಕ್ತಾದಿಗಳಲ್ಲೊಬ್ಬರಾದ ವೇಣೂರಿನ ಡಾ.ಸುಬ್ರಹ್ಮಣ್ಯ ಭಟ್ ಎಂಬವರು 90 ಲಕ್ಷ ರೂ. ಬ್ಯಾಂಕ್ ಸಾಲದ ಕಣ್ಣೀರ ಕಥೆಯ ಬಗ್ಗೆ ಬರೆದ ವಿಷಾದನೀಯ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೇವಸ್ಥಾನದ ಭಕ್ತಾದಿಗಳ ಮಧ್ಯೆ ಮಾರ್ಮಿಕ ಚರ್ಚೆಯನ್ನು ಹುಟ್ಟು ಹಾಕಿದೆ. ಓದುಗರ ಮಾಹಿತಿಯ ಹಿತದೃಷ್ಠಿಯಿಂದ ಈ ಚಿಂತನಾರ್ಹ ಬರಹವನ್ನು ಇಲ್ಲಿ ಹಾಗೆಯೇ ಕೊಡಲಾಗಿದೆ;

‘ವೇಣೂರು ದೇವಸ್ಥಾನಕ್ಕೆ ಜೀವಗಳೆಯಿತ್ತು  ಕೈಸೋತವರು…’

ಎಂಟು ಮಾಗಣೆಗೆ ಸೇರಿದ ಅಜಿಲ ವಂಶದ ಅರಸು ಮನೆತನದ ಪಟ್ಟದ ದೇವರಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು ಇದರ ಶಿಥಿಲವಾಗಿದ್ದ ಕಟ್ಟಡಗಳನ್ನು ತೆಗೆದು ಎಲ್ಲರೂ ಹೆಮ್ಮೆ ಪಡುವಂತೆ ಸಂಪೂರ್ಣ ಶಿಲಾಮಯವಾಗಿ ಶಾಶ್ವತಗೊಳಿಸುವ ಕಾರ್ಯವನ್ನು ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಪಿ. ಪುರುಷೋತ್ತಮ ರಾಯರ ನೇತೃತ್ವದಲ್ಲಿ ನಡೆಸಿದ್ದು ಅತ್ಯಂತ ದೊಡ್ಡ ಸಾಹಸದ ಕೆಲಸವೇ ಸರಿ.
ಇಂದು ನಾವು ದೇವಾಲಯದ ಎದುರು ಕೊಡಿ ಕಂಬದ ಬಳಿ ನಿಂತಾಗ ನಮಗೇ ಹೆಮ್ಮೆ ಅನಿಸುವಷ್ಟರ ಮಟ್ಟಿಗೆ ಸರ್ವಾಂಗ ಸುಂದರವಾಗಿ ನಿರ್ಮಿಸಲು ಊರಿನ, ಪರವೂರಿನ ದಾನಿಗಳು, ಜನರ ಸಂಪೂರ್ಣ ಸಹಕಾರದಿಂದ ಸಾಧ್ಯವಾಯಿತೆಂಬುದು ಅಕ್ಷರಶಃ ಸತ್ಯ.
ಅನೇಕ ಮಂದಿ ಸಹಕಾರ ನೀಡಿದರೂ ಆರ್ಥಿಕ ಕೊರತೆಯಾಗಿ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನ ಸಮಿತಿ, ಪುರುಷೋತ್ತಮ ರಾಯರು ಹಾಗೂ ಶ್ರೀಮತಿ ಗೌರಮ್ಮ ಮತ್ತು ಮಕ್ಕಳು ಬ್ಯಾಂಕ್ ಸಾಲ ಮಾಡಿ ದೇವಸ್ಥಾನಕ್ಕೆ ಹಾಕಿದ ಮೊತ್ತ, ಮರದ ಕೆಲಸ, ಕಲ್ಲಿನ ಕೆಲಸ, ತಾಮ್ರದ ಹೊದಿಕೆಯ ಬಾಬ್ತು ಮತ್ತು ಇತರ ಖರ್ಚು ವೆಚ್ಚಗಳು ಸೇರಿ  ಸುಮಾರು ತೊಂಬತ್ತು ಲಕ್ಷಗಳಷ್ಟು ಸಾಲವು ಈ ಕಾರ್ಯಕ್ಕೆ ಸಂಪೂರ್ಣ ತೊಡಗಿಸಿಕೊಂಡವರ ಹೆಗಲ ಮೇಲೆ ಬಿದ್ದುದು ಮಾತ್ರ ವಿಷಾದನೀಯ ಸತ್ಯ. ಬ್ರಹ್ಮಕಲಶಕ್ಕಿಂತ ಮೊದಲು ಕೊಡುತ್ತೇವೆ ಅಂತ ವಾಗ್ದಾನ ಮಾಡಿದವರಲ್ಲಿ ಕೆಲವರು ಕೈಕೊಟ್ಟಿದ್ದರಿಂದಲೋ,
ಹೇಗೂ ಬ್ರಹ್ಮಕಲಶ ಮುಗಿಯಿತಲ್ಲಾ ಎಂಬ ಅವಜ್ಞೆಯಿಂದಲೋ , ಸಾಕಷ್ಟು ಪ್ರಮಾಣದಲ್ಲಿ ಸಂಪರ್ಕ ಮಾಡಲು ಆಗದೇ ಇದ್ದುದರಿಂದಲೋ, ಆಗಬೇಕಾಗಿದ್ದ ಸಂಗ್ರಹ ಆಗದೆ ಕೊರತೆಯುಂಟಾದ ಸಂಗತಿ ಎಲ್ಲರಿಗೂ ತಿಳಿದದ್ದೇ.
ಅನಿರೀಕ್ಷಿತವಾಗಿ ಕೆಲಸ ಮಾಡಿಸಲೇ ಬೇಕಾದ ಒತ್ತಡದಿಂದಲೋ , ಕೊಡಬೇಕಾದವರು ಬಂದು ಕೊಡಲೇಬೇಕೆಂದು ಕೇಳಿದ್ದರಿಂದಲೋ, ದೊಡ್ಡ ಮೊತ್ತದ ಹಣದ ಅವಶ್ಯಕತೆ ಬಂದು ಹೊಣೆ ಹೊತ್ತ ಪುರುಷೋತ್ತಮ ರಾಯರಿಗೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿ ಕೆಲವರ ಭರವಸೆಯನ್ನೇ ನಂಬಿ ಬ್ಯಾಂಕ್ ಸಾಲಕ್ಕೆ ಮೊರೆ ಹೋಗಬೇಕಾದ ಸಂದರ್ಭ ನಿರ್ಮಾಣವಾಯಿತು. ಕೈ ಹಿಡಿದ ಕಾರ್ಯ ಮುಗಿಸಬೇಕಾದ ಹೊಣೆಗಾರಿಕೆಯಿದ್ದ ಅವರು ದೇವಳದ ಕಾರ್ಯಕ್ಕೆ ಸಾಲವನ್ನು ಮಾಡಿ ಹಣ ಹಾಕಿದರು.
ಜೀರ್ಣೋದ್ಧಾರ , ಬ್ರಹ್ಮ ಕಲಶ ಸಾಂಗವಾಗಿ ನೆರವೇರಿತು. ಪುರುಷೋತ್ತಮ ರಾಯರಿಗೆ ದೊಡ್ಡ ಮೊತ್ತದ ಸಾಲ ಹೆಗಲ ಮೇಲೆ ಹಾಗೆಯೇ ಉಳಿಯಿತು. ದೇವರ ಪ್ರತಿಷ್ಠೆಯಾಗಿ ಪೂಜೆ ನಿರಾತಂಕವಾಗಿ ಮುಂದುವರೆದರೂ ಸಾಲವು ಹಾಗೆಯೇ ಉಳಿದು ಬಡ್ಡಿ ಬೆಳೆಯತೊಡಗಿತು.
ನಮ್ಮ ಊರಿನ ದೇವಸ್ಥಾನವು ಋಣಮುಕ್ತವಾಗಿ ದೇವರ ಅನುಗ್ರಹ ದೊರೆಯಬೇಕಾದ್ದು ನಮಗೆಲ್ಲ ಆಗಲೇಬೇಕಾದ ಕಾರ್ಯ. 
ದೇವಸ್ಥಾನದ ಉದ್ಧಾರಕ್ಕಾಗಿ ಸರ್ವಸ್ವವನ್ನೂ ನೀಡಿ ದುಡಿದ ಮಹನೀಯರೊಬ್ಬರು ಪರಿತಪಿಸುವಂತಾದರೆ ನಮಗೆ ದೇವತಾನುಗ್ರಹ ದೊರಕೀತೇ? ಪುರುಷೋತ್ತಮ ರಾಯರು ಮತ್ತು ಇತರರ ಋಣಕ್ಕೆ ದಾರಿಯಾಗಬೇಡವೇ?
ಕೆಲಸ ಮಾಡಿ ಪೂರೈಸಿದವರ ಮಜೂರಿ ಪಾವತಿ ಮಾಡಬೇಡವೇ?
ಈ ಕುರಿತು ಒಂದು ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ ರಾಯರು ತನ್ನ ಅಸಹಾಯಕ ಸ್ಥಿತಿಯನ್ನು ವಿವರಿಸಿದ ಮೇಲೆಯೂ ಪರಿಣಾಮ ಆಶಾದಾಯಕವಾಗಿ ಏನೂ ಇಲ್ಲ ಎಂಬುದು ವಿಷಾದನೀಯವೇ!
ಇನ್ನಾದರೂ ಅವರು ಪರಿಶ್ರಮ ಪಟ್ಟದಕ್ಕೆ ಪರಿತಪಿಸುವಂತಾಗಬಾರದು ಎಂಬ ಕಳಕಳಿಯಿಂದ ದೇವಸ್ಥಾನಕ್ಕೆ ಸಂಬಂಧಪಟ್ಟ ನಾವೆಲ್ಲರೂ ಅವರ ಸಾಲಭಾರಕ್ಕೆ ಕಿಂಚಿತ್ ಆದರೂ ಹೆಗಲು ಕೊಟ್ಟು ಶೀಘ್ರದಲ್ಲೇ ಅವರು ಋಣ ಮುಕ್ತರಾಗುವಂತೆ ಮಾಡಬೇಕಾಗಿದೆ.
ದೇವರನ್ನು ಋಣದಲ್ಲಿ ಇಟ್ಟು ಪೂಜೆ ಮಾಡಿದರೆ ಊರಿಗೇ ಸತ್ಫಲ ಸಿಗುವುದು ಸಾಧ್ಯವೇ?
ಒಂದೊಂದು ಮನೆಯಿಂದಲೂ ಶಕ್ತ್ಯಾನುಸಾರ  ಕೊಟ್ಟರೆ  ಗುರಿ ಮುಟ್ಟಲು ಕಷ್ಟವೇನಿಲ್ಲ. ಯಾವುದಕ್ಕೂ ನಾವು ಮನಸ್ಸು ಮಾಡಬೇಕು. ಉದಾರಿಗಳಾಗಿ ಓರ್ವ ನಮ್ಮ ಊರಿನ ಸಜ್ಜನರನ್ನು ಉಳಿಸುವ ಕೆಲಸಕ್ಕೆ ಸಹಕಾರಿಗಳಾಗಬೇಕಾಗಿದೆ.
(ಡಾ. ಸುಬ್ರಹ್ಮಣ್ಯ ಭಟ್, ವೇಣೂರು)

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಅದ್ಧೂರಿಯಾಗಿತ್ತೇ? ನಿಜವಾಗಿಯೂ ವಿಪರೀತ ಆಡಂಬರವಾಯಿತೇ? ಎಂಬುದನ್ನು ಕ್ಷೇತ್ರದ ಪ್ರಜ್ಞಾವಂತ ಭಕ್ತಾದಿಗಳೇ ತೀರ್ಮಾನಿಸಲಿ.

Previous post

ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧನ ಮೃತದೇಹ ಪತ್ತೆ: ತಣ್ಣೀರುಪಂತದಲ್ಲಿ ಸಂಶಯ ಮೂಡಿಸಿದ ಪ್ರಕರಣ

Next post

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ : ಸಿಮೆಂಟ್ ಹೊತ್ತ ಲಾರಿ ಚರಂಡಿಗೆ

Post Comment

ಟ್ರೆಂಡಿಂಗ್‌