ಬೆಳ್ತಂಗಡಿ ಐಬಿ ರಸ್ತೆಯ ಖಾಸಗಿ ಕಟ್ಟಡದ ಸುತ್ತ ತೆರೆದ ಚರಂಡಿ ಕಿರಿಕಿರಿ..!
ಬೆಳ್ತಂಗಡಿ : ಇಲ್ಲಿನ ತಾಲೂಕು ಆಡಳಿತ ಸೌಧದ ಬಳಿ ಕಂದಾಯ ನಿರೀಕ್ಷಕರ ಸರಕಾರಿ ಕಚೇರಿಯೂ ಇರುವ ಖಾಸಗಿ ವಾಣಿಜ್ಯ ಸಂಕೀರ್ಣವೊಂದರ ಸುತ್ತಲೂ ರಸ್ತೆ ಬದಿ ಮುಚ್ಚಲಾಗಿದ್ದ ಚರಂಡಿಯ ಚಪ್ಪಡಿ ಕಲ್ಲುಗಳನ್ನು ಯಾವುದೇ ಮುನ್ಸೂಚನೆ ನೀಡದೆ ಜೆಸಿಬಿಯಿಂದ ದಿಡೀರ್ ಅಗೆದು ಹಾಕಲಾಗಿದ್ದು ಪಟ್ಟಣ ಪಂಚಾಯತ್ ಆಡಳಿತದ ಈ ನಿಯಮ ಬಾಹಿರ ಕಾಮಗಾರಿಯ ಹಿಂದೆ ಅಡಗಿರುವ ಉದ್ದೇಶವಾದರೂ ಏನೆಂಬ ಪ್ರಶ್ನೆ ಇದೀಗ ನಾಗರಿಕರಲ್ಲಿ ಮೂಡಿದೆ.
ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಆವರಣ ಗೋಡೆಯ ಬಳಿ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ‘ವಿಘ್ನೇಶ್ ಸಿಟಿ’ ಕಾಂಪ್ಲೆಕ್ಸ್ ನ ಮುಂಭಾಗದ ಮತ್ತು ಕೋರ್ಟ್ ರಸ್ತೆ ಬದಿಯ ಭಾಗದ ಖಾಸಗಿ ಪಟ್ಟಾ ಸ್ಥಳದಲ್ಲಿರುವ ಚರಂಡಿಯ ಕಲ್ಲುಗಳನ್ನು ಪಟ್ಟಣ ಪಂಚಾಯತ್ ಅಗೆದಿದ್ದು ಚರಂಡಿ ದುರಸ್ತಿಗೋ? ಬೇರೇನೂ ಅಭಿವೃದ್ಧಿ ಕೆಲಸ ಇಲ್ಲದ್ದಕ್ಕೋ ? ಅಥವಾ ನಾಗರಿಕರಿಗೆ ತೊಂದರೆ ಕೊಡುವುದಕ್ಕೋ ? ಎಂಬ ನಾಗರಿಕರ ಪ್ರಶ್ನೆಗಳಿಗೆ ಪಟ್ಟಣ ಪಂಚಾಯತ್ ಅಧಿಕಾರಿಗಳೇ ಉತ್ತರಿಸಬೇಕಾಗಿದೆ.
ಇನ್ನೊಂದೆಡೆ ಈ ಚರಂಡಿ ಕಾಮಗಾರಿ ಆರಂಭಿಸುವ ಬಗ್ಗೆ ಪಟ್ಟಣ ಪಂಚಾಯತ್ ನಿರ್ಣಯವೊಂದು ಬಿಟ್ಟರೆ ನಿಯಮಾನುಸಾರ ಬೇರೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎನ್ನಲಾಗುತ್ತಿದೆ.
ಪಟ್ಟಣ ಪಂಚಾಯತ್ ವರ್ಕ್ ಆರ್ಡರ್ ಇಲ್ಲದೆ ಗುತ್ತಿಗೆದಾರ ಅಕ್ರಮವಾಗಿ ಚರಂಡಿಗೆ ಜೆಸಿಬಿ ಇಳಿಸಿದ್ದೇ? ಹಾಗಾದರೆ ಗುತ್ತಿಗೆದಾರ ಕಾಮಗಾರಿ ಮಾಡಿರುವುದೇ ಅಕ್ರಮವೇ? ಎಂಬುದು ನಾಗರಿಕರ ಪ್ರಶ್ನೆ. ಒಂದು ವೇಳೆ ದುರಸ್ತಿ ಅಥವಾ ನಿರ್ವಹಣೆಯ ಹೆಸರಲ್ಲಿ
ಈ ಕಟ್ಟಡದ ಸುತ್ತಲಿನ ಚರಂಡಿಯನ್ನು ಜೆಸಿಬಿಯಿಂದ ಅಗೆಯುತ್ತಿರುವುದಾದರೆ ನಗರದ ಹೋಟೆಲ್ ಗಳ ಮುಂದಿನ ಚರಂಡಿಗಳನ್ನಾಗಲಿ, ನದಿಗೆ ನೇರವಾಗಿ ತ್ಯಾಜ್ಯ ನೀರು ಬಿಡುತ್ತಿರುವ ಬಾರ್ ಎಂಡ್ ರೆಸ್ಟೋರೆಂಟ್ ಗಳ ಸುತ್ತಲಿನ ಚರಂಡಿಗಳನ್ನಾಗಲಿ ಮತ್ತು ಬೇರೆ ವಾಣಿಜ್ಯ ಸಂಕೀರ್ಣಗಳ ಸುತ್ತಲಿನ ಪರಿಸರ ಕೆಡಿಸುತ್ತಿರುವ ಚರಂಡಿಗಳನ್ನಾಗಲಿ ಯಾಕೆ ಅಗೆದು ದುರಸ್ತಿ ಮಾಡಲಿಲ್ಲ ಎಂಬುದೇ ಪ್ರಶ್ನೆ.
ನಗರದಲ್ಲಿ ಸರ್ವ ಋತುಗಳಿಗೆ ತಕ್ಕಂತೆ ನಿರ್ವಹಣೆ ಮಾಡ ಬೇಕಾದ ಚರಂಡಿಗಳನ್ನು ಮಳೆಗಾಲ ಪೂರ್ವದಲ್ಲಾಗಲಿ, ಮಳೆಗಾಲದಲ್ಲಾಗಲಿ ನಿರ್ವಹಣೆ ಮಾಡಲು ಪುರುಸೊತ್ತಿಲ್ಲದ ಪ. ಪಂ. ಆಡಳಿತಕ್ಕೆ ವರ್ಷಕ್ಕೆ ಸುಮಾರು 5 ಲಕ್ಷ ರೂ ಆದಾಯ ಕೊಡುವ ಈ ವಾಣಿಜ್ಯ ಸಂಕೀರ್ಣದ ಮುಂಭಾಗದ ಚರಂಡಿಯ ಬಗ್ಗೆ ದಿಡೀರ್ ವಿಪರೀತ ಕಾಳಜಿ ಮೂಡಲು ಕಾರಣವೇನೋ..!?
ಈ ವಾಣಿಜ್ಯ ಸಂಕೀರ್ಣದಲ್ಲಿ ತ್ಯಾಜ್ಯ ನೀರು ನಿರ್ವಹಣೆಗೆ ಫಿಲ್ಟರ್ ಯಂತ್ರ ಅಳವಡಿಸಲಾಗಿದೆ.
ಆದರೆ ತ್ಯಾಜ್ಯ ನೀರಿನ ನಿರ್ವಹಣೆಗಾಗಿ ಇಂಥ ಫಿಲ್ಟರ್ ಅಳವಡಿಸದ ಇತರ ವಾಣಿಜ್ಯ ಸಂಕೀರ್ಣ, ಹೋಟೆಲ್, ಬಾರ್ ಗಳ ಕಳಪೆ ಚರಂಡಿಗಳನ್ನು ಜೆಸಿಬಿಯಲ್ಲಿ ಅಗೆಯಲು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಯಾಕೆ ಹಿಂಜರಿಕೆ ಎಂದು ನಾಗರಿಕರು ಕೇಳುತ್ತಿದ್ದಾರೆ. ಜೊತೆಗೆ ಪಟ್ಟಣ ಪಂಚಾಯತ್ ಪಕ್ಕದಲ್ಲೇ ಇರುವ ವಾಣಿಜ್ಯ ಕಟ್ಟಡದ ಚರಂಡಿ ಸಮರ್ಪಕವಾಗಿದೆಯೇ? ಎಂಬ ಪ್ರಶ್ನೆಯೂ ಇದೆ.
ಐಬಿ ರಸ್ತೆಯ ಕಟ್ಟಡದ ಎದುರಿನ ರಸ್ತೆಯ ಹಂಪ್ಸ್ ಚರಂಡಿ ಅಂದರೆ
ಈ ಕಟ್ಟಡದ ಎದುರಿನ ಪ್ರವಾಸಿ ಮಂದಿರ ರಸ್ತೆಯ ಅಡಿಯಲ್ಲಿ ಅಡ್ಡಲಾಗಿ ಇರುವ ಚರಂಡಿ ಬ್ಲಾಕ್ ಆಗಿ ಮಳೆಗಾಲದಲ್ಲಿ ನೀರು ನಿಂತು ತೊಂದರೆಯಾಗುತ್ತಿದ್ದರೂ ಇದೇ ರಸ್ತೆಯಲ್ಲಿ ದಿನ ನಿತ್ಯ ಪಟ್ಜಣ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಹತ್ತಾರು ಸಲ ಓಡಾಡಿದರೂ ಈ ಬಗ್ಗೆ ನಿರ್ಲಕ್ಷ್ಯವಹಿಸಲಾಗುತ್ತಿದೆ, ಕೆಲವು ವರ್ಷಗಳ ಹಿಂದೆ ನಡೆದ ಈ ರಸ್ತೆ ಮಧ್ಯೆ ಇರುವ ಚರಂಡಿ ಕಾಮಗಾರಿ ಮಾತ್ರ ಸಂಪೂರ್ಣ ಅವೈಜ್ಞಾನಿಕವಾಗಿರುವುದು ತಿಳಿಯದ ವಿಚಾರವೇನಲ್ಲ. ಈ ರಸ್ತೆಯ ವೈಜ್ಞಾನಿಕ ಕಾಮಗಾರಿಯ ಮೂಲಕ ಶಾಶ್ವತ ನಿರ್ವಹಣೆಗೂ ಮುಂದಾಗದ ಪಟ್ಟಣ ಪಂಚಾಯತ್ ಆಡಳಿತ ಇದೀಗ ನಗರದ ಸ್ವಚ್ಛತೆ ಕೆಡಿಸುವ ಇತರ ಎಲ್ಲಾ ಚರಂಡಿಗಳನ್ನು ಬಿಟ್ಟು ಇದೊಂದೇ ಕಟ್ಟಡದ ಸುತ್ತಲಿನ ಚರಂಡಿಯನ್ನು ಮಾತ್ರ ಗುರಿ ಮಾಡಿ ಅಗೆಯುತ್ತಿರಲು ಕಾರಣವೇನು? ಒತ್ತಡವೇನು? ಎಂಬ ಪ್ರಶ್ನೆಗಳು ಕೇಳಿ ಬರುತ್ತಿದ್ದು ಈ ಸಂಕೀರ್ಣದ ಬಾಡಿಗೆದಾರರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಕಟ್ಟಡದಲ್ಲಿ ಕಂದಾಯ ನಿರೀಕ್ಷಕರ ಮತ್ತು ಗ್ರಾಮಕರಣಿಕರ ಕಚೇರಿ, 4 ಬ್ಯಾಂಕ್ ಗಳು, ವಕೀಲರು, ಇಂಜಿನಿಯರ್ ಗಳ ಕಚೇರಿಗಳು ಇತ್ಯಾದಿ ಸೇರಿ ಸುಮಾರು 40 ಬಾಡಿಗೆದಾರರಿದ್ದು ಸುಮಾರು 300 ರಿಂದ 350 ಮಂದಿ ಈ ಕಟ್ಟಡದಲ್ಲಿ ಉದ್ಯೋಗಿಗಳಿರಬಹುದು.
ಕಂದಾಯ ನಿರೀಕ್ಷಕರ, ಗ್ರಾಮಕರಣಿಕರ ಕಚೇರಿಗಳಿಗೆ ದಿನ ನಿತ್ಯ ವಯಸ್ಕರು, ಮಹಿಳೆಯರು ಸೇರಿ ನೂರಾರು ಜನರು ತಮ್ಮ ಅಗತ್ಯಗಳಿಗೆ ಬರುವಾಗ ಇಲ್ಲಿ ಕಟ್ಟಡದ ಸುತ್ತಲೂ ಸ್ಲ್ಯಾಬ್ ಕಲ್ಲುಗಳನ್ನು ಅಗೆದು ತೆಗೆದು ಚರಂಡಿಯನ್ನು ತೆರೆದಿಡಲಾಗಿದ್ದು ವಯಸ್ಕರಿಗೆ, ಮಹಿಳೆಯರಿಗೆ ಚರಂಡಿ ದಾಟುವುದು ತೊಂದರೆಯಾಗಲಿದೆ ಎಂಬ ದೂರುಗಳು ಕೇಳಿ ಬಂದಿದ್ದು ಈ ಕಾಮಗಾರಿಗೆ ಪಟ್ಟಣ ಪಂಚಾಯತ್ ಯಾವ ರೀತಿಯಲ್ಲಿ ಸುಖಾಂತ್ಯ ನೀಡಲಿದೆ ಎಂಬುದನ್ನು ಕಾದು ನೋಡ ಬೇಕಾಗಿದೆ.
Post Comment