ಪುಂಜಾಲಕಟ್ಟೆ-ಚಾರ್ಮಾಡಿ ನ್ಯಾಷನಲ್ ಹೈವೇ ಕಾಮಗಾರಿಗೆ ಬೆಳ್ತಂಗಡಿಯಲ್ಲಿ ‘ನಾಗದೋಷ’!!



ಬೆಳ್ತಂಗಡಿ : ಪ್ರಾರಂಭದಲ್ಲಿ ಪ್ರತಿಷ್ಠಿತ ಡಿ.ಪಿ.ಜೈನ್ ಕಾಮಗಾರಿ ಕಂಪೆನಿಯ ವಶದಲ್ಲಿದ್ದ ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಾಗಾರಿಯನ್ನು ಒಂದು ನಾಟಕೀಯ ಬೆಳವಣಿಗೆಯಲ್ಲಿ
ಬ್ಯಾಕ್ ಟು ಬ್ಯಾಕ್ ಹೆಸರಿನಲ್ಲಿ ಕೆಲವು ಸಮಯಗಳ ಹಿಂದೆ ಮುಗ್ರೋಡಿ ಕನ್ಸ್ಟ್ರಕ್ಷನ್ ಕಂಪೆನಿಗೆ ಬಲವಂತದ ಮದುವೆಯಂತೆ ವಹಿಸಿಕೊಡಲಾಗಿದ್ದು ಹೈವೇ ಕಾಮಗಾರಿ ವೇಗ ಪಡೆದುಕೊಂಡು ಸಾಗುತ್ತಿರುವಾಗಲೇ ಇದೀಗ ಬೆಳ್ತಂಗಡಿ ನಗರದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಾಗನ ಕಲ್ಲಿನ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಬೆಳ್ತಂಗಡಿ ನಗರದ ಹಳೆಕೋಟೆಯ ಸತ್ಯಸಾಯಿ ಮಂದಿರದ ಮುಂಭಾಗದಲ್ಲಿ ಜೆಸಿಬಿ ಮೂಲಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮುಂದಾದ ಸಂದರ್ಭ ಧಾವಿಸಿ ಬಂದ ಸ್ಥಳೀಯ ಸಿ.ಹೆಚ್. ಪ್ರಭಾಕರ ಎಂಬ ಖಾಸಗಿ ವ್ಯಕ್ತಿ ಈ ಜಾಗ ನನಗೆ ಸೇರಿದೆ, ಇಲ್ಲಿ ನಾಗನ ಕಲ್ಲು ಇದೆ, ಸದ್ಯದಲ್ಲೇ ನಾಗ ಪೂಜೆ ನಡೆಯಲಿದೆ ಇಲ್ಲಿ ಕಾಮಗಾರಿ ಮಾಡಬೇಡಿ ಬೇಲಿಯನ್ನು ತೆಗೆಯಬೇಡಿ ಎಂದು ಕಾರ್ಮಿಕರನ್ನು ಬೆದರಿಸಿ ಕಾಮಗಾರಿಗೆ ಅಡ್ಡಿಪಡಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಮೂಲತ: ಸತ್ಯಸಾಯಿ ಮಂದಿರದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯುದ್ದಕ್ಕೂ ಇರುವ ಜಾಗವು ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವೆಂಬುದಕ್ಕೆ ಹಾಗೂ ಯಾವುದೇ ಖಾಸಗಿ ಜಾಗವಲ್ಲ ಎಂಬುದಕ್ಕೆ ಹೈಕೋರ್ಟ್ ತೀರ್ಪಿನ ದಾಖಲೆಯೇ ಪುರಾವೆಯಾಗಿದೆ.
ಸತ್ಯಸಾಯಿ ಮಂದಿರದ ಹೆಸರಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯುದ್ದಕ್ಕೂ ಇರುವ ಪಿ.ಡಬ್ಲ್ಯು.ಡಿ. ಜಾಗಕ್ಕೆ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ಸಿ.ಹೆಚ್.ಪ್ರಭಾಕರ್ ಇದೀಗ “ಮೂಲು ನಾಗನ ಕಲ್ಲುಂಡು” ಎಂಬ ಹೊಚ್ಚ ಹೊಸ ನಾಟಕ ಆರಂಭಿಸಿದ್ದು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಲು ಗುರುತು ಮಾಡಿರುವ ಪಿ.ಡಬ್ಲ್ಯೂ.ಡಿ. ಜಾಗದಲ್ಲಿ ಎಲ್ಲಿಂದಲೋ ಹೆಕ್ಕಿಕೊಂಡು ಬಂದ ನಾಗನ ಕಲ್ಲು ನೆಟ್ಟು ಮುಗ್ರೋಡಿ ಕನ್ಸ್ಟ್ರಕ್ಷನ್ ನ ಅಧಿಕಾರಿಗಳಿಗೆ ನಾಗ ಭಯ ಹುಟ್ಟಿಸಿ ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದು ತಿಳಿದು ಬಂದಿದೆ.
ಯಾವುದೇ ಕಾನೂನಿನ ಭಯವಿಲ್ಲದೆ, ಸರಿಕಾರಿ ನಿಯಮಗಳ ಮೇಲೆ ಗೌರವವಿಲ್ಲದೆ ನಿರಾತಂಕವಾಗಿ ಹಂತ ಹಂತವಾಗಿ ಕಬಳಿಸಿಕೊಂಡಿರುವುದು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೂ ಗೊತ್ತಿದೆ, ಪಟ್ಟಣ ಪಂಚಾಯತ್ ಅಧಿಕಾರಿಗಳೂ ಕಣ್ಣಾರೆ ಕಂಡಿದ್ದಾರೆ.
ಅಕ್ರಮವಾಗಿ ಬೇಲಿ ಹಾಕಿಕೊಂಡು ಸಾಮಾನ್ಯ ಪ್ರಜ್ಞೆ ಇಲ್ಲದವರಂತೆ
ವಿಲಕ್ಷಣವಾಗಿ ವರ್ತಿಸುತ್ತಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಂಪೆನಿಯ ಅಧಿಕಾರಿಗಳು ಹಾಗೂ ಕಾರ್ಮಿಕರಗಳಲ್ಲಿ ದಬಾಯಿಸುವ ಧಾಟಿಯಲ್ಲಿ ಮಾತನಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು
ವಿವರಿಸುತ್ತಾರೆ. ಸಿ.ಹೆಚ್. ಪ್ರಭಾಕರ್ ಸತ್ಯಸಾಯಿಯ ಪರಮ ಭಕ್ತನೆಂದು ಹೇಳಿಕೊಳ್ಳುತ್ತಲೇ ಇನ್ನೊಂದೆಡೆ ನಾಗರಿಕ ಪೀಡಕನಾಗಿ ಹಳೆಕೋಟೆಯ ನಿವಾಸಿಗಳಿಗೆ ನಿರಂತರ ಭೂಕಿರುಕುಳ ನೀಡುತ್ತಿದ್ದು ಪೊಲೀಸ್ ಠಾಣೆಗೆ, ತಹಶೀಲ್ದಾರರಿಗೆ, ಪಟ್ಟಣ ಪಂಚಾಯತ್ ಆಡಳಿತಕ್ಕೆ ಈತನ ಭೂಕಿರುಕುಳದ ವಿರುದ್ಧ ಅನೇಕ ಲಿಖಿತ ದೂರುಗಳು ಆಯಾ ಅಧಿಕಾರಿಗಳ ಕಪಾಟಿನಲ್ಲಿ ಧೂಳು ಹಿಡಿಯುತ್ತಿದೆ. ಎಂಥಾ ಅಧಿಕಾರಿಗಳ ಮುಂದೆಯೂ ಸತ್ಯದ ಕಪಾಳಕ್ಕೆ ಹೊಡೆದಂತೆ ಸುಳ್ಳು ಹೇಳಿ ಜಾರಿಕೊಳ್ಳುವ ಜಾಯಮಾನ ಈ ವ್ಯಕ್ತಿಯಾಗಿದ್ದು ಈತನ ಸುಳ್ಳುಗಳ ಹಾವಳಿಯಿಂದ ಸತ್ಯಸಾಯಿ ಮಂದಿರದ ಸುತ್ತಮುತ್ತಲಿನ ಸತ್ಯಗಳು ನಿತ್ಯವೂ ಸಾಯುತ್ತಿದೆ ಎಂಬ ಆರೋಪಗಳು ನಿಜವೆನಿಸುತ್ತಿದೆ.
ರಾಷ್ಟ್ರೀಯ ಹೆದ್ದಾರಿಗೆ ಗುರುತು ಮಾಡಿದ ಜಾಗದ ಬದಿಯಲ್ಲಿ ಇತ್ತೀಚೆಗೆ ಮೆಸ್ಕಾಂ ಇಲಾಖೆ ಹಾಕಿದ ವಿದ್ಯುತ್ ಕಂಬಗಳನ್ನು ತನ್ನ ಜಾಗವೆಂದು ಒಳಗೆ ಹಾಕಿಕೊಂಡು ಬೇಲಿ ಹಾಕಿಕೊಂಡಿರುವ ಈತನ ಅಕ್ರಮ ಅಟ್ಟಹಾಸಕ್ಕೆ ಕೆಲವು ಜನಪ್ರತಿನಿಧಿಗಳು , ಅಧಿಕಾರಿಗಳು, ಪೊಲೀಸರು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು ಈತನ ಕಾಟದಿಂದ ನೊಂದವರು ಪಟ್ಟಣ ಪಂಚಾಯತ್ ಗೆ ದೂರು ಕೊಟ್ಟರೂ ಕೆಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು
“ನಾವೇನೂ ಮಾಡಕ್ಕಾಗಲ್ಲ, ಇದೊಂದು ವಿಷಯದಲ್ಲಿ ನೀವೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಬೇಕಷ್ಟೆ ಅಂತ ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.
ಅದು ಸರಕಾರಿ ಜಾಗವಾಗಿರಲಿ, ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವಾಗಿರಲಿ, ಅಥವಾ ಖಾಸಗಿ ಜಾಗವೇ ಆಗಿರಲಿ ತನಗೆ ಸೇರಿದ ಜಾಗವೆಂದು ರಾತ್ರಿ ಬೆಳಗಾಗುವುದರೊಳಗೆ
ಹಂತ ಹಂತವಾಗಿ ಬೇಲಿಯನ್ನು ಮುಂದುವರಿಸಿ ಕಬಳಿಸುವ ಬಗ್ಗೆ ಟ್ರೈನಿಂಗ್ ಸೆಂಟರ್ ತೆರೆಯುವಷ್ಟು
ಭೂಕಬಳಿಕೆ ಚತುರನಾಗಿದ್ದು ಇದಕ್ಕೆ ಆಗಾಗ ಹೆದ್ದಾರಿಯತ್ತ ಮುನ್ನುಗ್ಗಿ ಬರುವ ಈತನ ಅಕ್ರಮ ಬೇಲಿಗಿಂತ ಬೇರೆ ಸಾಕ್ಷಿಯೇ ಬೇಕಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಈತನಿಂದ ಇತ್ತೀಚೆಗಷ್ಟೇ ಕೋಮಾ ಸ್ಥಿತಿಗೆ ತಲುಪಿದ ಶ್ರೀ ರಾಮ ಕೊ.ಆಪರೇಟಿವ್ ಸೊಸೈಟಿಯಲ್ಲಿ ಅಧ್ಯಕ್ಷನಾಗಿರುವಾಗ ‘ಉಂಗುರ’ ತೋರಿಸಿ ವಿರೋಧಿಗಳ ಬಾಯಿ ಮುಚ್ಚಿಸುತ್ತಿದ್ದ ಪ್ರಭಾಕರ್ ಇದೀಗ ನಾಗನಕಲ್ಲು ಹಾಕಿ ಹೈವೇ ಕಾಮಗಾರಿಗೆ ಅಡ್ಡಿ ಪಡಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಏಕೆಂದರೆ ಈತನಿಂದ ತೊಂದರೆಗೊಳಗಾಗಿ ಬೇರೆ ಅಧಿಕಾರಿಗಳಿಗೆ ದೂರುಗಳನ್ನು ಕೊಟ್ಟರೂ ನ್ಯಾಯಕ್ಕಾಗಿ ಅಲೆದಾಡಿ ನೆಮ್ಮದಿ ಕಳೆದುಕೊಂಡು ದಿನದೂಡುತ್ತಿರುವ ಸಂತ್ರಸ್ತರ ಪಟ್ಟಿಯೇ ಹಳೆಕೋಟೆ ಪರಿಸರದಲ್ಲಿದೆ.
ಸತ್ಯಸಾಯಿಯ ನೈಜ ಸೇವಕನೊಬ್ಬ ಈ ರೀತಿ ಜನ ಕಂಟಕನಾಗಿ ಮೆರೆಯಲು ಹೇಗೆ ಸಾಧ್ಯ ಎಂಬುದೇ ಸತ್ಯ ಸಾಯಿಯ ನೈಜ ಭಕ್ತರ ಪ್ರಶ್ನೆಯಾಗಿದ್ದು ಈತನ ಕಾನೂನು ಬಾಹಿರ ಅನ್ಯಾಯ, ಅಟ್ಟಹಾಸವನ್ನು ಕೇಳುವವರೇ ಇಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

Post Comment