ಕುವೆಟ್ಟು ಗ್ರಾ.ಪಂ. ‌ ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ : ಪಿಲಿಚಂಡಿಕಲ್ಲು-ಪೊಟ್ಟುಕೆರೆ ಹದಗೆಟ್ಟ ರಸ್ತೆ ಬಗ್ಗೆ ಮತದಾರರ ಆಕ್ರೋಶ

ಕುವೆಟ್ಟು ಗ್ರಾ.ಪಂ. ‌ ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ : ಪಿಲಿಚಂಡಿಕಲ್ಲು-ಪೊಟ್ಟುಕೆರೆ ಹದಗೆಟ್ಟ ರಸ್ತೆ ಬಗ್ಗೆ ಮತದಾರರ ಆಕ್ರೋಶ

Share

IMG-20241124-WA0000-1024x461 ಕುವೆಟ್ಟು ಗ್ರಾ.ಪಂ.             ‌  ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ : ಪಿಲಿಚಂಡಿಕಲ್ಲು-ಪೊಟ್ಟುಕೆರೆ ಹದಗೆಟ್ಟ ರಸ್ತೆ ಬಗ್ಗೆ ಮತದಾರರ ಆಕ್ರೋಶ

ಬೆಳ್ತಂಗಡಿ : ಕುವೆಟ್ಟು ಗ್ರಾಮಪಂಚಾಯತ್ 1ನೇ ವಾರ್ಡ್ ನ ಸದಸ್ಯೆಯೊಬ್ಬರ ಮರಣದಿಂದ ತೆರವಾಗಿದ್ಧ ಸ್ಥಾನಕ್ಕೆ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಸುಮಾರು 80 ಶೇಖಡಾ ಮತದಾರರು ಮತದಾನ ಬಹಿಷ್ಕರಿಸುವ ಮೂಲಕ ರಸ್ತೆಯೊಂದರ ಅಭಿವೃದ್ಧಿ ನಿರ್ಲಕ್ಷಿಸಿದ ಜನಪ್ರತಿನಿಧಿಗಳಿಗೆ ಶಾಕ್ ಟ್ರೀಟ್ ನೀಡಿದ ವಿದ್ಯಮಾನ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮಪಂಚಾಯತ್ 1ನೇ ವಾರ್ಡ್ ನ ಸದಸ್ಯೆಯೊಬ್ಬರ ಮರಣದಿಂದ ತೆರವಾಗಿದ್ಧ ಸ್ಥಾನಕ್ಕೆ ಶನಿವಾರ ಉಪ ಚುನಾವಣೆ ನಡೆದಿತ್ತು. ಸುಮಾರು 1,410 ಮತದಾರರ ಸಂಖ್ಯೆ ಹೊಂದಿರುವ ಈ ವಾರ್ಡ್ ನ 1 ಸ್ಥಾನಕ್ಕಾಗಿ ನಡೆದ ಉಪ ಚುನಾವಣೆಯಲ್ಲಿ ಕೇವಲ 18.25 % ಮತದಾನ ನಡೆದಿದ್ದು ಸುಮಾರು 80% ಮತದಾರರು ಮತದಾನ ಬಹಿಷ್ಕಾರ ಮಾಡಿರುವುದು ಕಂಡು ಬಂದಿದೆ.
ಈ ಮತದಾನ ಬಹಿಷ್ಕಾರಕ್ಕೆ ಕಾರಣವೇನೆಂದು ನೋಡುವುದಾದರೆ 20 ವರ್ಷಗಳಿಂದ ಸಮರ್ಪಕ ದುರಸ್ತಿಯನ್ನಾಗಲಿ, ಅಭಿವೃದ್ಧಿಯನ್ನಾಗಲಿ ಕಾಣದೆ ತೀವ್ರ ಹದಗೆಟ್ಟಿರುವ ಪಿಲಿಚಂಡಿಕಲ್ಲು-ಪೊಟ್ಟುಕೆರೆ ರಸ್ತೆಯನ್ನು ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಜನಪ್ರತಿನಿಧಿಗಳು ನಿರ್ಲಕ್ಷಿಸಿದ್ದೇ ಪ್ರಮುಖ ಕಾರಣ ಎಂಬ ಮಾತುಗಳು ಬೂತ್ ಮಟ್ಟದಿಂದ ಎರಡೂ ಪಕ್ಷಗಳ ಕಚೇರಿಗಳ ಮೆಟ್ಟಿಲಿನವರೆಗೂ ಕೇಳಿ ಬರುತ್ತಿದೆ.
ಕಾಂಗ್ರೆಸ್ ಭದ್ರಕೋಟೆಯಂತಿರುವ ಏರಂಗಲ್ಲು – ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಲೋಕಸಭಾ, ವಿಧಾನಸಭಾ ಹಾಗೂ ತಾ.ಪಂ.- ಜಿ.ಪಂ. ಸೇರಿದಂತೆ ಪ್ರತೀ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಪಡೆಯುವುದು ಎಲ್ಲಾ ಪಕ್ಷದವರಿಗೂ ತಿಳಿಯದ ವಿಚಾರವೇನಲ್ಲ; ಆದರೆ ಎಲ್ಲಾ ಪಕ್ಷಗಳ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು ಈ ಭಾಗದ ಪ್ರಮುಖ ರಸ್ತೆಯ ಅಭಿವೃದ್ಧಿಯ ಬಗ್ಗೆ ಉದ್ದೇಶ ಪೂರ್ವಕವೆಂಬಂತೆ ಕಾಳಜಿವಹಿಸದೆ ನಿರ್ಲಕ್ಷಿಸಿದ ಪರಿಣಾಮ ಇದೀಗ ಉಪ ಚುನಾವಣೆಯಲ್ಲಿ ಸ್ಥಳೀಯ ಮತದಾರರು ಸೋಮಾರಿ ಜನಪ್ರತಿನಿದಿಗಳು ತಲೆಮರೆಸಿಕೊಂಡು ಓಡಾಡುವಂತೆ ಮಾಡಿದ್ದಾರೆ.
ಎರಡು ದಶಕಗಳಿಂದ ಅಭಿವೃದ್ಧಿ ಕಾಣದ ಪಿಲಿಚಂಡಿಕಲ್ಲು-ಪೊಟ್ಟುಕೆರೆ ಸಂಪರ್ಕ ರಸ್ತೆಯ ಮರು ಡಾಮರೀಕರಣಕ್ಕಾಗಿ ಸ್ಥಳೀಯ ನಾಗರಿಕರು ಗ್ರಾಮಸಭೆಗಳಲ್ಲಿ ಮಾತ್ರವಲ್ಲದೆ ಗ್ರಾಮಮಟ್ಟದಿಂದ ತಾಲೂಕು ಮಟ್ಟದವರೆಗಿನ ಬಿಜೆಪಿಯಿಂದ ಕಾಂಗ್ರೆಸ್ ವರೆಗಿನ ಜನಪ್ರತಿನಿಧಿಗಳಲ್ಲಿ , ರಾಜಕೀಯ ನಾಯಕರಲ್ಲಿ ಲಿಖಿತವಾಗಿ, ಮೌಖಿಕವಾಗಿ ಮನವಿ ಮಾಡುತ್ತಲೇ ಬಂದಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳಿಂದಾಗಲಿ, ಅಧಿಕಾರಿಗಳಿಂದಾಗಲಿ ಯಾವುದೇ ಸ್ಪಂದನೆ ಇದುವರೆಗೂ ಬಂದಿಲ್ಲ ಎನ್ನುವುದೇ ಸ್ಥಳೀಯರ ಬೇಸರ.
ಇದರ ಪರಿಣಾಮವೇ ಈ ಉಪ ಚುನಾವಣೆಯಲ್ಲಿ 1,410 ಮತಗಳ ಪೈಕಿ ಕೇವಲ 257 ಕನಿಷ್ಠ ಮತಗಳನ್ನಷ್ಟೇ ಕೊಟ್ಟು
ಬಹುಪಾಲು ಮತದಾರರು ಮತದಾನ ಬಹಿಷ್ಕರಿಸುವ ಮೂಲಕ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ‘ಆಘಾತಕಾರಿ’ ಚಿಕಿತ್ಸೆ ನೀಡಿದ್ದಾರೆ.
ಇದೀಗ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಸೋಲಿನ ಭೀತಿ ಎದುರಿಸುತ್ತಿದ್ದಾರೆ.
ನೀರಸ ಮತದಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಿಂತ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯೇ ಸೋಲಿನ ಭೀತಿ ಅನುಭವಿಸುವಂತಾಗಿದೆ. ಮತದಾನ ಬಹಿಷ್ಕರಿಸಿದ ಮತದಾರರು ಲೆಕ್ಕಾಚಾರ ಹಾಕಿದಂತೆ ಫಲಿತಾಂಶ ಬಂದರೆ ಕಾಂಗ್ರೆಸ್ ಅಭ್ಯರ್ಥಿಗೆ ಕಹಿ ಅನುಭವವಾಗಲಿದ್ದು ಇದೊಂದು ಶಾಕ್ ಟ್ರೀಟ್ ಮೆಂಟ್ ಎಂಬ ಸಂದೇಶ ರವಾನೆಯಾಗಿ ಮಾಜಿ ಶಾಸಕ ಕೆ. ವಸಂತ ಬಂಗೇರ ಮರಣದ ಬಳಿಕವೂ ಬಣ ಬಣದೊಳಗೆ ‘ಬ್ಲಾಕ್’ ಆಗಿ ಹಿರಿಯ ಕಾರ್ಯಕರ್ತರ ಪಾಲಿಗೆ
ಗಗನ ಕುಸುಮಗಳಾಗಿರುವ ಉಭಯ ಬ್ಲಾಕ್ ಗಳ ಸಾರಥಿಗಳ ಆತ್ಮಾವಲೋಕನಕ್ಕೆ ಕಾಲ ಮತ್ತೊಮ್ಮೆ ಒದಗಿ ಬಂದಂತಿದೆ ಎಂಬ ಮಾತುಗಳು ಗ್ರಾಮೀಣ ಮತ್ತು ನಗರ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ನಾವೇನು ಮತದಾರರಲ್ಲವೇ? ನಮ್ಮ ಮತಗಳಿಗಾಗಲಿ, ಬೇಡಿಕೆಗಳಿಗಾಗಲಿ ಬೆಲೆ ಇಲ್ಲವೇ? ಆಳುವ ಸರಕಾರವನ್ನೇ ಅಂಗೈಯಲ್ಲಿಟ್ಟುಕೊಂಡಿದ್ದರೂ ಇಂಥ ಸಣ್ಣ ಬೇಡಿಕೆಯೊಂದು ಏಕೆ ಈಡೇರಲೇ ಇಲ್ಲ ಎಂದು ಪ್ರಶ್ನಿಸುತ್ತಿದ್ದಾರೆ, ಸ್ಥಳೀಯರು.
ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು, ಆಡಳಿತ ಪಕ್ಷದ ನಾಯಕರು, ಅಧಿಕಾರಿಗಳು ಎಚ್ಚೆತ್ತುಕೊಂಡು ಪಿಲಿಚಂಡಿಕಲ್ಲು-ಪೊಟ್ಟುಕೆರೆ ರಸ್ತೆಯ ಮರುಡಾಮರೀಕರಣ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಮತ್ತೆ ಚುನಾವಣಾ ‘ಬಹಿಷ್ಕಾರ ಭೂತ’ ಕಾಡಲಿದ್ದು ಆಡಳಿತ ಪಕ್ಷದ ನಾಯಕರನ್ನೊಳಗೊಂಡು ಇತರ ರಾಜಕೀಯ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂಬ ಎಚ್ಚರಿಕೆಯ ಮಾತುಗಳು ಕೇಳಿ ಬರುತ್ತಿದೆ.

Post Comment

ಟ್ರೆಂಡಿಂಗ್‌