ಪಟ್ಟಣ ಪಂಚಾಯತ್ ಚರಂಡಿ ದಾಟುವ ವೇಳೆ ಕುಸಿದು ಬಿದ್ದ ಮಹಿಳೆ: ಸೊಂಟ,ಕಾಲಿಗೆ ಏಟು, ಆಸ್ಪತ್ರೆ ಗೆ ದಾಖಲು
ಬೆಳ್ತಂಗಡಿ : ಐಬಿ ರಸ್ತೆಯ ಖಾಸಗಿ ವಾಣಿಜ್ಯ ಸಂಕೀರ್ಣದ ಮುಂದೆ ಪಟ್ಟಣ ಪಂಚಾಯತ್ ತೆರೆದಿಟ್ಟ ಚರಂಡಿ ದಾಟುವ ವೇಳೆ ಹಿರಿಯ ಮಹಿಳೆಯೊಬ್ಬರು ಕುಸಿದು ಬಿದ್ದು ಕಾಲು ನೋವಿನಿಂದ ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಲಕ್ಷ್ಮಿ ಎಂಬವರು ಚರಂಡಿ ದಾಟುವ ವೇಳೆ ಕಾಲ್ಜಾರಿ ಬಿದ್ದಿದ್ದಾರೆ.
ನೋಟರಿ ವಕೀಲರೊಬ್ಬರ ಕಚೇರಿಗೆ ಮಗಳೊಂದಿಗೆ ಬಂದಿದ್ದ ಮಹಿಳೆ ಚರಂಡಿ ದಾಟಿ ಬರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸೊಂಟ ಮತ್ತು ಕಾಲಿಗೆ ಗಂಭೀರ ಏಟು ಬಿದ್ದಿದ್ದು ಸ್ಥಳದಲ್ಲಿದ್ದ ನಾಗರಿಕರು ಅವರನ್ನು ಮೇಲೆತ್ತಿ ಕುರ್ಚಿಯಲ್ಲಿ ಕೂರಿಸಿದರು.
ಕಾಲು ನೋವು ಸಹಿಸಿಕೊಳ್ಳಲಾಗದೆ ಅಳುತ್ತಿದ್ದ ಮಹಿಳೆಯನ್ನು ವಿಶ್ರಾಂತಿಯ ಬಳಿಕ ಮಗಳು ಮತ್ತು ನಾಗರಿಕರ ಸಹಕಾರದಿಂದ ಅಟೋ ರಿಕ್ಷಾದಲ್ಲಿ ಕರೆದೊಯ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ವಾಣಿಜ್ಯ ಕಟ್ಟಡ ಮಾಲಕರು ಕಾನೂನು ಮೀರಿದ್ದು ಕಟ್ಟಡ ನಿಯಮ ಪಾಲಿಸಿಲ್ಲ, ಸಮರ್ಪಕ ಚರಂಡಿಯನ್ನೂ ಮಾಡಿಲ್ಲ ಎಂಬ ಏಕೈಕ ನೆಪದಲ್ಲಿ ಈ ಹಿಂದೆ ಮುಚ್ಚಲಾಗಿದ್ದ ಚರಂಡಿಯನ್ನು ತೆರೆದು
ಹಾಗೆ ಬಿಟ್ಟು ಎರಡು ತಿಂಗಳುಗಳಾಗುತ್ತಾ ಬಂತು, ಕಟ್ಟಡದ ಮುಂದೆ ಕಟ್ಟಡ ಮಾಲಕರೇ ಚರಂಡಿ ವ್ಯವಸ್ಥೆ ಮಾಡಬೇಕು ಅದು ಪಟ್ಟಣ ಪಂಚಾಯತ್ ಆಡಳಿತದ ಜವಾಬ್ದಾರಿಯಲ್ಲ ಎಂದು ಕಟ್ಟಡ ಮಾಲಕರತ್ತ ಬೆರಳು ತೋರಿಸುತ್ತಾ ಚರಂಡಿ ತೆರೆದಿಟ್ಟು ಕೈಕಟ್ಟಿ ಕುಳಿತು ಚಂದ ನೋಡುತ್ತಿದೆ ಎಂಬ ದೂರುಗಳಿವೆ.
ಇತ್ತ ಕಟ್ಟಡ ಮಾಲಕರು ಯಾವುದೇ ಗೊಡವೆಯೇ ಇಲ್ಲದೆ ಇತ್ತ ತಲೆಯೂ ಹಾಕದೆ , ಬಾಡಿಗೆದಾರರ ಸಂಕಷ್ಟ ಕೇಳದೆ ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.
ಕಟ್ಟಡ ಮಾಲಕರು ಮತ್ತು ಪಟ್ಟಣ ಪಂಚಾಯತ್ ಆಡಳಿತದ ಬೇಜವಾಬ್ದಾರಿಯಿಂದ ನಾಗರಿಕರು ಮಾನಸಿಕ ಹಿಂಸೆ ಅನುಭವಿಸುವಂತಾಗಿದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
Post Comment