ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಾಧಕರಿಗೆ ಗೌರವ ಕಾರ್ಯಕ್ರಮ : ಆರಂಬೋಡಿ ಹೈನುಗಾರಿಕಾ ಸಾಧಕ ಪ್ರತಾಪ್ ಶೆಟ್ಟಿ ಕುಂಡಾಜೆ ಅವರಿಗೆ ‘ಕ್ಷೀರ ರತ್ನ’ ಪ್ರಶಸ್ತಿ

ಬೆಳ್ತಂಗಡಿ : ಆರಂಬೋಡಿ ಗ್ರಾಮದ ಕುಂಡಾಜೆ ನಿವಾಸಿ ಸುನಂದಾ ಮತ್ತು ಸಂಜೀವ ಶೆಟ್ಟಿ ದಂಪತಿಯ ಪುತ್ರ, ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಹೈನುಗಾರಿಕಾ ಕ್ಷೇತ್ರ ಶ್ರಮಿಕ ಪ್ರತಾಪ್ ಶೆಟ್ಟಿ ಕುಂಡಾಜೆ ಅವರು ‘ಕ್ಷೀರ ರತ್ನ’ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಮಡಂತ್ಯಾರಿನಲ್ಲಿ ನವೆಂಬರ್ 14ರಂದು ಜರಗಿದ ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಪ್ರತಾಪ್ ಶೆಟ್ಟಿ ಕುಂಡಾಜೆ ಅವರಿಗೆ ‘ಕ್ಷೀರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆಟೋ ಮೋಬೈಲ್ ವೃತ್ತಿ ಶಿಕ್ಷಣ ಮುಗಿಸಿ ಬೆಂಗಳೂರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಪ್ರತಾಪ್ ಶೆಟ್ಟಿ ತನ್ನ ಉದ್ಯೋಗವನ್ನು ತ್ಯಜಿಸಿ ಕೃಷಿ ಮತ್ತು ಹೈನುಗಾರಿಕೆಯತ್ತ ಭರವಸೆಯೊಂದಿಗೆ ಮರಳಿದವರು. ಪ್ರಸ್ತುತ ಪ್ರತಿ ದಿನ ಸರಾಸರಿ 100 ಲೀಟರ್ ಗಿಂತಲೂ ಅಧಿಕ ಹಾಲನ್ನು ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪೂರೈಸುವ 26ರ ಉತ್ಸಾಹಿ ತರುಣ. ನಗರದತ್ತ ಉದ್ಯೋಗ ಹರಸಿ ಹೋಗುತ್ತಿರುವ ಯುವಕರ ಎದುರು ತದ್ವಿರುದ್ಧವಾಗಿ ನಗರದ ಉದ್ಯೋಗ ಬಿಟ್ಟು ಹಳ್ಳಿಗೆ ಬಂದು ಹೈನುಗಾರಿಕೆಯಂತಹ ಅತ್ಯಂತ ಸವಾಲಿನ ಕಸುಬಿನಲ್ಲಿ ಭರವಸೆಯೊಂದಿಗೆ ಮುಂದುವರಿದು ಊರವರ ಹುಬ್ಬೆರಿಸಿದರು.
ತಮ್ಮ ಹಟ್ಟಿಯಲ್ಲಿ ಸುಮಾರು 15 ಭಿನ್ನ , ವಿಭಿನ್ನ ತಳಿಗಳನ್ನು ಸಾಕುತ್ತಿರುವ ಪ್ರತಾಪ್ ಶೆಟ್ಟಿ ಹೈನುಗಾರಿಕೆಯೊಂದಿಗೆ ಅಡಿಕೆ ಕೃಷಿ, ತೆಂಗು ಕೃಷಿಯಲ್ಲಿ ತೊಡಗಿದ್ದು ಹೊಸ ತಲೆಮಾರಿನ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರುಗಳು ಪ್ರತಾಪ್ ಶೆಟ್ಟಿ ಅವರಿಗೆ ಸಹಕಾರ ಸಂಘದ ಮೂಲಕ ಸಾಥ್ ನೀಡುತ್ತಿದ್ದು ಇದೀಗ ‘ಕ್ಷೀರ ರತ್ನ’ ಪ್ರಶಸ್ತಿ ಪಡೆಯುವ ಮೂಲಕ ಹೈನುಗಾರಿಕಾ ಕ್ಷೇತ್ರದಲ್ಲಿ ಕನಸುಗಾರರನ್ನು ಹುಟ್ಟು ಹಾಕುತ್ತಿದ್ದಾರೆ.
















Post Comment